ಶಿವಮೊಗ್ಗ : ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಮತ್ತು ಮಾರುಕಟ್ಟೆ ಸವಾಲಾಗಿ ಪರಿಣಮಿಸಿದೆ. ಮುದ್ರಣ ಮಾಧ್ಯಮ ಅವಸಾನದ ಅಂಚಿನಲ್ಲಿದೆ, ದೃಶ್ಯ ಮಾಧ್ಯಮದ ಇಂದು ತಾನು ಹೇಳಿದ್ದೇ ಸತ್ಯ ಎಂಬ ಉಮೇದಿನಲ್ಲಿದೆ. ಡಿಜಿಟಲ್ ಮಾಧ್ಯಮ ಯಾರ ನಿಯಂತ್ರಣಕ್ಕೂ ಸಿಗದೆ ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಹಿರಿಯ ರಂಗಕರ್ಮಿ ಚರಕ ಪ್ರಸನ್ನ ಅಭಿಪ್ರಾಯಪಟ್ಟರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ, ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮ ಸತ್ಯದ ಪ್ರತಿಜ್ಞೆ ಮಾಡಬೇಕಾಗಿದೆ. ವರದಿಗಾರರು ಸತ್ಯವನ್ನು ನೋಡಬೇಕು. ಸಾಮಾಜಿಕ ಬದ್ಧತೆ, ವಾಸ್ತವತೆ, ಸತ್ಯವನ್ನು ಗ್ರಹಿಸಿದಾಗ ಉತ್ತಮ ವರದಿಯಾಗಲು ಸಾಧ್ಯ. ಪತ್ರಿಕಾ ವರದಿಗಾರ ವೃತ್ತಿ ನಿರತನಾದರೂ ಆತನದಲ್ಲಿ ಸಾಮಾಜಿಕ ಕಾರ್ಯಕರ್ತನ ಮನೋಭಾವ ಇರಬೇಕು. ಒಬ್ಬ ಪತ್ರಕರ್ತ ದಿಕ್ಕುತಪ್ಪಿದರೆ ಆತನ ಬರಹದಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಸದಾ ಜಾಗೃತರಾಗಿರಬೇಕು ಎಂದು ಪ್ರಸನ್ನ ಹೇಳಿದರು.
ಧರ್ಮ ತಾರತಮ್ಯದಿಂದ ದೇಶ ಕಟ್ಟಲಾಗದು
ದೇಶದಲ್ಲಿ ಇಂದು ಧರ್ಮದ ವಿಚಾರವಾಗಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಪ್ರಭುತ್ವಕ್ಕೂ ಧರ್ಮ ಒಂದು ಅಸ್ತ್ರವಾಗುತ್ತಿದೆ ಇದು ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿದೆ. ಹೆದರಿಕೆಯಿಂದ ಧರ್ಮ ಸ್ವೀಕರಿಸದೆ, ಧೈರ್ಯದಿಂದ ಧರ್ಮ ಸ್ವೀಕರಿಸಬೇಕು. ಇಲ್ಲವಾದಲ್ಲಿ ಯಾರೊ ಮಾಡುವ ಸಣ್ಣ ತಪ್ಪಿನಿಂದ ಮನುಕುಲವೇ ನಾಶವಾಗಬಹುದಾದ ಸಾಧ್ಯತೆ ಇದೆ ಎಂದು ರಂಗಕರ್ಮಿ ಚರಕ ಪ್ರಸನ್ನ ಆತಂಕ ವ್ಯಕ್ತಪಡಿಸಿದರು.
ಕ್ರಿಶ್ಚಿಯನ್, ಬೌದ್ಧ, ಹಿಂದು, ಮುಸ್ಲಿಂ ಹೀಗೆ ಯಾವುದೇ ದೇಶವಿರಲಿ ಧರ್ಮವನ್ನು ಕೇವಲ ಕಚ್ಚಾಡುವುದಕ್ಕೆ ಸೀಮಿತ ಮಾಡಿಕೊಳ್ಳಲಾಗುತ್ತಿದೆ. ನಾವೆಲ್ಲರೂ ಭಾರತೀಯರಾಗಿ ಒಂದಾಗಿರಬೇಕು. ರಾಜಕೀಯವಾಗಿ ವಿಮರ್ಶೆ ಮಾಡಿ ನೋಡದೆ ಇದ್ದಲ್ಲಿ ಭಾರತೀಯತೆ ಸುಳ್ಳು, ಭಾರತಾಂಬೆ ಸುಳ್ಳು, ದೇಶ ಕಟ್ಟುತ್ತೇವೆ ಎಂಬುದು ಸುಳ್ಳಾಗುತ್ತದೆ. ಧರ್ಮವೇ ಜಗಳಕ್ಕೆ ಪೂರಕವಾಗುತ್ತದೆ, ಪ್ರೇರಣೆ ನೀಡುತ್ತದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪತ್ರಕರ್ತರಾದವರು ಹೆದರಿಕೆಯನ್ನು ಬದಿಗಿಟ್ಟು ಧೈರ್ಯದಿಂದ ವಾಸ್ತವ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಶಿವಮೊಗ್ಗದ ಮಾಧ್ಯಮ ಕ್ಷೇತ್ರದಲ್ಲಿ ಐತಿಹಾಸಿಕ ದಿನ
ಶಿವಮೊಗ್ಗ ಪ್ರೆಸ್ಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಇಂದು ಶಿವಮೊಗ್ಗದ ಮಾಧ್ಯಮ ಕ್ಷೇತ್ರದಲ್ಲಿ ಐತಿಹಾಸಿಕ ದಿನವಾಗಿದೆ. ನೂತನ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ, ಮಾದಕ ವಸ್ತು ವಿರೋಧಿ ಅಭಿಯಾನ ಕಾರ್ಯಕ್ರಮ ಹೊಸ ಸಂಚಲನ ಮೂಡಿಸಿದೆ ಎಂದರು.
