ಧೋ ಎಂದು ಸುರಿಯುವ ಮಳೆಮಹಿಳೆಯರು ಸೇರಿದಂತೆ ಸಾವಿರಾರು ಜನರ ಮೆರವಣಿಗೆ, ಪ್ರತಿಯೊಬ್ಬರ ಕೈಯಲ್ಲೂ ರಾಷ್ಟ್ರಧ್ವಜ ಇದು ಸೊರಬ ಪಟ್ಟಣದಲ್ಲಿ ಗುರುವಾರ ಕಂಡುಬಂದ ದೃಶ್ಯ. 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸೊರಬ ತಾಲ್ಲೂಕಿನ ಬಿಳುವಾಣಿ ಗ್ರಾಮದಿಂದ ಆರಂಭವಾದ ನಡಿಗೆಯನ್ನು ಸೊರಬ ಪಟ್ಟಣದಲ್ಲಿ ಅಂತ್ಯಗೊಳಿಸಲಾಯಿತು. ನಡಿಗೆಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ರಾಷ್ಟ್ರಧ್ವಜವನ್ನು ಹಿಡಿದು ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯಲ್ಲಿ ಎಸ್. ಮಧುಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಮತ್ತು ಪುತ್ರ ಸೂರ್ಯ ಮಧು ಬಂಗಾರಪ್ಪ ಹೆಜ್ಜೆ ಹಾಕಿದರು. ಪಾದಯಾತ್ರೆ ಬರುವ ಮಾರ್ಗದ ಗ್ರಾಮಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಆರತಿ ಎತ್ತಿ ಶುಭ ಹಾರೈಸಿದರು.
ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜ್ ಸಮೀಪದಲ್ಲಿ ವಿದ್ಯಾರ್ಥಿನಿಯರು ಮಧು ಬಂಗಾರಪ್ಪ ಅವರಿಗೆ ರಾಖಿ ಕಟ್ಟಿದ್ದು ವಿಶೇಷವಾಗಿತ್ತು. ಮಳೆ-ಗಾಳಿಯ ನಡುವೆಯು ರಾಷ್ಟ್ರ ಧ್ವಜದೊಂದಿಗೆ ಸುಮಾರು ೧೫ ಕಿ.ಮೀ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು. ಪೊಲೀಸ್ ಇಲಾಖೆಯಿಂದ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಸೂಕ್ತ ಕ್ರಮ ಕೈಗೊಂಡು, ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಏಕತೆಗಾಗಿಪಾದಯಾತ್ರೆ:
ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾಗಿವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರು ಮತ್ತು ವೀರಯೋಧರ ನೆನಪಿಗಾಗಿ ಹಾಗೂ ತ್ಯಾಗ, ಬಲಿದಾನ, ದೇಶದ ಸಮಗ್ರತೆ, ಸಾಮರಸ್ಯ ಮತ್ತು ಸಮಾನತೆಯನ್ನು ಸಾರುವ ಅಗತ್ಯವಿದೆ. ಅದಕ್ಕಾಗಿಯೇ ಈ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು.
ಅನೇಕ ಪಾದಯಾತ್ರೆಗಳು, ಉಪವಾಸ ಸತ್ಯಾಗ್ರಹಗಳು ಸೇರಿದಂತೆ ಹಲವಾರು ಹೋರಾಟದ ಪ್ರತಿಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ರಾಷ್ಟ್ರ ಧ್ವಜ ಹಾಗೂ ಸಂವಿಧಾನಕ್ಕೆ ಅಗೌರವ ತೋರುವವರಿಗೆ ಬದಲಾವಣೆ ಮಾಡುವ ಶಕ್ತಿ ಸಾಮಾನ್ಯ ಜನತೆಗಿದೆ. ದೇಶದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವವರು ಪ್ರಸ್ತುತ ಮನೆ ಮನೆಗಳಿಗೆ ರಾಷ್ಟ್ರ ಧ್ವಜ ನೀಡುತ್ತಿದ್ದಾರೆ. ದೇಶ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಗೌರವ ತೋರದವರ ವಿರುದ್ಧ ಮಹಾತ್ಮ ಗಾಂಧಿಯವಂತೆ ಶಾಂತಿಯುತ ಹೋರಾಟ ಮಾಡುವುದು ತಿಳಿದಿದೆ ಹಾಗೂ ಸುಭಾಷ್ ಚಂದ್ರ ಬೋಸ್ ಅವರಂತೆ ಹೋರಾಟ ಮಾಡುವುದು ತಿಳಿದಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಆರಂಭವಾದ ಸಂದರ್ಭದಲ್ಲಿ ಯಾವುದೇ ಬಿಜೆಪಿಯ ನಾಯಕರು ಪಾಲ್ಗೊಂಡಿರಲಿಲ್ಲ ಹಾಗೂ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಯಾವುದೇ ಬಿಜೆಪಿ ನಾಯಕರು ಸೆರೆಮನೆ ವಾಸ ಅನುಭವಿಸಿಲ್ಲ. ಪ್ರಸ್ತುತ ಹರ್ ಘರ್ ತಿರಂಗ ಅಭಿಯಾನದ ಮೂಲಕ ನಾಟಕ ಮಾಡುತ್ತಿದ್ದಾರೆ. ದೇಶದ ಎಲ್ಲಿಯೂ ಸಹ ಆರ್‌ಎಸ್‌ಎಸ್ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವುದಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲಾ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆಂದುಹೇಳಿದರು.
ಪಾದಯಾತ್ರೆಯಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕ ಅಧ್ಯಕ್ಷೆ ಸುಜಾತಾ ಜೋತಾಡಿ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಮಾಜಿ ಸಚಿವ ಶಿವಮೂರ್ತಿ ನಾಯಕ್, ಮಾಜಿ ಶಾಸಕ ಮಹಾಲಿಂಗಪ್ಪ, ಕೆ. ಮಂಜುನಾಥ ಹಳೇಸೊರಬ, ಗೋಣಿ ಮಾಲತೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಜಿಪಂ ಮಾಜಿ ಸದಸ್ಯರಾದ ತಾರಾ ಶಿವಾನಂದ, ರಾಜೇಶ್ವರಿ ಗಣಪತಿ,ಜಿ.ಡಿ ಮಂಜುನಾಥ್, ಶಿವಲಿಂಗೇಗೌಡ, ಪ್ರಮುಖರಾದ ಪಿ.ಎಸ್. ಮಂಜುನಾಥ್, ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಪರಶುರಾಮ ಸಣ್ಣಬೈಲ್, ರಾಮಪ್ಪ ಸಣ್ಣಬೈಲ್, ರವಿ ಬರಗಿ, ಸಂಜೀವ ನೇರಲಗಿ, ಕಿರಣ್, ಪಾಂಡು ಕೊಡಕಣಿ, ಗಿರೀಶ್ ಮಂಚಿ, ಶ್ರೀಕಾಂತ ಚಿಕ್ಕಶಕುನ, ಪ್ರವೀಣ್ ಶಾಂತಗೇರಿ, ಸಂಜಯ್‌ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.