Malenadu Mitra
ರಾಜ್ಯ ಶಿವಮೊಗ್ಗ

ಸಮಾನತೆ ಹೇಳುವ ಸಂವಿಧಾನ ಮನುವಾದಿಗಳಿಗೆ ಇಷ್ಟವಿಲ್ಲ:ಸಿದ್ದರಾಮಯ್ಯ

ಕನ್ನಡದ ಆಸ್ಮಿತೆಗೆ ಧಕ್ಕೆ ಉಂಟು ಮಾಡುವ ಕೆಲಸ ನಡೆಯುತ್ತಿದ್ದು, ಅದರ ವಿರುದ್ಧದ ಜನಾಂದೋಲನದ ಇಂದಿನ ಅಗತ್ಯ ಎಂದು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಯಲ್ಲಿ ಕುವೆಂಪು ವಿಶ್ವ ಮಾನವ ವೇದಿಕೆ ಆಯೋಜಿಸಿದ್ದ ಪಠ್ಯ ಪುಸ್ತಕ ತಿರುಚಿ ನಾಡುನುಡಿಗೆ ಅವಮಾನ ಮಾಡಿರುವುದನ್ನು ವಿರೋಧಿಸಿ ಕುಪ್ಪಳ್ಳಿಯಿಂದ ತೀರ್ಥಹಳ್ಳಿ ಯ ರವರೆಗೆ ನಡೆದ ಕಾಲ್ನಡಿಗೆ ಜಾಥಾದ ಸಮಾರೋಪ ಸಮಾರಂಭದಲ್ಲಿ ಅವರು ಹೇಳಿದರು.
ಈ ಹಿಂದೆ ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಹಲವು ಹೋರಾಟ ನಡೆದಿವೆ. ಪ್ರಸ್ತುತ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಅಗುತ್ತಿದೆ. ಕುವೆಂಪು, ಬಸವಣ್ಣ, ಅಂಬೇಡ್ಕರ್ ಚರಿತ್ರೆಯನ್ನು ತಿರುಚುವ ಕೆಲಸ ಅಗಿದೆ.ತಿರುಚುವ ಚರಿತ್ರೆಯನ್ನು ಮಾಡಿದವರು ಯಾರು. ಬಸವಣ್ಣ ವೈಧಿಕ ಧರ್ಮದ ಪರ್ಯಾಯವಾಗಿಯೇ ಮನುಷ್ಯ ಧರ್ಮವನ್ನು ಹುಟ್ಟುಹಾಕಿದರು. ಅದುವೇ ಲಿಂಗಾಯತ ಧರ್ಮ. ಅಸಮಾನತೆಯ ವಿರುದ್ಧ ಹೋರಾಟ ಮಾಡಿದವರು ಬಸವಣ್ಣ.  ಆದರೆ  ಇಂದು ಮತ್ತೆ ವೈಧಿಕ ಧರ್ಮದ ಕಡೆ ಸೆಳೆಯಲಾಗುತ್ತಿದೆ ಎಂದರು.
ಸಂವಿಧಾನ ಇಂದು ಸಮಾನತೆಯನ್ನು ಸಾರುತ್ತಿದೆ. ಅಂಬೇಡ್ಕರ್ ಕರಡು ಸಂವಿಧಾನಕ್ಕೆ ನೇಮಕವಾಗದಿದ್ದರೇ ಉತ್ತಮ ಸಂವಿಧಾನ ಸಿಗ್ತಾ ಇರಲಿಲ್ಲ. ಆರ್ ಎಸ್ ಎಸ್ ಮತ್ತು  ಅದರ ಅಂಗ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ.