ಶಿವಮೊಗ್ಗ ಜಿಲ್ಲೆ ಇತ್ತೀಚಿನ ಕೆಲವು ಘಟನೆಗಳಿಂದ ತನ್ನ ಹಿರಿಮೆಯನ್ನು ಕಳೆದುಕೊಳ್ಳುತ್ತಿದೆ. ಬಿಳಿ ಬಟ್ಟೆ ಮೇಲೆ ಕಪ್ಪು ಚುಕ್ಕೆ ಬಿದ್ದಂತಾಗಿದ್ದು, ನಮ್ಮ ಜಿಲ್ಲೆಯ ಹಿರಿಮೆ ಹೆಚ್ಚಿಸಲು ಗತ ವೈಭವ ತರಲು ಸುಶಿಕ್ಷಿತರ ಮತ್ತು ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಪ್ರಮುಖ ಜಿಲ್ಲೆ ಎಂದು ಹೆಸರು ಗಳಿಸಿದ್ದನ್ನು ಉಳಿಸಿಕೊಳ್ಳಲು ನಾವೆಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮನವಿ ಮಾಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶುಕ್ರವಾರ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ‘ಶಿವಮೊಗ್ಗದ ಹಿರಿಮೆಯನ್ನ ಹೆಚ್ಚಿಸೋಣ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಂದೆ ಶಿವಮೊಗ್ಗ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಅ.ನಾ. ವಿಜಯೇಂದ್ರರಾವ್ ಮಾತನಾಡಿ, ನಗರದಲ್ಲಿ ಮೂರ್ನಾಲ್ಕು ಸಂಘಟನೆಗಳ ಪ್ರತಿಷ್ಠೆಯ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಜಿಲ್ಲಾಡಳಿತ ಆ ಸಂಘಟನೆಗಳ ಪದಾಧಿಕಾರಿಗಳನ್ನು ಕರೆಸಿ ಮಾತುಕತೆಯ ಮೂಲಕ ತೀರ್ಮಾನ ಮಾಡಬೇಕೆಂದರು. ಆಟೊ ಕಾಂಪ್ಲೆಕ್ಸ್ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಗಲಭೆಯಿಂದ ಆಟೋಮೊಬೈಲ್ ಡೀಲರ್ಸ್ ಶಿಪ್ ಬೇರೆಡೆ ಹೋಗುವ ಸಾಧ್ಯತೆ ಇದೆ. ನಮ್ಮ ಜಿಲ್ಲೆಯಿಂದ ನೂರಾರು ಕೋಟಿ ತೆರಿಗೆ ಸರ್ಕಾರಕ್ಕೆ ಹೋಗುತ್ತಿದ್ದು, ಇಂತಹ ಘಟನೆಗಳಿಂದ ಹಲವು ಕಂಪನಿಗಳು ಸೂಪರ್ ಸ್ಟಾಕಿಸ್ಟ್ ಗಳನ್ನು ದಾವಣಗೆರೆಗೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಇದರಿಂದ ನಮ್ಮ ಜಿಲ್ಲೆಗೆ ಭಾರಿ ನಷ್ಟವಾಗಲಿದೆ. ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರು ಕೆಲಸ ಮಾಡ್ತಾ ಇದ್ದಾರೆ. ಸಣ್ಣಪುಟ್ಟ ಗಲಾಟೆಗೂ ಬಾಗಿಲು ಹಾಕಿಸಿದರೆ ನಮಗೆ ಕಷ್ಟವಾಗುತ್ತದೆ ಎಂದರು.
ವೈದ್ಯ ಡಾ.ಧನಂಜಯ್ ಸರ್ಜಿ ಮಾತನಾಡಿ, ಒಂದು ಕೋಮುಗಲಭೆಯಿಂದ ಐದು ವರ್ಷ ಹಿಂದಕ್ಕೆ ಹೋಗುತ್ತೇವೆ. ಯಾರು ಗಲಭೆ ಮಾಡ್ತಾರೆ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ತಲ್ಕೀನ್ ಅಹ್ಮದ್ ಮಾತನಾಡಿ, ರೈತರ ಆತ್ಮಹತ್ಯೆಯ ರೀತಿಯಲ್ಲಿ ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗಲಭೆ ಮತ್ತು ಕೊರೋನದಿಂದ ಲಾರಿಮಾಲೀಕರು ಬದುಕುವುದೇ ಕಷ್ಟ ಎನ್ನುವಂತಾಗಿದೆ ಎಂದರು.
