Malenadu Mitra
ರಾಜ್ಯ ಶಿವಮೊಗ್ಗ

ಧರಣಿ, ಪ್ರತಿಭಟನೆಯಿಂದ ಮೀಸಲಾತಿ ಸಿಗದು, ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿದ ಕೆ.ಎಸ್.ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಪ್ರತಿಭಟನೆ ,ಧರಣಿ ಮಾಡಿದ ಮಾತ್ರಕ್ಕೆ ಮೀಸಲಾತಿ ಕೊಡಲಾಗದು, ಯಾವತ್ತೂ ಮೀಸಲಾತಿ ಜಾತಿ ಸೂಚಕವಾಗಬಾರದು, ಸಾಮಾಜಿಕ ಮತ್ತು ಆರ್ಥಿಕವಾಗಿ ನಿಜವಾಗಿಯೂ ದುರ್ಬಲರಾದವರಿಗೆ ಅದು ದಕ್ಕಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರ್ಯ ಈಡಿಗರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಂಚಮಸಾಲಿ ಲಿಂಗಾಯತ, ವಾಲ್ಮೀಕಿ, ಕುರುಬ , ಈಡಿಗ ಸಮಾಜವೂ ಸೇರಿದಂತೆ ಎಲ್ಲಾ ಸಮಾಜದವರು ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭವಲ್ಲ. ಕೇಂದ್ರ ಸರಕಾರದಿಂದ ಆಗಬೇಕು. ಮೀಸಲಾತಿ ಯಾರಿಗೆ ಕೊಡಬೇಕು. ಏಕೆ ಕೊಡಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಅಂದು ಡಾ. ಅಂಬೇಡ್ಕರ್ ಕೇವಲ ೧೦ ವರ್ಷಕ್ಕೆ ಮೀಸಲಾತಿ ಕೊಡಬೇಕು ಎಂದಿದ್ದರು. ಆದರೆ, ೭೫ ವರ್ಷವಾದರೂ ಮೀಸಲಾತಿಗಾಗಿ ಎಲ್ಲಾ ಸಮಾಜದವರು ಬೇಡಿಕೆ ಇಡುತ್ತಿದ್ದಾರೆ. ಮೀಸಲಾತಿ ವ್ಯವಸ್ಥೆ ಸಂಪೂರ್ಣ ದುರುಪಯೋಗವಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಪಂಚಮಸಾಲಿ ಸಮಾಜದವರು ೨ ಎ ಮೀಸಲಾತಿ ಬೇಕು ಎಂದು ಬೇಡಿಕೆ ಈಡುತ್ತಿದ್ದಾರೆ, ಕುರುಬರು ಎಸ್.ಟಿ.ಗೆ ಸೇರಿಸಬೇಕು ಎಂದು, ಕೆಲವರು ಒಳಮೀಸಲಾತಿ ಬೇಕೆಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ. ನಿಜವಾಗಿಯೂ ಪಂಚಮಸಾಲಿ ಸಮಾಜದವರಿಗೆ, ಕುರುಬರಿಗೆ ಮೀಸಲಾತಿಯ ಅಗತ್ಯ ಇದೆಯೇ ಎಂದು ಪ್ರಶ್ನೆ ಮಾಡಿದ ಅವರು ಮೀಸಲಾತಿ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಮೀಸಲಾತಿ ರಾಜಕೀಯ ಅಸ್ತ್ರವಾಗುತ್ತಿದೆ. ಮತಗಳಿಕೆಗೆ ಆಮಿಷವೊಡ್ಡಲು ಪ್ರಣಾಳಿಕೆಯಲ್ಲೂ ಸೇರಿಸುತ್ತಿದ್ದಾರೆ. ಸಮಾಜದಲ್ಲಿ ಈ ಜಾತಿ ವ್ಯವಸ್ಥೆ ಹೋಗಬೇಕು. ಹಿಂದೂ ಧರ್ಮದ ಆಧಾರದ ಮೇಲೆ ಸಮಾಜ ಬೆಳೆಯಬೇಕು. ಆಗ ಜಾತಿ ತಾರತಮ್ಯ ನಿವಾರಣೆಯಾಗಲಿದೆ. ನಾರಾಯಣ ಗುರುಗಳು ಒಂದು ಜಾತಿಗೆ ಸೇರಿದವರಲ್ಲ. ಅವರು ನಾಡಿನ ಗುರು ಎಂದು ಹೇಳಿದರು.


