Malenadu Mitra
ರಾಜ್ಯ ಶಿವಮೊಗ್ಗ

ಜಿಲ್ಲೆಯಲ್ಲಿ 397ಮನೆಗಳು ಹಾನಿ, ತಕ್ಷಣದ ಪರಿಹಾರಕ್ಕೆ ಕಂದಾಯ ಅಧಿಕಾರಿಗಳಿಗೆ ಸೂಚನೆ : ಡಾ.ಆರ್.ಸೆಲ್ವಮಣಿ

ಮಳೆಹಾನಿಯಿಂದ ಆಸ್ತಿ-ಪಾಸ್ತಿ ನಷ್ಟವಾಗಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಿವಮೊಗ್ಗಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಾರಿ ಮಳೆಯಾಗಿದ್ದು,ಕೋಟ್ಯಂತರ ರೂ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ ಎಂದರು.
ಮಳೆಯಿಂದ ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ತಲಾ ಒಂದೊಂದು ಜೀವಹಾನಿ ಪ್ರಕರಣ, ಜಿಲ್ಲೆಯಲ್ಲಿ 8 ಜಾನುವಾರು ಸಾವು ಪ್ರಕರಣಗಳು ದಾಖಲಾಗಿದ್ದು, ಸಂತ್ರಸ್ಥರಿಗೆ ಪರಿಹಾರ ಧನ ನೀಡಲಾಗಿದೆ ಎಂದರು.
ಆಸ್ತಿ-ಪಾಸ್ತಿ ನಾಶವಾಗಿರುವ ಕುಟುಂಬಗಳಿಗೆ ತಕ್ಷಣದ ಪರಿಹಾರ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪರಿಹಾರ ಧನ ದೊರೆಯದಿರುವ ಕುಟುಂಬಗಳಿಗೆ ಸಹಾಯಧನ ವಿತರಿಸಲು ಕಂದಾಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈವರೆಗೆ 397ಮನೆಗಳು ಹಾನಿಗೊಳಗಾಗಿದ್ದು, ಅವುಗಳ ಪೈಕಿ 30 ಮನೆಗಳು ಪೂರ್ಣಪ್ರಮಾಣದಲ್ಲಿ, 626ಮನೆಗಳು ಭಾಗಶಃ, 98 ಮನೆಗಳು ತೀವ್ರತರಹದ ಹಾನಿಗೊಳಗಾಗಿವೆ. ಸುಮಾರು 774 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮತ್ತು ಮೆಕ್ಕೆಜೋಳದ ಬೆಳೆ ಹಾನಿಗೊಳಗಾಗಿವೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಆಗಿರುವ ಬೆಳೆಯ ಪೂರ್ಣ ಪ್ರಮಾಣದ ಮಾಹಿತಿ ಪಡೆದು, ನಷ್ಟದ ಪರಿಹಾರಧನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಲ್ಲದೇ 258ಕಿ.ಮೀ. ರಸ್ತೆ, 546 ವಿದ್ಯುತ್ ಕಂಬಗಳು ಹಾಗೂ 6 ಟ್ರಾನ್ಸ್ಫಾರ್ಮರ್‌ಗಳು, ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳು ನಾಶವಾಗಿವೆ ಎಂದರು.
ತುಂಗಾ ಮತ್ತು ಭದ್ರಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಿದೆ. ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನೀರನ್ನು ಜಲಾಶಯದಿಂದ ಹೊರಬಿಡಲು ಸೂಚಿಸಲಾಗಿದೆ. ಭದ್ರಾ ಜಲಾಶಯದಿಂದ ಪ್ರಸ್ತುತ ಪ್ರತಿನಿತ್ಯ ಸುಮಾರು 45,000ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಪಾತ್ರದಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲದೇ ಈ ಭಾಗದ ಜನರ ಸುರಕ್ಷತೆಗಾಗಿ ಭದ್ರಾವತಿಯಲ್ಲಿ ಒಟ್ಟು 04 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 400 ಮಂದಿ ಸಂತ್ರಸ್ಥರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ತಾತ್ಕಾಲಿಕ ವಸತಿ, ಔಷಧ ಹಾಗೂ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಆಗುಂಬೆ ರಸ್ತೆಯಲ್ಲಿ ಭೂಕುಸಿತ, ಮರಗಳು ಧರೆಗುರುಳಿರುವ ಬಗ್ಗೆ ಮಾಹಿತಿಯಿದ್ದು, ಈ ತಿಂಗಳ ಅಂತ್ಯದವರೆಗೆ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲದೇ ಪರ್ಯಾಯ ರಸ್ತೆ ಸಂಚಾರಕ್ಕೆ ಮಾರ್ಗ ಸೂಚಿಸಲಾಗಿದೆ. ಮಳೆಯಿಂದ ಜಿಲ್ಲೆಯ ಬೇರೆ-ಬೇರೆ ತಾಲೂಕುಗಳಲ್ಲಿ ಮರಗಳು ಉರುಳಿದ್ದಲ್ಲಿ ತೆರವುಗೊಳಿಸಲು ಸೂಚಿಸಲಾಗಿದೆ. ಅದಕ್ಕಾಗಿ ಅಗತ್ಯ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಅವರು ಉಪಸ್ಥಿತರಿದ್ದರು.

Ad Widget

Related posts

ಭೂಮಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಚಾಣಕ್ಯ ಸೇನೆ ಪ್ರತಿಭಟನೆ

Malenadu Mirror Desk

ಸಿಗಂದೂರು ದೇಗುಲ ಹೋಟೆಲ್ ಕಟ್ಟಡ ತೆರವಿಗೆ ಕೋರ್ಟ್ ಆದೇಶ

Malenadu Mirror Desk

ಚೋರಡಿ ಸೇತುವೆ ಸಮೀಪ ಮತ್ತೊಂದು ಅಪಘಾತ ಜಿಂಕೆ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.