ಸಮಾನತೆ ಹೇಳುವ ಸಂವಿಧಾನ ಮನುವಾದಿಗಳಿಗೆ ಇಷ್ಟವಿಲ್ಲ ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ಜಾತಿ ಕೆಳಜಾತಿಯನ್ನ ತುಳಿಯುತ್ತಲೇ ಇರುತ್ತೆ. ಸಮಾನತೆ ಸುಮ್ಮನೆ ಬರೋದಿಲ್ಲ. ಜಾತಿ ವ್ಯವಸ್ಥೆ  ಬಹಳ ಆಳವಾಗಿ ಬೇರುಬಿಟ್ಟಿದೆ. ಬಸವಣ್ಣನ ವಚನದ ರೀತಿಯಲ್ಲಾಗಲಿ ಬದಲಾವಣೆ ಆಗಿಲ್ಲ. ಅನೇಕ ಜನ ವಚನ ಹೇಳಿ ಜಾತಿಯನ್ನ ಅನುಸರಿಸುತ್ತಾರೆ. ಇಂತಹವರಿಂದ ಮಾನವೀಯ ಮೌಲ್ಯ, ದೇಶಭಕ್ತಿಯನ್ನ ಬೆಳೆಸಲು ಸಾಧ್ಯವಾ ಎಂದು ಪ್ರಶ್ನಿಸಿದರು.
 ಟಿ.ಟಿ.ಕೃಷ್ಣಮಾಚಾರಿ ಅವರು ಅಂಬೇಡ್ಕರ್ ಅವರನ್ನು  ಸಂವಿಧಾನ ಶಿಲ್ಪಿ ಎಂದು ಕರೆದಿದ್ದಾರೆ ಆದರೆ, ಸರ್ಕಾರ ರೋಹಿತ್ ಚಕ್ರತೀರ್ಥರ ಮೂಲಕ ಸಂವಿಧಾನ ಶಿಲ್ಪಿಯನ್ನ ತೆಗೆಸಿತು. ಹಾಗಾದ್ರೇ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ವಾ?. ಅಂಬೇಡ್ಕರ್‌ರಿಗೆ ಸಂವಿಧಾನ ಶಿಲ್ಪಿ ಎಂದು ಕರೆಯದೇ ಇರುವುದು ವಿಕೃತ ಮನಸ್ಸು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಇದರ ವಿರುದ್ಧ ಕನ್ನಡದ ಮನಸ್ಸುಗಳು ಒಂದಾಗಬೇಕಿದೆ. ಬೊಮ್ಮಾಯಿ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನ ವಿಸರ್ಜಿಸಿದೆ.ಆದರೆ, ಪಠ್ಯಪುಸ್ತಕವನ್ನ ತಿರಸ್ಕರಿಸಿಲ್ಲ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದರು.
ಶಿಕ್ಷಣ ಸಚಿವ ನಾಗೇಶ್ ಮತ್ತು ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಇಬ್ಬರೂ ಅಸಮರ್ಥ ಸಚಿವರು. ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರರಂತ ಅಸಮರ್ಥ ಗೃಹಮಂತ್ರಿಯನ್ನ ನಾನು ಕಂಡೇ ಇಲ್ಲ. ೪೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾರನ್ನು ಕಂಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
 ವಿಪಕ್ಷ  ನಾಯಕ  ಬಿ ಕೆ  ಹರಿಪ್ರಸಾದ್ ಮಾತನಾಡಿ, ಬಿಜೆಪಿಯಿಂದ ನಾಡಗೀತೆಗೆ ಅವಮಾನವಾಗಿದೆ. ನಾಡಗೀತೆಯನ್ನು ನಾಗಪುರ ಮತ್ತು  ಹಾವಿನಪುರದಲ್ಲಿ ಬರೆದಿಲ್ಲ. ಅದನ್ನು  ಬರೆದಿದ್ದು ರಾಷ್ಟ್ರ  ಕವಿ ಕುವೆಂಪು ಎಂದು ಹೇಳಿದರು.