ಶೋಷಿತರ ಧ್ವನಿ ನಾರಾಯಣಗುರು:

ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ. ಹರೀಶ್ ವಿಶೇಷ ಉಪನ್ಯಾಸ ನೀಡಿ, ನಾರಾಯಣಗುರುಗಳು ಯುಗ ಪುರುಷರು. ಕೇರಳದಲ್ಲಿ ಹುಟ್ಟಿದ ಅವರು ಅಂದು ಅಲ್ಲಿ ಸವರ್ಣೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಜನರಲ್ಲಿ ಶಿಕ್ಷಣ ಮತ್ತು ಸಂಘಟನೆ ಬಗ್ಗೆ ಜಾಗೃತಿ ಮೂಡಿಸಿದರು. ಮನುಸ್ಮೃತಿಯಿಂದ ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆ ಬಂದಿತ್ತು. ಈ ವರ್ಣಾಶ್ರಮ ಪದ್ದತಿಯ ವಿರುದ್ಧ ನಾರಾಯಣಗುರುಗಳು ಮಾಡಿದ ಚಳವಳಿ ಆದರ್ಶವಾದುದು. ಅವರ ಅನುಯಾಯಿಗಳು ಮುಂದೆ ಶೈಕ್ಷಣಿಕವಾಗಿ ಮಾಡಿದ ಕ್ರಾಂತಿ ನಾಡಿಗೆ ಬೆಳಕು ಚೆಲ್ಲಿತು ಎಂದು ಹೇಳಿದರು.
ಈಡಿಗರಿಗೆ ಒಳಮೀಸಲಾತಿ ಕೊಡಿ:
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಈಡಿಗ ಸಮಾಜ ಇಂದು ಅತ್ಯಂತ ಹಿಂದುಳಿದಿದೆ. ಇಲ್ಲಿ ೨೬ ಪಂಗಡಗಳಿವೆ. ಎಲ್ಲಾ ಬಡವರು ಬಡವರಾಗಿದ್ದಾರೆ. ಇವರಿಗೆ ಶೇಕಡ ೫ ರಷ್ಟು ಒಳ ಮೀಸಲಾತಿ ಬೇಕು. ಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಕುವೆಂಪು ವಿವಿಯಲ್ಲಿ ನಾರಾಯಣಗುರು ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಅವರು ಮಾತನಾಡಿ, ಸಮಾಜ ಸುಧಾರಕರು ಮತ್ತು ದಾರ್ಶನಿಕರನ್ನು ಯಾವುದೇ ಜಾತಿಗೆ ಸೀಮಿತಮಾಡಬಾರದು. ಸರಕಾರ ಜಯಂತಿ ಆಚರಿಸುತ್ತಿದೆ ಇದರ ಮೂಲಕ ಮಹಾನ್ ನೇತಾರರ ತತ್ವ ಸಿದ್ಧಾಂತಗಳ ಅನುಷ್ಟಾನವಾಗಬೇಕು. ನಾರಾಯಣ ಗುರುಗಳು ಎಲ್ಲಾ ಸಮುದಾಯಕ್ಕೂ ಆದರ್ಶವಾದ ಸಿದ್ದಾಂತಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ಸೂಡಾ ಅಧ್ಯಕ್ಷ ಎನ್.ಜಿ. ನಾಗರಾಜ್, ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿ ಶಂಕರನಾಯಕ್, ಉಪ ವಿಭಾಗಾಧಿಕಾರಿ ದೊಡ್ಡೇಗೌಡರು, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್
ಭದ್ರಾವತಿ ವಾಸು ಮತ್ತು ತಂಡದವರಿಂದ ಭಕ್ತಿ ಸಂಗೀತ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಸ್ವಾಗತಿಸಿದರು.

Ad Widget

Related posts

ಶಿವಮೊಗ್ಗದಲ್ಲಿ ಶನಿವಾರ 14 ಸೋಂಕಿತರು ನಿಧನ

Malenadu Mirror Desk

ಅಪ್ಪಾಜಿ ಗೌಡರಿಲ್ಲದ ಭದ್ರಾವತಿ ನಗರಸಭೆ ಚುನಾವಣೆ ಹೇಗಿದೆ ಗೊತ್ತಾ ?

Malenadu Mirror Desk

ಭೀಮನ ಅಮವಾಸ್ಯೆ ಸಿಗಂದೂರು ದೇವಿಗೆ ವಿಶೇಷ ಅಲಂಕಾರ, ಹರಿದು ಬಂದ ಭಕ್ತಸಾಗರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.