Malenadu Mitra
ರಾಜ್ಯ ಶಿವಮೊಗ್ಗ

ಪಟೇಲರ ಬೀಜದ ಹೋರಿಯೂ… ಬೊಮ್ಮಾಯಿ ಸಂಪುಟ ವಿಸ್ತರಣೆಯೂ….

ನಾಗರಾಜ್ ನೇರಿಗೆ, ಶಿವಮೊಗ್ಗ

ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ನೋಡಿದರೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಮಾಜವಾದಿ ಮುತ್ಸದ್ಧಿ ಜೆ.ಹೆಚ್.ಪಟೇಲರು ಹೇಳಿದ ಹೋರಿ ಮತ್ತು ತೋಳದ ಕತೆ ನೆನಪಾಗುತ್ತದೆ. ಅಂದು ತಮ್ಮ ಸರಕಾರ ಕುರಿತು ಪ್ರತಿ ಪಕ್ಷಗಳು ಮಾಡಿದ್ದ ಟೀಕೆ ಕುರಿತಾಗಿ ಜೆ.ಹೆಚ್.ಪಟೇಲರು ಹೀಗೆ ಹೇಳಿದ್ದರು… ಹೋರಿ(ಗೂಳಿ) ನಡೆದು ಹೋಗುವಾಗ ಅದರ ಬೀಜ ಅಲ್ಲಾಡುತ್ತಾ…. ಇರುತ್ತೆ ಹಸಿದ ತೋಳವೊಂದು ಹೋರಿಯ ಬೀಜ ಬೀಳತ್ತೆ ಎಂದು ಅದರ ಹಿಂದೆಯೇ ಹೋಗುತ್ತಿತ್ತಂತೆ… ಅಸಲಿಯಾಗಿ ಹೋರಿಯ ಬೀಜ ಬೀಳುವುದಿಲ್ಲ ಅದನ್ನು ತಿಂದು ಹಸಿವು ನೀಗಿಸಿಕೊಳ್ಳುವ ತೋಳದ ಆಸೆ ಈಡೇರಿವುದಿಲ್ಲ. ಪ್ರತಿ ಪಕ್ಷಗಳ ಪರಿಸ್ಥಿತಿಯೂ ತೋಳದಂತೆಯೇ ಆಗಿದೆ. ಸರಕಾರ ಈಗ ಬೀಳತ್ತೆ…ನಾಳೆ ಬೀಳತ್ತೆ ಎಂದು ಕಾಯುತ್ತಿವೆ ..ಎಂದು ಪಟೇಲರು ಹೇಳಿದ್ದ ಕತೆ ಅಂದು ಭಾರೀ ಜನಪ್ರಿಯತೆ ಪಡೆದಿತ್ತು…
ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲಿ ಪಟೇಲರ ತೋಳದ ಕತೆಯ ಸನ್ನಿವೇಶವೇ ಇದೆ. ಇಲ್ಲಿ ಬೊಮ್ಮಾಯಿ ಅವರು ಹೋರಿಯ ಸ್ಥಾನದಲ್ಲಿದ್ದರೆ, ಬಿಜೆಪಿಯ ಸಚಿವ ಆಕಾಂಕ್ಷಿಗಳು ತೋಳದ ಸ್ಥಾನದಲ್ಲಿದ್ದಾರೆ. ಒಂದು ವರ್ಷದಿಂದ ಬೊಮ್ಮಾಯಿ ಅವರ ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಆಗ ಆಗುತ್ತೆ….ಈಗ ಆಗುತ್ತೆ… ಎಂದು ತೋಳದ ಪರಿಯಲ್ಲಿ ಶಾಸಕರು ಆಸೆ ಕಣ್ಣುಗಳಿಂದ
ಕಾಯುತ್ತಲೇ ಇದ್ದಾರೆ ಆದರೆ ಸರಕಾರದ ಅವಧಿ ಮುಗಿಯುತ್ತ ಬಂದರೂ ಸಂಪುಟ ವಿಸ್ತರಣೆ ಸುಳಿವು ಮಾತ್ರ ಇಲ್ಲವಾಗಿದೆ…..
ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿಗಾದಿಯಿಂದ ಇಳಿಯುತ್ತಿದ್ದಂತೆ ತಮ್ಮ ನೀಲಿ ಕಣ್ಣಿನ ಹುಡುಗನಂತಿರುವ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸುವಲ್ಲಿ ಯಶಸ್ವಿಯೂ ಆದರು. ಇದು ಹೈಕಮಾಂಡ್ ತೀರ್ಮಾನ ಎಂದು ಮೇಲ್ಕೋಟಕ್ಕೆ ಹೇಳಲಾಗುತ್ತಿದೆಯಾದರೂ, ಬೊಮ್ಮಾಯಿ ಸರಕಾರದಲ್ಲಿ ಆಗುತ್ತಿರುವ ಕೆಲಸಗಳನ್ನು ನೋಡಿದರೆ ಯಡಿಯೂರಪ್ಪ ಅವರ ಪ್ರಭಾವಳಿ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.
ಖಾಲಿ ಸ್ಥಾನ ಉಳಿಸಿಕೊಂಡ ಸಿಎಂ:

