ಕುಖ್ಯಾತ ರೌಡಿ ಅಣ್ಣಿ ಆಲಿಯಾಸ್ ಹಂದಿ ಅಣ್ಣಿ (೩೫)ಯನ್ನು ಶಿವಮೊಗ್ಗ ವಿನೋಬನಗರದ ಪೊಲೀಸ್ ಚೌಕಿಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬೆಳಗ್ಗೆ ೧೧ ಗಂಟೆ ಸುಮಾರಿಗೆ ಬಂದ ಆರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆ ಮೇಲೆ ದಾಳಿ ನಡೆಸಿ ಪರಾರಿಯಾದರೆಂದು ಪೊಲೀಸ್ ಮೂಲಗಳು ತಿಳಿಸಿದೆ. ಅಣ್ಣಿ ಚಲನವಲನ ಗಮನಿಸುತ್ತಲೇ ಬಂದಿದ್ದ ದುಷ್ಕರ್ಮಿಗಳ ತಂಡ ಇನ್ನೋವಾ ಕಾರಿನಲ್ಲಿ ಬಂದು ಜನನಿಬಿಡ ಸ್ಥಳದಲ್ಲಿಯೇ ಅಣ್ಣಿಯ ಮೇಲೆ ಅಟ್ಯಾಕ್ ಮಾಡಿದ್ದಾರೆನ್ನಲಾಗಿದೆ.
ಶಿವಮೊಗ್ಗದ ನಟೋರಿಯಸ್ ಅವಳಿ ರೌಡಿಗಳಾಗಿದ್ದ ಲವ-ಕುಶರನ್ನು ಶಿವಮೊಗ್ಗದ ಪ್ರವಾಸಿ ಮಂದಿರದ ಎದುರು ಕೆಲ ವರ್ಷಗಳ ಹಿಂದೆ ಕೊಚ್ಚಿ ಕೊಲೆ ಮಾಡುವ ಮೂಲಕ ಕ್ರೈಂ ಲೋಕದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಅಣ್ಣಿ ಹಲವು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಲವಕುಶ ಕೊಲೆಯು ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಅಣ್ಣಿ ಕೊಲೆಗೆ ರಿಯಲ್ ಎಸ್ಟೇಟ್ ಸಂಬಂಧಿತ ವ್ಯಾಜ್ಯ ಕಾರಣ ಎನ್ನಲಾಗಿದೆ. ಎದುರಾಳಿ ರೌಡಿ ಗ್ಯಾಂಗಿನ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಅರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೆ ಶಿವಮೊಗ್ಗದ ಸಿದ್ದೇಶ್ವರ ಸರ್ಕಲ್‌ನಲ್ಲಿ ಅಣ್ಣಿಯ ಸಹೋದರನ ಕೊಲೆಯಾಗಿತ್ತು.
ಕೆಲ ವರ್ಷಗಳಿಂದ ತಣ್ಣಗಿದ್ದ ಶಿವಮೊಗ್ಗ ರೌಡಿಸಂ ಅಣ್ಣಿ ಕೊಲೆಯಿಂದ ಮತ್ತೆ ಚಿಗಿತುಕೊಂಡಿದೆ.