ಬ್ಯಾಕೋಡು : ಅದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಊರು ಮನೆಯ ಸಾಧಕರನ್ನು ಸನ್ಮಾನಿಸಿದ ಸಾರ್ಥಕ ಭಾವ. ಹೌದು. ಇಂತಹ ಭಾವುಕ ಕಾರ್ಯಕ್ರಮ ನಡೆದದ್ದು, ಸಾಗರ ತಾಲೂಕು ಕರೂರು ಹೋಬಳಿ ಕುದರೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ.
ನಿವೃತ್ತ ಯೋಧ ಚಂದ್ರಪ್ಪ ಎಂ.ಬಿ.ಮಣಕಂದೂರು ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮೂಕಪ್ಪ ಮತ್ತು ಚಂದ್ರಪ್ಪ ಅವರನ್ನು ಅವರ ಹುಟ್ಟೂರಿನಲ್ಲಿಯೇ ಅಭಿನಂದಿಸುವ ಸಾರ್ಥಕ ಕಾರ್ಯಕ್ರಮ ಅದಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಪಾ ಮಾತನಾಡಿ, ಕುಗ್ರಾಮದಿಂದ ಬಂದ ಚಂದ್ರಪ್ಪ ಅವರು ಎರಡು ದಶಕಗಳ ಹಿಂದೆಯೇ ಸೇನೆ ಸೇರಿ ಸಾರ್ಥಕ ಸೇವೆ ಸಲ್ಲಿಸಿರುವುದು ಎಲ್ಲರಿಗೂ ಮಾದರಿಯಾಗಿದ್ದಾರೆ. ಹಿನ್ನೀರು ಭಾಗದಲ್ಲಿ ಸರಕಾರಿ ನೌಕರಿ ಎಂಬುದು ಗಗನ ಕುಸುಮವಾದ ಸಂದರ್ಭ ಮೂಕಪ್ಪ ಮತ್ತು ಚಂದ್ರಪ್ಪ ಅವರು ಶಿಕ್ಷಕರಾಗಿ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಈ ಮೂವರನ್ನೂ ಗೌರವಿಸುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುದರೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್ ಬೊಬ್ಬಿಗೆ ಅವರು ಮಾತನಾಡಿ, ಹುಟ್ಟೂರಿನಲ್ಲಿ ನಿವೃತ್ತ ಯೋಧನಿಗೆ ಮತ್ತು ಜಿಲ್ಲಾ ಉತ್ತಮ ಶಿಕ್ಷಕರಿಗೆ ಸನ್ಮಾನಿಸುತ್ತಿರುವುದು ನಮ್ಮ ಪಂಚಾಯತಿಯ ಹೆಮ್ಮೆ ಮತ್ತು ಗೌರವದ ಸಂಕೇತ ಎಂದರು.
ಸನ್ಮಾನ ಸ್ವೀಕರಿಸಿದ ಯೋಧ ಚಂದ್ರಪ್ಪ ಎಂ ಬಿ ಮಾತನಾಡಿ, ನಾನೊಬ್ಬ ಸೈನಿಕನಾಗಿ ನನಗೆ ನನ್ನ ಕುಟುಂಬ ಮತ್ತು ಸಂಬಂಧಕಿಂತ ನನ್ನ ಮಾತೃಭೂಮಿಯ ಸೇವೆಯೇ ತೃಪ್ತಿ ಮತ್ತು ಗೌರವ ನೀಡಿದೆ ಎಂದರು.
ದೀಪಾ ಸ್ತ್ರೀ ಶಕ್ತಿ ಮಹಿಳಾ ಸಂಘದ ಸದಸ್ಯರು ನಿವೃತ್ತ ಯೋಧ ಮತ್ತು ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗೌರವಿಸಿದರು. ಕೆಡಿಪಿ ಸದಸ್ಯ ಮಂಜಯ್ಯ ಜೈನ್, ಕುದರೂರು ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಕೋದಂಡಪ್ಪ, ಸದಸ್ಯ ರವಿಕುಮಾರ್, ಮೋಹನ ಕುಮಾರ್, ಉಮಾ ನಾಗೇಂದ್ರ, ಶಿಕ್ಷಕ ಶ್ರೀಧರ, ಶಾಲಾಭಿವೃದ್ದಿ ಅಧ್ಯಕ್ಷ ಗಣಪತಿ, ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು, ಮಂಜಪ್ಪ ಸ್ವಾಗತಿಸಿ, ರಾಜೀವ ನಿರೂಪಿಸಿದರು.
ಸೈನಿಕನ ಕೈಗಂಟಿದ ರಕ್ತ, ಶಿಕ್ಷಕನ ಕೈಗಂಟಿದ ಚಾಪೀಸ್ ಧೂಳು ಮತ್ತು ರೈತನ ಕೈಗಂಟಿದ ಕೆಸರು ಎಂದೂ ವ್ಯರ್ಥವಾಗುವುದಿಲ್ಲ, ಹುಟ್ಟೂರಿನ ನನ್ನ ಸನ್ಮಾನ ನನ್ನ ಜೀವನದ ಅವಿಸ್ಮರಣೀಯ ಸಂಗತಿ
ಮೂಕಪ್ಪ, ಶಿಕ್ಷಕ
ಗ್ರಾಮೀಣ ಭಾಗದಲ್ಲಿ ಶಿಕ್ಷನಾಗಿ ಕೆಲಸ ಮಾಡುತ್ತಿರುವದಕ್ಕೆ ನನಗೆ ಹೆಮ್ಮೆ ಇದೆ, ಉತ್ತಮ ಶಿಕ್ಷಣ ಭಾರತದ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಸನ್ಮಾನ ನಮ್ಮ ಜವಾಬ್ದಾರಿ ಹೆಚ್ಚಿಸಿದೆ
ಚಂದ್ರಪ್ಪ ಅಳೂರು, ಶಿಕ್ಷಕ