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಂದಿನಿಂದ ಸಂಪುಟದಲ್ಲಿ ಎರಡು ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದರು. ವಿವಿಧ ಕಾರಣಗಳಿಗಾಗಿ ರಾಜೀನಾಮೆ ಮತ್ತು ಇತ್ತೀಚಿಗೆ ಉಮೇಶ್ ಕತ್ತಿ ಅವರು ನಿಧನರಾದ ಕಾರಣ ಸಂಪುಟಲ್ಲಿ ಒಟ್ಟು ೬ ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಹಿಂದಿನ ಕೆಲ ಸರಕಾರಗಳಲ್ಲಿಯೂ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರುವ ಉದ್ದೇಶದಿಂದ ಸಂಪುಟದಲ್ಲಿ ಒಂದೆರಡು ಸ್ಥಾನ ಉಳಿಸಿಕೊಂಡಿದ್ದ ಉದಾಹರಣೆಗಳಿವೆ. ಆದರೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆರು ಹುದ್ದೆಗಳು ಖಾಲಿ ಇವೆ. ಪವರ್ ಫುಲ್ ಹೈಕಮಾಂಡ್ ಎನಿಸಿಕೊಂಡಿರುವ ಬಿಜೆಪಿ ನಾಯಕತ್ವಕ್ಕೆ ಖಾಲಿ ಸ್ಥಾನಗಳನ್ನು ತುಂಬಿ ಸುಗಮ ಆಡಳಿತಕ್ಕೆ ಅನುವುಮಾಡಿಕೊಡಲು ಸಾಧ್ಯವಾಗಿಲ್ಲ ಎಂದರೆ ಆ ಪಕ್ಷದಲ್ಲಿನ ಒಳಬೇಗುದಿ ಎಷ್ಟಿದೆ ಎಂಬುದು ವೇದ್ಯವಾಗುತ್ತದೆ.
ಹಂಗಿನ ಸರಕಾರ:

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೂ ಹಂಗಿನ ಸರಕಾರವೇ ಇದ್ದು, “ಆಪರೇಷನ್ ಕಮಲ’ ಎಂಬ ನವ ರಾಜಕೀಯ ಸೂತ್ರದ ಮೂಲಕ ಬಿಜೆಪಿ ಆಡಳಿತ ನಡೆಸುತ್ತಿದೆ. ಇದರಿಂದಾಗಿ ಆಮಿಷಗಳಿಗಾಗಿ ಪಕ್ಷಕ್ಕೆ ಬಂದ ಹಲವು ಅನರ್ಹರಿಗೂ ಸಚಿವ ಪದವಿ ನೀಡಿದ್ದು ಇತಿಹಾಸ. ಈಗಿನ ಬೊಮ್ಮಾಯಿ ಸರಕಾರವೂ ಕೂಡಾ ಯಡಿಯೂರಪ್ಪ ಅವರ “ಸಿಜೇರಿಯನ್ ಬೇಬಿಯೇ” ಆಗಿದ್ದು, ವಲಸೆ ಬಂದ ಬಹುತೇಕರು ಸಚಿವರಾಗಿದ್ದಾರೆ. ಈ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಭಾರತೀಯ ಜನತಾ ಪಕ್ಷದ ಮೂಲನಿವಾಸಿಗಳ ಶಕ್ತಿಯೇ ಉಡುಗಿ ಹೋಗಿದೆ. ಪವರ್‌ಫುಲ್ ಹೈಕಮಾಂಡ್ ಇದ್ದರೂ ರಾಜ್ಯದಲ್ಲಿ ಮಾತ್ರ ಪಕ್ಷ ನಿಷ್ಠರಿಗೆ ಮನ್ನಣೆಯೇ ಇಲ್ಲವಾಗಿದೆ.