ಮೆಕಾಲೆ  ಭೂತ  ಬಿಜೆಪಿ  ಪಕ್ಷಕ್ಕೆ  ಹಿಡಿದಿದೆ. ಬಸವಣ್ಣ  ಮತ್ತು  ಕುವೆಂಪು  ನಾಡಿನಲ್ಲಿ ಬಿಜೆಪಿಯಿಂದ ವಿಷಬೀಜ ಬಿತ್ತಲಾಗುತ್ತಿದೆ. ಹಿಂದಿ ಭಾಷೆಯನ್ನ ಹೇರಲು ಹೊರಟಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಮಾಡಲು  ಹೊರಟಿರುವುದು  ತಪ್ಪು ಎಂದು ಹೇಳಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಬುದ್ದ,ಬಸವ ಅಂಬೇಡ್ಕರ್, ಕುವೆಂಪು ದೇವನೂರು ಮಹಾದೇವನರಂತಹ ಮಹನೀಯರಿಗೆ ಟ್ಯುಟೋರಿಯಲ್ ನಡೆಸುವಾತನಿಂದ ಅವಮಾನ ಮಾಡಿಸಲಾಗಿದೆ ಎಂದು ದೂರಿದರು.
ಸಂವಿಧಾನ ಜಾರಿಗೆ ಬಂದ ಮೇಲೆ ಶ್ರೇಷ್ಠತೆಗೆ ಬೀಗ ಬಿತ್ತು. ಈಗ ಅದನ್ನು ಕುಂದಿಸುವ ಕೆಲಸವಾಗುತ್ತಿದೆ.  ಗಾಂಧಿಯವರನ್ನು ಕೊಂದ ಗೋಡ್ಸೆ ಮೋದಲು ಗಾಂಧಿಯವರಿಗೆ ನಮಸ್ಕರಿಸಿ ನಂತರ ಗುಂಡಿಟ್ಟು ಕೊಂದರು. ಅದೇ ರೀತಿ ನಮ್ಮ ಪ್ರಧಾನಿ ಸಂಸತ್ತಿಗೆ ನಮಸ್ಕರಿಸಿ, ಇಂತಹ ಜನರನ್ನು ಸಂವಿಧಾನ ಕೊಲ್ಲಲು ಬಿಟ್ಟಿದ್ದಾರೆಂದರು.
ಸಮಾವೇಶದಲ್ಲಿ ಸಂಗೀತ ನಿದೇಶಕ ಹಂಸಲೇಖ, ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ನಾ.ಡಿಸೋಜ , ಪ್ರೊ.ರಾಜೇಂದ್ರ ಚೆನ್ನಿ, ಮಾಜಿ ಶಾಸಕ ವೈ ಎಸ್ ವಿ ದತ್ತಾ, ಕೆ.ಬಿ ಪ್ರಸನ್ನ ಕುಮಾರ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್,ಶಾಸಕ ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್,ಎಸ್ ಸುಂದರೇಶ್, ರೈತ ಮುಖಮುಖಂಡರಾದ ಕೆ.ಟಿ ಗಂಗಾಧರ್, ಹೆಚ್.ಆರ್ ಬಸವರಾಜಪ್ಪ, ಡಿ.ಎಸ್.ಎಸ್  ಮುಖಂಡ ಗುರುಮೂರ್ತಿ, ಕಡಿದಾಳ್  ದಯಾನಂದ, ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಬಿಜೆಪಿಗೆ ಬಹುತ್ವದಲ್ಲಿ ನಂಬಿಕೆ ಇಲ್ಲ :ಬಿ.ಕೆ. ಹರಿಪ್ರಸಾದ್ ವಾಗ್ದಾಳಿ.
 