ನೀತಿಯುತ, ಚಾರಿತ್ರ್ಯವಂತ, ಕ್ರಿಯಾಶೀಲ, ಸೃಜನ ಶೀಲ, ಆದರ್ಶ ಪತ್ರಕರ್ತರ ಸದೃಡ ಸಂಘಟನೆಯಾಗಿ ಹಾಗೂ ಪತ್ರಕರ್ತರ ಹಿತದೃಷ್ಠಿಯಿಂದ ಕೆಲಸ ಮಾಡುತ್ತದೆ. ಜಿಲ್ಲೆಯಲ್ಲಿ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಒಂದೇ ನಾಣ್ಯದ ಎರಡು ಮುಖಗಳು. ಜಿಲ್ಲೆಯ ಪತ್ರಿಕೋದ್ಯಮದ ಉನ್ನತಿಕರಣಕ್ಕೆ ಅಹರ್ನಿಸಿ ದುಡಿಯುವ ಮೂಲಕ ಪತ್ರಕರ್ತರ ಅಭ್ಯುದಯಕ್ಕೆ ಪೂರಕ ಸ್ಪಂದಿಸಲು ನಿರ್ಣಯಿಸಿದೆ ಎಂದು ಹೇಳಿದರು.
ಜಿಲ್ಲೆಯ ಪತ್ರಿಕಾಭವನ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರಥಮ ಹಂತದಲ್ಲಿ ೨೫ ಲಕ್ಷ, ೨ನೇ ಹಂತದಲ್ಲಿ ೭೦ ಲಕ್ಷ ರೂ. ಮಂಜೂರಾತಿ ನೀಡಿದ್ದಾರೆ. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಮೂಲಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ೪೦ ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಪತ್ರಿಕಾ ಭವನ ಮಾದರಿಯಾಗಿ ನವೀಕರಣಗೊಂಡಿದೆ. ಪತ್ರಕರ್ತರ ಹಾಗೂ ಸಮಾಜದ ಸೇವೆಗೆ ಕೊಡುಗೆ ನೀಡಲಿದೆ ಎಂದರು
ಆರೋಗ್ಯ ಕಾರ್ಡ್ ವಿತರಿಸಿ ಬಳಿಕ ಮಾತನಾಡಿದ ಸರ್ಜಿ ಸಮೂಹ ಸಂಸ್ಥೆ ಛೇರ್ಮನ್ ಡಾ. ಧನಂಜಯ ಸರ್ಜಿ,
ಮಾದಕ ವಸ್ತುಗಳು ಮಾನಸಿಕ ಮತ್ತು ದೈಹಿಕ ಉತ್ತೇಜನ, ಒತ್ತಡ ಹೆಚ್ಚಿಸಿ ಸ್ಥಿಮಿತ ಕೆಡಿಸುತ್ತದೆ. ಹಾಗೆಯೇ ಅತಿ ಹೆಚ್ಚು ಮೊಬೈಲ್ ಸ್ಮಾರ್ಟ್ ಪೋನ್ ಬಳಕೆಯಿಂದ ಮನುಷ್ಯನ ಸಮತೋಲನ ಕಳೆದುಕೊಳ್ಳುತ್ತಿದ್ದಾನೆ. ಊಟ ದೇಹಕ್ಕೆ ಹಿತ, ಆಟ ದೇಹಕ್ಕೆ ಹಿತ, ಪಾಠ ಜ್ಞಾನಕ್ಕೆ ಹಿತ, ಸಮಾಜಕ್ಕೆ ಹಿತವಾದ ಕೆಲಸ, ಸಮಾಜಮುಖಿ ಕಾರ್ಯ ಮಾಡಿದರೆ ಮನಸ್ಸಿಗೆ ಸ್ಪೂರ್ತಿ, ಸಂತೋಷ ಸಿಗುತ್ತದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಮಾತನಾಡಿ, ಶಿವಮೊಗ್ಗ ಸಮಾಜದ ಎಲ್ಲಾ ರಂಗಗಳಲ್ಲಿ ಸಾಧಕರನ್ನು ನೀಡಿದ ಇತಿಹಾಸವಿದೆ. ಪತ್ರಕರ್ತರನ್ನು ಸಮಾಜದ ಕನ್ನಡಿ ಎನ್ನುತ್ತಾರೆ. ಹೀಗಾಗಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸುವ ಕಾರ್ಯವನ್ನು ಪತ್ರಕರ್ತರಾದವರು ಮಾಡಬೇಕು. ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿಯಾಗಲಿ ಎಂದು ಆಶಿಸಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಚಂದ್ರಕಾಂತ್, ಶಿವಮೊಗ್ಗ ಜಿಲ್ಲಾ ಪತ್ರಿಕೋಧ್ಯದ ೩-೪ ದಶಕಗಳಲ್ಲಿನ ಏಳುಬೀಳುಗಳ ಕುರಿತು ಅವಲೋಕನ ಮಾಡಿದರಲ್ಲದೆ ತಮ್ಮ ಪತ್ರಿಕೋದ್ಯಮದ ಆರಂಭದ ದಿನಗಳ ಮೆಲಕು ಹಾಕಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡಮಿ ಸದಸ್ಯ ಗೋಪಾಲ್ ಯಡಗೆರೆ ಪ್ರಾಸ್ತಾವಿಕ ಹಾಗೂ ಅಧ್ಯಕ್ಷೀಯ ನುಡಿಗಳನ್ನಾಡಿ, ಪತ್ರಕರ್ತರ ನಡೆ ಸಮಾಜದ ಕಡೆ. ಮಾಧ್ಯಮ ಆದಾಯದ ಆಶಯದ ವೃತ್ತಿ ಅಲ್ಲ. ಮಾಧ್ಯಮ ಸಮಾಜಮುಖಿ ಸೇವಾ ಶಿಕ್ಷಕ ವೃತ್ತಿಯಾಗಿದೆ ಎಂದು ಹೇಳಿದರು.
ಮಾದಕ ವಸ್ತು ಗಾಂಜಾ ಶಿವಮೊಗ್ಗಕ್ಕೆ ಕಪ್ಪುಚುಕ್ಕೆಯಾಗಿದೆ. ಸಮಾಜ ಸುದಾರಣೆಗೆ ಪತ್ರಕರ್ತರಾದ ನಾವು ಸಮಾಜದ ಅನಿಷ್ಟಗಳ ವಿರುಧ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಆಯೋಜಿಸಿದ್ದೇವೆ ಎಂದರು.
ಮುದ್ರಣ ಮಾಧ್ಯಮಗಳಿಗೆ ಪ್ರಸ್ತುತ ಕಾಲಘಟ್ಟಕ್ಕೆ ಅಬಿವೃದ್ದಿ ಹೊಂದುವ ಸಾಫ್ಟ್ ವೇರ್ ಗಳನ್ನು ಸರ್ಕಾರ ಉಚಿತವಾಗಿ ಒದಗಿಸಬೇಕು. ಮಾಧ್ಯಮದ ಪ್ರಗತಿಗೆ ಪ್ರೋತ್ಸಾಹಿಸಲು ಸರ್ಕಾರ ಜಾಹಿರಾತು ನೀಡಬೇಕು. ಪತ್ರಕರ್ತರುಗಳಿಗೆ ಸರ್ಕಾರ ಅಧ್ಯಯನ ಪ್ರವಾಸಗಳನ್ನು ಪ್ರತಿವರ್ಷ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭ ರಾಷ್ಟ್ರಪತಿ ಸೇವಾ ಪದಕ ಪುರಸ್ಕೃತ ಗೃಹರಕ್ಷಕದಳದ ವಿಂಗ್ ಕಮಾಂಡರ್ ಶಿವಾನಂದ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನೂತನ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಹಿರಿಯ ಕಿರಿಯ ಪತ್ರಕರ್ತರುಗಳು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರಾಮಚಂದ್ರ ಗುಣಾರಿ ಪ್ರಾರ್ಥಿಸಿದರು. ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಸರ್ಜಿ ಆಸ್ಪತ್ರೆಯ ಆರೋಗ್ಯಕಾರ್ಡ್ ವಿತರಿಸಲಾಯಿತು.