ಶಿವಮೊಗ್ಗ: ವಿದೇಶಿ ವಸ್ತು, ವಿದೇಶಿ ಶಿಕ್ಷಣ, ವಿದೇಶದ ಉದ್ಯೋಗಗಳಿಗೆ ಮಾರುಹೋಗದೆ ಈ ನೆಲದ ಅಂತಸತ್ವವನ್ನು ಅರಿಯುವ ಕೆಲಸ ಯುವ ಪೀಳಿಗೆಯಿಂದ ಆಗಬೇಕು ಎಂದು ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ಶದೇಕರು (ಅಭಿವೃದ್ಧಿ) ಹಾಗೂ ಪ್ರಾಂಶುಪಾಲರಾದ ಬಿ.ಆರ್.ಬಸವರಾಜಪ್ಪ ಹೇಳಿದರು.
ಡಯೆಟ್ ಅವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ದೇಶದಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ಅನೇಕ ಸಕಾರಾತ್ಮಕ ಬದಲಾವಣೆಗಳು ಹಾಗೂ ಅವುಗಳಿಗೆ ನಾವು ಸ್ಪಂದಿಸಬೇಕಾದ ರೀತಿಯ ಬಗ್ಗೆ ತಿಳಿಸಿದರು. ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳು ಮತ್ತು ತರಬೇತಿಯನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಜವಾಬ್ದಾರಿ ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕೆಂದರು. ಹಿರಿಯ ಉಪನ್ಯಾಸಕರಾದ ಸದಾನಂದ ಗೌಡ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಸ್ವಾತಂತ್ರ ಹೋರಾಟಗಾರರ ಜೀವನ ಮತ್ತು ತ್ಯಾಗಗಳ ಬಗ್ಗೆ ಉಪನ್ಯಾಸ ನೀಡಿದರು.ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಬಾಬು ಇವರು ಸರ್ವರನ್ನು ಸ್ವಾಗತಿಸಿದರೆ ಹಿರಿಯ ಉಪನ್ಯಾಸಕರಾದ ಸತ್ಯನಾರಾಯಣ ಟಿಎಂ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಸ್ಥೆ ಆವರಣದಲ್ಲಿ ದೇಶಭಕ್ತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಹಿರಿಯ ಉಪನ್ಯಾಸಕರು,ಉಪನ್ಯಾಸಕರು ಮತ್ತು ಸಿಬ್ಬಂದಿಯವರು ರೂಪಿಸಿದ್ದರು. ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಬಿಂಬಿಸುವ,ಪೇಂಟಿಂಗ್, ರಂಗೋಲಿ, ದೇಶಭಕ್ತಿ ಗೀತೆಗಳ ಗಾಯನ,ಸಮೂಹ ಗಾಯನ, ಭಾಷಣ ಸ್ಪರ್ಧೆಗಳನ್ನು ಕಳೆದೊಂದು ವಾರದಿಂದ ಆಯೋಜಿಸಲಾಗಿತ್ತು.