Malenadu Mitra
ರಾಜ್ಯ ಶಿವಮೊಗ್ಗ

ಜಿಎಸ್‌ಟ್ಟಿ ಹೇರಿಕೆಯಿಂದ ಜನರಿಗೆ ದ್ರೋಹ : ಡಾ. ಶ್ರೀನಿವಾಸ್ ಕರಿಯಣ್ಣ

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಜಿ.ಎಸ್.ಟಿ. ಹೇರಿರುವುದು ಬಡ ಮತ್ತು ಮಧ್ಯಮ ವರ್ಗಕ್ಕೆ ಮಾಡಿದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಹೊರೆಯಾಗುವಂತೆ ತೆರಿಗೆ ಹೆಚ್ಚಿಸಿದೆ. ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ಅವರು ಹೇಗೆ ತಾನೇ ವಿರೋಧಿಸಲು ಸಾಧ್ಯ? ಬಡ ಮತ್ತು ಮಧ್ಯಮವರ್ಗದವರಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ತಕ್ಷಣವೇ ಅಗತ್ಯವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಡವರು, ದಿನ ನಿತ್ಯ ಉಪಯೋಗಿಸುವ ಮಜ್ಜಿಗೆ, ಲಸ್ಸಿ, ಅಕ್ಕಿ, ಗೋಧಿ, ಮೊಸರು, ಬಾರ್ಲಿ, ಬೆಲ್ಲ, ಜೇನುತುಪ್ಪದ ಮೇಲೆ ಶೇಕಡ ೫ ರಷ್ಟು ಜಿ.ಎಸ್.ಟಿ. ವಿಧಿಸಲಾಗಿದೆ. ಬ್ಯಾಂಕ್ ಗಳ ಚೆಕ್ ಪುಸ್ತಕಗಳ ಮೇಲೂ ಶೇಕಡ ೧೮ ರಷ್ಟು ಅವೈಜ್ಞಾನಿಕ ಜಿ.ಎಸ್.ಟಿ. ವಿಧಿಸಲಾಗಿದೆ. ನಮ್ಮದೇ ಹಣ ನಮ್ಮದೇ ಚೆಕ್ ಇದಕ್ಕೂ ಶೇಕಡ ೧೮ ರಷ್ಟು ತೆರಿಗೆ ಕಟ್ಟಬೇಕು ಎಂದರೆ ಏನರ್ಥ? ಅಲ್ಲದೇ, ಆಸ್ಪತ್ರೆಗಳ ಕೊಠಡಿಗಳ ಮೇಲೂ ಶೇಕಡ ೫ ರಷ್ಟು ಜಿ.ಎಸ್.ಟಿ. ವಿಧಿಸಲಾಗಿದೆ. ಜೊತೆಗೆ ರೈತರು ಬೆಳೆಯುವ ಹಣ್ಣು, ತರಕಾರಿ ಸೆಗ್ರಿಗೇಟ್ ಮಾಡಲು ಬಳಸುವ ಉಪಕರಣಗಳ ಮೇಲೂ ಶೇಕಡ ೫ ರಿಂದ ಶೇಕಡ ೧೮ ರಷ್ಟು ತೆರಿಗೆ ವಿಧಿಸಿ ತಾವು ರೈತ ವಿರೋಧಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.
ಇದರ ಜೊತೆಗೆ ಎಲ್‌ಇಡಿ ಬಲ್ಬ್ ಗಳು, ಸೋಲಾರ್ ವಾಟರ್ ಹೀಟರ್, ಬರೆಯಲು, ಮುದ್ರಿಸಲು ಇರುವ ಇಂಕ್ ಗಳ ಮೇಲೆ, ಮಕ್ಕಳು ಶಿಕ್ಷಣಕ್ಕಾಗಿ ಬಳಸುವ ಭೂಪಟಗಳು, ಗ್ಲೋಬ್ ಗಳ ಮೇಲೂ ಶೇಕಡ ೧೮ ರವರೆಗೆ ಜಿ.ಎಸ್.ಟಿ. ವಿಧಿಸಿ ಜನವಿರೋಧಿ ಸರ್ಕಾರ ಎಂದು ಸ್ಪಷ್ಟಪಡಿಸಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.


ಈಶ್ವರಪ್ಪರಿಗೆ ಕ್ಲೀನ್ ಚಿಟ್ ನೀಡಿರುವುದು ದುರಾದೃಷ್ಟಕರ:

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮತ್ತೋರ್ವ ಕಾಂಗ್ರೆಸ್ ಮುಖಂಡ ವೈ.ಹೆಚ್. ನಾಗರಾಜ್, ಶೇಕಡ ೪೦ ರ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್. ಈಶ್ವರಪ್ಪ ಅವರಿಗೆ ಉಡುಪಿ ಪೊಲೀಸರು ಕ್ಲೀನ್ ಚಿಟ್ ನೀಡಿರುವುದು ದುರಾದೃಷ್ಟಕರವಾಗಿದೆ. ಒಂದು ಕಡೆ ಗುತ್ತಿಗೆದಾರನ ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುತ್ತಿದ್ದರೆ, ಬಿಜೆಪಿಯವರು ಅದನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸರ್ಕಾರದ ಮೇಲೆ ನಂಬಿಕೆಯೇ ಹೊರಟುಹೋಗಿದೆ ಎಂದರು.
ಅಧಿಕಾರಿಗಳ ಮೇಲೆ ಮತ್ತು ಪ್ರಭಾವಿಗಳ ಮೇಲೆ ಒತ್ತಡ ಹಾಕಿರುವ ಈಶ್ವರಪ್ಪ ಅವರು, ಸಂತೋಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಫೋನ್ ನಲ್ಲಿದ್ದ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಲು ತಮ್ಮ ಪ್ರಭಾವ ಬಳಸಿಕೊಂಡಿದ್ದಾರೆ. ಗುತ್ತಿಗೆದಾರ ಆತ್ಮಹತ್ಯೆಗೆ ಮೊದಲು ಸ್ಪಷ್ಟವಾಗಿ ತನ್ನ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣ ಎಂದು ಹೇಳಿದ್ದರೂ ಪೊಲೀಸರು ಬಿ ರಿಪೋರ್ಟ್ ಹಾಕಿರುವುದು ಸಂಶಯಕ್ಕೆ ಕಾರಣವಾಗಿದೆ. ಇದು ಆದೇಶವೇನಲ್ಲ. ಸಂಭ್ರಮಪಡುವ ಅಗತ್ಯವೂ ಇಲ್ಲ. ಅವರ ಕುಟುಂಬಕ್ಕೆ ಗುತ್ತಿಗೆ ಹಣ ಕೊಡಿಸಲಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಿಪ್ಪೇಸ್ವಾಮಿ ಇದ್ದರು.

Ad Widget

Related posts

ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ಪುನಶ್ಚೇತನ : ಬಿ.ವೈ.ರಾಘವೇಂದ್ರ

Malenadu Mirror Desk

ಫೌಂಡ್ರಿಮೆನ್ ಸಂಘಟನೆಗೆ ಉದ್ಯಮಿ ಚಂದ್ರಶೇಖರ್ ಆಯ್ಕೆ, ಶಿವಮೊಗ್ಗ ಫೌಂಡೇಷನ್ ಸಂಘಟನೆಗಳಿಂದ ಸನ್ಮಾನ

Malenadu Mirror Desk

ಸೇತುವೆ-ರಸ್ತೆ ಕುಸಿತ : ಪರ್ಯಾಯ ಮಾರ್ಗ ವ್ಯವಸ್ಥೆ ಮಾರ್ಪಾಡು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.