ತೀರ್ಥಹಳ್ಳಿ:   ಪಠ್ಯ ಪುಸ್ತಕಗಳು ಈ ದೇಶದ ನೆಲ ಜಲದ ಮಹಾನ್ ಸಾಧಕರ ಜೀವನವನ್ನು ಕಟ್ಟಿಕೊಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತವೆ. ಯಾವಾಗಲು ಪಠ್ಯ ಪುಸ್ತಕವನ್ನು ಸಮರ್ಥರಾದ ಶಿಕ್ಷಣ ತಜ್ಞರು, ಸಮಾಜಪರ ಚಿಂತಕರು ರೂಪಿಸಬೇಕು. ಪುಂಡು ಪೋಕರಿಗಳೆಲ್ಲ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಕೊಂಡರೆ ಸಮಾಜದಲ್ಲಿ ಅಶಾಂತಿ ಉಂಟಾಗುವುದು ಸಹಜ, ಪಠ್ಯ ಪುಸ್ತಕ ವಾಪಸ್ಸು ಪಡೆಯುವ ತನಕ ಹೋರಾಟ ಮುಂದುವರಿಯಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ  ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
 ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಯಾವ ಶಿಕ್ಷಣ ತಜ್ಞನೂ ಅಲ್ಲ ಈತ ನಾಗಪುರ ಯೂನಿವರ್ಸಿಟಿ ಕೊಡುಗೆ ಅಷ್ಟೇ. ಅವರಿಗೆ ಯಾವತ್ತೂ ಈ ದೇಶದ ಸಂವಿಧಾನ ಬಹುಸಂಸ್ಕೃತಿಯ, ಜೀವನ ಪದ್ಧತಿಯ ವಿವಿಧತೆಯಲ್ಲಿ ಏಕತೆ ಎಂಬ ತತ್ವದಲ್ಲಿ ನಂಬಿಕೆಯೇ ಇಲ್ಲ. ಅದು ಪದೇ ಪದೇ ಸಾಬೀತಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲೂ ಕೂಡ ಸಮಾಜ ವಿರೋಧಿ ಧೋರಣೆಯನ್ನು ಮುಂದುವರಿಸಲಾಗಿದೆ ಎಂದು ಹರಿಹಾಯ್ದರು.
ಗೃಹಸಚಿವ ಆರಗ ಜ್ಞಾನೇಂದ್ರ ಕುರಿತು ಮಾತನಾಡಿದ ಅವರು ಆರಗ ಜ್ಞಾನೇಂದ್ರ ರಾಜ್ಯ ಇಲ್ಲಿಯವರೆಗೆ ಕಂಡಂತ ಅತ್ಯಂತ ದುರ್ಬಲ ಗೃಹಮಂತ್ರಿ. ಅವರಿಗೆ ನೈತಿಕತೆ ಇದ್ದಿದ್ದರೆ ಅವರ ಸುಪರ್ದಿಯಲ್ಲಿ ಬರುವ ಪಿ.ಎಸ್.ಐ ನೇಮಕಾತಿ ಹಗರಣದಲ್ಲಿ ಇಷ್ಟು ಹೊತ್ತಿಗಾಗಲೇ ರಾಜಿನಾಮೆ ನೀಡಬೇಕಿತ್ತು. ಮೈಸೂರು ಅತ್ಯಾಚಾರ ಪ್ರಕರಣ, ಶಿವಮೊಗ್ಗ ಗಲಭೆ, ಪೊಲೀಸ್ ಕುರಿತಾದ ಅಗೌರವ ಹೇಳಿಕೆಯಲ್ಲಿ ಅವರ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ಅಲ್ಲದೇ ಕುವೆಂಪು ಇಡೀ ದೇಶದ ಆಸ್ತಿ ವಿಪರ್ಯಾಸ ಎಂದರೆ ಕುವೆಂಪುರನ್ನು ನಿಂದಿಸಿದಾಗ ಅವರ ತಾಲ್ಲೂಕು ಹಾಗೂ ಜಿಲ್ಲೆಯವರಾಗಿ ಖಂಡಿಸಬಹುದಿತ್ತು. ಆದರೆ ಆರಗ ಜ್ಞಾನೇಂದ್ರ ಮೌನವಾಗಿರುವ ಮೂಲಕ ಕುವೆಂಪುಗೆ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೇ ಪರೋಕ್ಷವಾಗಿ ರೋಹಿತ್ ಚಕ್ರತೀರ್ಥನ ಆಲೋಚನೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
 ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಅವರು ೭೦ ವರ್ಷ ಕಾಂಗ್ರೆಸ್ ಕಷ್ಟಪಟ್ಟು ಬೆಳೆಸಿದ ದೇಶವನ್ನು ಮೋದಿ ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಸದಾಕಾಲ ಧರ್ಮದ ಅಮಲಿಗೆ ಯುವಜನತೆಯನ್ನು ದೂಡುತ್ತಾ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ. ಬುಲ್ಡೋಜರ್ ಸಂಸ್ಕೃತಿ ದೇಶದ ಎಲ್ಲಾ ಕಡೆ ಕಂಡುಬರುತ್ತಿದೆ. ಈಗ ನೂಪೂರ್ ಶರ್ಮಾ, ಜಿಂದಾಲ್ ಎಂಬ ಅವಿವೇಕಿಗಳು ಎಬ್ಬಸಿದ ರಾದ್ದಾಂತವನ್ನು ಮರೆಮಾಚಲು ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುನ್ನೆಲೆಗೆ ತಂದು ರಾಹುಲ್ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿ ಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಹೋರಾಟದಿಂದ ಎದ್ದು ಬಂದ ಪಕ್ಷ ಓಡಿ ಹೋಗುವ ಪ್ರಶ್ನೆ ಇಲ್ಲ ಎಂದರು.

ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ನಾಯಕತ್ಬದ ಗೊಂದಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನು ಜನರು ನೋಡಿಕೊಳ್ಳುತ್ತಾರೆ. ಪ್ರಜಾಪ್ರಭುತ್ವದ ಅಂತಸತ್ವ ಇರುವುದೇ ಪ್ರಶ್ನೆ ಮಾಡುವುದರಲ್ಲಿ ಹೇಳಿದನ್ನೆಲ್ಲಾ ಒಪ್ಪುವ ನಾಗಪುರ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ. ಹಾಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಸಹಜ ಎಂದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ನಾಯಕ ಆರ್.ಎಂ. ಮಂಜುನಾಥ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಟಿ.ಎಲ್. ಸುಂದರೇಶ್ ಇದ್ದರು.

ಕುವೆಂಪು, ಬಸವಣ್ಣರಿಗೆ ಅವಮಾನವಾದರೆ ಸಹಿಸಲಾಗದು: ಹಂಸಲೇಖ

ತೀರ್ಥಹಳ್ಳಿ,ಜೂ.೧೫: ನಾಡಿನ ಆದರ್ಶ ಪುರುಷರಾದ ಬಸವಣ್ಣ ಮತ್ತು ಕುವೆಂಪು ಅವರನ್ನು ಅವಮಾನಿಸುವುದನ್ನು ಕರ್ನಾಟಕದ ಜನರು ಸಹಿಸುವುದಿಲ್ಲ. ಈ ಪ್ರತಿಭಟನೆಯು ಕನ್ನಡ ಭಾಷೆ ಮತ್ತು ಧ್ವಜವನ್ನು ಅವಮಾನಿಸಿದವರಿಗೆ ಬಲವಾದ ಸಂದೇಶವನ್ನು ನೀಡುತ್ತದೆ” ಎಂದು ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಹೇಳಿದರು. ಬಿಜೆಪಿ ಬೆಂಬಲಿತ ಟ್ರೋಲರ್ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ವಿರೋಧಿಸಿ, ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಸ್ಮಾರಕವಾದ ಕವಿಶೈಲದಲ್ಲಿ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪ್ರತಿಭಟನಾ ರ್‍ಯಾಲಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
“ಹಿಂದೆ ಗೋಕಾಕ್ ಚಳುವಳಿ ನಡೆದಿತ್ತು. ಇದು  ಕುಪ್ಪಳ್ಳಿ ಕಹಳೆ. ಕುವೆಂಪು ಅಂದರೆ ಕನ್ನಡ, ಬಸವಣ್ಣ ಅಂದರೆ ಕರ್ನಾಟಕ. ಈಗ ಅವರುಗಳಿಗೇ ಕುತ್ತು ಬಂದಿದೆ ಅಂದಮೇಲೆ ನಾವಿದ್ದು ಮಾಡುವುದೇನು. ಇದು ನಾಡಿನಾದ್ಯಂತ ಮೊಳಗಬೇಕಿದೆ. ನಮ್ಮ ನಾಡು, ನಾಡಗೀತೆ ಎರಡಕ್ಕೂ ಅವಮಾನವಾಗಿದೆ. ಹೀಗಾಗಿ ಇದರ ವಿರುದ್ಧ ನಿರಂತರ ಹೋರಾಟ ನಡೆಯಬೇಕಿದೆ” ಎಂದು ಹಂಸಲೇಖ ಅಭಿಪ್ರಾಯಪಟ್ಟರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಅಂಕಣಕಾರ ಬಿ.ಚಂದ್ರೇಗೌಡ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಚಕ್ರತೀರ್ಥ ನೇತೃತ್ವದ ಪರಿಷ್ಕರಣಾ ಸಮಿತಿ ಕುವೆಂಪು, ಬಸವಣ್ಣ ಸೇರಿದಂತೆ ನಾಡಿನ ಹಲವು ಮಹನೀಯರಿಗೆ ಅಪಮಾನ ಮಾಡಿದ್ದು, ಹೀಗಾಗಿ ಅವರು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕೆಂದು ರ್‍ಯಾಲಿಯಲ್ಲಿ ಒತ್ತಾಯಿಸಲಾಯಿತು.
ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ನಾಗರೀಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಪಕ್ಷಾತೀತವಾಗಿ ಹೋರಾಟವನ್ನು ರೂಪಿಸಲಾಗಿದ್ದು ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವಿದ್ಯಾರ್ಥಿ- ಯುವಜನ- ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕ ಜನಪರ ಸಂಘಟನೆಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದವು.

Ad Widget

Related posts

ಶಾಸಕ ಹಾಲಪ್ಪ ಪುತ್ರಿ ವಿವಾಹ, ವಧುವರರನ್ನು ಹರಸಿದ ಮುಖ್ಯಮಂತ್ರಿ

Malenadu Mirror Desk

ವಾಹನ ಜಖಂ: ಇಬ್ಬರು ಆರೋಪಿಗಳ ಬಂಧನ

Malenadu Mirror Desk

ದೇವಸ್ಥಾನ ಸ್ವತಂತ್ರವಾದರೆ ಡಿಕೆಶಿಗೆ ಏಕೆ ಉರಿ: ಈಶ್ವರಪ್ಪ ಕಿಡಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.