ವಕೀಲ ಶ್ರೀಪಾಲ್ ಮಾತನಾಡಿ, ಕಳೆದ ೨೫.ವರ್ಷದ ಕೋಮು ಗಲಭೆಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿರುವುದು ಕಡಿಮೆ. ಫ್ಲೆಕ್ಸ್, ಬಂಟಿಂಗ್ಸ್ ಗಳನ್ನ ಸಂಪೂರ್ಣ ನಿಷೇಧಿಸಿ, ಸೆ.೩ ರಂದು ಶಾಂತಿ ನಡೆ ಸ್ವಾಮೀಜಿ ಮೌಲ್ವಿ, ಮತ್ತು ಫಾದರ್ ಮತ್ತು ಶಾಲಾ ಮಕ್ಕಳು ಭಾಗಿಯಾಗುತ್ತಾರೆ. ಎಲ್ಲರೂ ಶಾಂತಿನಡಿಗೆಯಲ್ಲಿ ಭಾಗವಹಿಸಿ ಎಂದರು.
ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ದಿನಕರ್ ಮಾತನಾಡಿ, ಗಾಂಧಿಬಜಾರ್ ಸುತ್ತಮುತ್ತ ಮಾತ್ರವಲ್ಲ ಎಲ್ಲೇ ಗಲಾಟೆ ನಡೆದರೂ ಇದರ ಪರಿಣಾಮ ಗಾಂಧಿಬಜಾರ್ ವರ್ತಕರ ಮೇಲಾಗುತ್ತದೆ. ಎಲ್ಲಕ್ಕಿಂತ ಮೊದಲೇ ಗಾಂಧಿ ಬಜಾರ್ ಬಂದ್ ಮಾಡಿಸುವುದರಿಂದ ವ್ಯಾಪಾರ ಶೇಕಡ ೨೫ ಕ್ಕೆ ಕುಸಿದಿದೆ. ಗಾಂಧಿ ಬಜಾರ್ ನಲ್ಲಿ ತಳ್ಳುವ ಗಾಡಿ ಮತ್ತು ಫುಟ್‌ಪಾತ್ ವ್ಯಾಪಾರಿಗಳನ್ನು ನಿಯಂತ್ರಿಸಬೇಕು ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಜಯಕರ್ನಾಟಕ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ, ಕೆ.ವಿ.ವಸಂತ್‌ಕುಮಾರ್ ಉದ್ಯಮಿ ನಟರಾಜ್ ಭಾಗವತ್, ಸಂತೋಷ್,
ದಂತ ವೈದ್ಯಕೀಯ ಸಂಘದ ಡಾ. ಭರತ್, ವಸಂತ್ ಹೋಬಳಿದಾರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಶಿವಮೊಗ್ಗದಲ್ಲಿ ಪೊಲೀಸರ ನಿರಂತರ ದಾಳಿಯಿಂದಾಗಿ ಶೇ.೪೦-೫೦ ರಷ್ಟು ಗಾಂಜಾ ಹಾವಳಿ ಕಡಿಮೆ ಆಗಿದೆ. ಔಟ್ ಪೋಸ್ಟ್, ಸಬ್ ಡಿವಿಜನ್ ತೆರೆಯಲು ಪೊಲೀಸರಿಗೆ ಅಧಿಕಾರವಿರಲ್ಲ. ಸರ್ಕಾರ ಕ್ರಮ ಕೈಗೊಳ್ಳಬೇಕು. ಗಾಂಧಿ ಬಜಾರ್ ನಲ್ಲಿ ಔಟ್ ಪೋಸ್ಟ್ ಮಾಡಿದರೆ ಸಿಬ್ಬಂದಿ ಕುಳಿತುಕೊಳ್ತಾರೆ ಅಷ್ಟೆ. ಈಗ ೮ ಕೆ.ಎಸ್.ಆರ್.ಪಿ. ಇದೆ. ಗಲಭೆ ನಡೆದರೆ ೧೫ ನಿಮಿಷದಲ್ಲಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ
ಲಕ್ಷ್ಮಿ ಪ್ರಸಾದ್, ಜಿಲ್ಲಾ ರಕ್ಷಣಾಧಿಕಾರಿ
ಸೆಕ್ಷನ್ ಜಾರಿಯಾಗಿದ್ದರಿಂದ ಎರಡು ಮೂರು ದಿನ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸೆಕ್ಷನ್ ಜಾರಿಯಾದ ಕೂಡಲೇ ಹೆದರುವ ಅವಶ್ಯಕತೆ ಇಲ್ಲ. ಇವತ್ತಿಗೂ ಮೂರು ಠಾಣೆಯಲ್ಲಿ ಸೆಕ್ಷನ್ ೧೪೪ ಜಾರಿ ಇದೆ. ಹಾಗಂತ ಅಂಗಡಿ ಮುಂಗಟ್ಟು ಬಂದ್ ಮಾಡುವುದಿಲ್ಲ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.
ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