Malenadu Mitra
ರಾಜ್ಯ ಶಿವಮೊಗ್ಗ

ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ : ಘಟಿಕೋತ್ಸವದಲ್ಲಿ ರಾಜ್ಯಪಾಲರ ಅಭಿಮತ

ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಇರಬೇಕು ಎಂದು ರಾಜ್ಯಪಾಲ ಹಾಗೂ ಕುವೆಂಪು ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ಗುರುವಾರ ಕುವೆಂಪು ವಿವಿ ಆವರಣದಲ್ಲಿ ಆಯೋಜಿಸಿದ್ದ ೩೧, ೩೨ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಪದವಿ ಪಡೆದ ವಿದ್ಯಾರ್ಥಿಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ಪದವಿ ಮುಗಿದ ಮೇಲೆ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೇ ಅಧ್ಯಯನಶೀಲರಾಗಿ ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ತೊಡಗಿ ಇದೆಲ್ಲಕ್ಕೂ ಗುಣಮಟ್ಟದ ನೈತಿಕ ಶಿಕ್ಷಣ ಬೇಕಾಗಿದೆ ಎಂದರು.
ರಾಷ್ಟ್ರಕವಿ ಕುವೆಂಪು ಹೆಸರೇ ವಿಶ್ವವಿದ್ಯಾಲಯಕ್ಕೆ ಪ್ರೇರಣಾ ಶಕ್ತಿಯಾಗಿದೆ. ಕುವೆಂಪು ವಿವಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಾನು ಕುವೆಂಪು ವಿವಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು.
ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳು ಕೂಡ ಸಿಗುತ್ತಿಲ್ಲ. ಆದರೆ, ದಿವ್ಯಾಂಗರ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಪದಕಗಳು ಬರುತ್ತಿರುವುದು ಸ್ವಾಗತದ ವಿಷಯವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗೌರವ ಡಾಕ್ಟರೇಟ್ ಪದವಿ ಪಡೆದವರು ಆಯಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆ ವ್ಯರ್ಥವಾಗಬಾರದು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸಾಧನೆ ಮಾಡಬೇಕು. ಅವರ ತಿಳಿವಳಿಕೆ ಜ್ಞಾನ ಯುವ ಪೀಳಿಗೆಗೆ ಪ್ರೇರಣೆಯಾಗಿರಬೇಕು ಎಂದರು.
ಘಟಿಕೋತ್ಸವ ಭಾಷಣವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಶ್ರೀದೇವಿ ಸಿಂಗ್ ನೆರವೇರಿಸಿದರು. ಕುಲಪತಿ ಪ್ರೊ. ಬಿ. ಪಿ ವೀರಭದ್ರಪ್ಪ, ಕುಲಸಚಿವೆ ಅನುರಾಧ, ಪರೀಕ್ಷಾಂಗ ಕುಲಚಿವ ಪ್ರೊ. ನವೀನ್‌ಕುಮಾರ್ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಹಾಜರಿದ್ದರು.

6 ಸಾಧಕರಿಗೆ ಗೌರವ ಡಾಕ್ಟರೇಟ್‌
ಘಟಿಕೋತ್ಸವದಲ್ಲಿ ೬ ಸಾಧಕರಿಗೆ ಗೌರವ ಡಾಕ್ಟರೇಟ್‌ನ್ನು ರಾಜ್ಯಪಾಲ ಗೆಹ್ಲೋಟ್ ಪ್ರದಾನ ಮಾಡಿದರು.. ಡಿ. ಎಚ್. ಶಂಕರಮೂರ್ತಿ, ಗೀತಾ ನಾರಾಯಣನ್, ಭ. ಮ. ಶ್ರೀಕಂಠ, ಪ್ರೊ. ತೇಜಸ್ವಿ ಕಟ್ಟಿಮನಿ, ಮಾಲತೇಶ್ ಕಿವುಡಸಣ್ಣವರ್ ಮತ್ತು ಬಾ ಸು ಅರವಿಂದ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ಮತ್ತು ಗೌರವ ಡಾಕ್ಟರೆಟ್‌ನ ಫಲಕ ನೀಡಿ ಗೌರವಿಸಲಾಯಿತು.

ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ, ಅಧ್ಯಯನ ಮನೋಭಾವಕ್ಕೆ ಹತ್ತಿರವಾಗುತ್ತದೆ. ಜೊತೆಗೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪ್ರೇರಕ ಮತ್ತು ಪೂರಕವಾಗುತ್ತದೆ

ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲ ಹಾಗೂ ಕುವೆಂಪು ವಿವಿ ಕುಲಾಧಿಪತಿ

ಆಸಕ್ತಿ, ಆತ್ಮಸ್ಥೈರ್‍ಯ ಅಗತ್ಯ

ಆಸಕ್ತಿ ಮತ್ತು ಆತ್ಮಸ್ಥೈರ್‍ಯದಿಂದ ಅಧ್ಯಯನ ನಡೆಸಿದರೆ ಸಾಧನೆ ಸಾಧ್ಯ. ಇದಕ್ಕೆ ಯಾರ ಒತ್ತಡದ ಅವಶ್ಯಕತೆಯೂ ಇರುವುದಿಲ್ಲ ಎಂದವರು ಕುವೆಂಪು ವಿವಿಯ ೩೧ನೆಯ ಘಟಿಕೋತ್ಸವದಲ್ಲಿ ಕನ್ನಡ ವಿಷಯದಲ್ಲಿ ೮ ಚಿನ್ನದ ಪದಕ ಗಳಿಸಿದ ಎನ್. ಪಿ. ಪ್ರಣೀತಾ.
ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುಗಳ ಸಹಕಾರ ಮತ್ತು ಮನೆಯವರ ಬೆಂಬಲ ಸತತ ನನಗೆ ಸಿಕ್ಕಿತ್ತು. ಆದರೆ ಯಾರೂ ಇಷ್ಟು ಹೊತ್ತು ಓದು ಎಂದು ಒತ್ತಾಯ ಮಾಡಲಿಲ್ಲ. ಗ್ರಂಥಾಲಯವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದೇನೆ. ನನ್ನ ಅರಿವು ಹೆಚ್ಚಲು ಇದೇ ಕಾರಣ ಎಂದರು.

ಪ್ರಯತ್ನಕ್ಕೆ ಯಶಸ್ಸಿದೆ

ನನಗೆ ರ್‍ಯಾಂಕ್ ಬರುವ ವಿಶ್ವಾಸವಿತ್ತು. ಆದರೆ ೧೧ ಬಂಗಾರದ ಪದಕ ಲಭ್ಯವಾಗುತ್ತದೆ ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ನನ್ನ ಪ್ರಯತ್ನಕ್ಕೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಗ್ರಾಮೀಣ ಪ್ರದೇಶವಾದ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಿಂದ ಬಂದ ನಾನು ಓದಿದ್ದು ಸರಕಾರಿ ಶಾಲೆಯಲ್ಲಿ. ಅದರಲ್ಲೂ ಕನ್ನಡ ಮಾಧ್ಯಮದಲ್ಲಿ. ಆನಂತರವೂ ಕಾಲೇಜಿನಲ್ಲಿ ಕನ್ನಡ ವಿಷಯವನ್ನೇ ಪ್ರಧಾನವಾಗಿ ತೆಗೆದುಕೊಂಡು ಅದರಲ್ಲಿ ಸಾಧನೆ ಮಾಡಿದ್ದೇನೆ ಎಂದವರು ಘಟಿಕೋತ್ಸವದಲ್ಲಿ ೧೧ ಚಿನ್ನದ ಪದಕ ಸ್ವೀಕರಿಸಿದ ದಿವ್ಯಾ.
ನನಗೆ ಕೆಎಎಸ್ ಓದಬೇಕೆಂಬ ಆಸೆ ಇದೆ. ಈಗಾಗಲೇ ಹಲವು ಉದ್ಯೋಗಗಳಿಗೂ ಅರ್ಜಿ ಸಲ್ಲಿಸಿದ್ದೇನೆ. ಪಿಎಚ್‌ಡಿ ಮಾಡಬೇಕೆಂಬ ಆಸೆ ಇದೆ. ಸಾಧನೆಗೆ ಗುರುಹಿರಿಯರು ಮತ್ತು ಮನೆಯವರೆಲ್ಲರೂ ಕಾರಣ ಎಂದರು.

Ad Widget

Related posts

ಬಿಎಸ್‌ವೈಗೆ ನಮ್ಮೊಲುಮೆಯ ಭಾವಾಭಿನಂದನೆ

Malenadu Mirror Desk

ಒಂದು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕಸಿಗಂದೂರು ನವರಾತ್ರಿ ಉತ್ಸವದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ

Malenadu Mirror Desk

ಸ್ಮಾರ್ಟ್‌ ಸಿಟಿ ಕಾಲುವೆ ಸ್ಲ್ಯಾಬ್‌ ಕುಸಿದು ವ್ಯಕ್ತಿ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.