ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಘದ ಕರೆಯ ಮೇರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪೌರ ಕಾರ್ಮಿಕರು ಬೇಡಿಕೆ ಈಡೇರಿಸದಿದ್ದರೆ ಜು.೨ರಿಂದ ಫ್ರೀಡಂ ಪಾರ್ಕ್(ಹಳೆ ಜೈಲು ಆವರಣ)ನಲ್ಲಿ ಹಾಗೂ ತಾಲೂಕುವಾರು ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ನೇರಪಾವತಿ ಪೌರ ಕಾರ್ಮಿಕರು, ಹೊರಗುತ್ತಿಗೆ ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಹೆಲ್ಪರ್ಸ್ ಹಾಗೂ ಮನೆಮನೆ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ನೇರಪಾವತಿ ಪಾವತಿ ಪೌರ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರಿದ್ದು, ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ವಿಶ್ರಾಂತಿ ಗೃಹ, ವೈದ್ಯಕೀಯ ಸೌಲಭ್ಯವನ್ನು ಪ್ರಸ್ತು ನೀಡುತ್ತಿಲ್ಲ ಎಂದು ದೂರಿದರಲ್ಲದೇ, ಈ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಈ ಕ್ಷಣದಿಂದಲೇ ಜಾರಿಗೊಳಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ಪೌರ ಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಕಾಯಂ ಕಾರ್ಮಿಕರಿಗೆ ಸೀಮಿತ ಮಾಡಿ ಶೇ. 85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಕೂಡಲೇ ನೇರಪಾವತಿ ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ವಿಧದ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ತವ್ಯ ನಿರ್ವಹಿಸಿ 60 ವರ್ಷ ಸೇವೆ ಪೂರ್ಣಗೊಳಿಸಿ ನಿವೃತ್ತರಾಗುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳಿಲ್ಲದೇ ಬರಿಗೈಯಲ್ಲಿ ಹೋಗುತ್ತಿದ್ದು, ಇಂತಹ ಕಾರ್ಮಿಕರಿಗೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಮಾಸಿಕ 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು. ಆರೋಗ್ಯ ಕಾರ್ಡ್ ಕೊಡಬೇಕು. ನೇರ ಪಾವತಿ ಪೌರ ಕಾರ್ಮಿಕರು ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದಲ್ಲಿ ಆ ಕುಟುಂಬದ ಒಬ್ಬರಿಗೆ ನೇರ ಪಾವತಿ ಪೌರ ಕಾರ್ಮಿಕರಾಗಿ ಅಥವಾ ಹೊರಗುತ್ತಿಗೆ ನೌಕರರಾಗಿ ಉದ್ಯೋಗ ನೀಡಬೇಕೆಂರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಸಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್, ಜಿಲ್ಲಾ ಖಜಾಂಚಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ಎಸ್. ನಾಗರಾಜ್, ರವಿಕಿರಣ್, ಸುದೀಪ್, ಗಣೇಶ್, ಶಿವರಾಜ್, ಕಿರಣ್, ಡಿಎಸ್‌ಎಸ್ ಗುರುಮೂರ್ತಿ ಮೊದಲಾದವರಿದ್ದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಜಿಲ್ಲಾ ಡಿಎಸ್‌ಎಸ್, ಮಾನವ ಹಕ್ಕು ಸಂಘಟನೆ, ಪ್ರಗತಿಪರ ಸಂಘಟನೆ, ಮಹಿಳಾ ಸಂಘಗಳು, ಆಮ್ ಆದ್ಮಿ ಪಾರ್ಟಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಿವೆ.
ಬೇಡಿಕೆ ಈಡೇರುವವರೆಗೆ ಸ್ವಚ್ಛತಾ ಕಾರ್ಯ ಮತ್ತಿತರ ಎಲ್ಲಾ ಕೆಲಸಗಳನ್ನು ನಿಲ್ಲಿಸಿದ್ದು, ಇದರಿಂದ ನಗರದ ನಾಗರಿಕರಿಗೆ ಕುಡಿಯುವ ನೀರು ಸ್ವಚ್ಛತೆ ಸೇರಿ ಎಲ್ಲಾ ಸೇವೆಗಳ ಮೇಲೂ ಪರಿಣಾಮ ಬೀರಲಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು.
–ಪೆಂಚಾಲಯ್ಯ ವಿ. ಜಿಲ್ಲಾಧ್ಯಕ್ಷ