ಮುಖಂಡರ ಮುನಿಸು:

ಖಾಲಿ ಇರುವ ಸ್ಥಾನ ತುಂಬಲು ಮುಂದಾದರೆ ಧರೆ ಅಗೆದು ಮೈ ಮೇಲೆ ಎಳೆದುಕೊಂಡಂತೆ ಎಂಬ ಚಿಂತನೆ ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್‌ನದ್ದಾಗಿದೆ. ಆದರೆ ರಾಜ್ಯದಲ್ಲಿ ಹಲವು ಮುಖಂಡರು ತಮ್ಮ ಪಕ್ಷ ನಿಷ್ಠೆ ಮತ್ತು ಸೀನಿಯಾರಿಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಒಳಗೊಳಗೇ ಉರಿದುಹೋಗಿದ್ದಾರೆ. ಆಪರೇಷನ್ ಕಮಲದ ರೂವಾರಿ ರಮೇಶ್ ಜಾರಕಿಹೊಳಿ , ಶೇ.೪೦ ಕಮೀಷನ್ ಮತ್ತು ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಮೊನ್ನೆ ತಾನೆ ಕ್ಲೀನ್ ಚಿಟ್ ಪಡೆದುಕೊಂಡ ಕೆ.ಎಸ್.ಈಶ್ವರಪ್ಪ , ಮೈಸೂರಿನ ರಾಮದಾಸ್ ಮತ್ತಿತರರು ವಿಧಾನ ಸಭೆ ಮಾನ್ಸೂನ್ ಅಧಿವೇಶನಕ್ಕೆ ಗೈರಾಗಿರುವುದು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಎಂದು ಹೇಳಲಾಗುತ್ತಿದೆ.
ಅದೇ ರೀತಿ ಬಸನಗೌಡ ಯತ್ನಾಳ್, ಅರವಿಂದ ಲಿಂಬಾವಳಿ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ಬೋಪಯ್ಯ, ಹರತಾಳು ಹಾಲಪ್ಪ, ಶಂಕರ್, ಎಂ.ಪಿ. ರೇಣುಕಾಚಾರ್ಯ, ರಾಜೀವ್,ರಾಜೂಗೌಡ ಸೇರಿದಂತೆ ಅನೇಕ ಶಾಸಕರು ಕೊನೆ ಅವಧಿಯಲ್ಲಾದರೂ ಸಂಪುಟ ಸೇರಬಹುದೆಂಬ ನಿರೀಕ್ಷೆ ಹೊಂದಿದ್ದರು. ಆರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನೂ ಭರ್ತಿ ಮಾಡದೇ ಈ ಎಲ್ಲಾ ಆಕಾಂಕ್ಷಿಗಳಿಗೆ ಪಕ್ಷ ಅನ್ಯಾಯ ಮಾಡಿದೆ.


ವಲಸಿಗರ ವೈಭವ:

ಪಕ್ಷನಿಷ್ಠರಿಗೆ ಮನ್ನಣೆ ಎಂಬುದು ರಾಜ್ಯ ಬಿಜೆಪಿಯಲ್ಲಿ ಬರೀ ಹೇಳಿಕೆ ಮಾತ್ರ ಆಗಿದ್ದು, ವಲಸೆ ಬಂದು ಸರಕಾರ ರಚನೆಗೆ ಕಾರಣಕರ್ತರಾಗಿ ಈಗ ಸಚಿವಗಾದಿಯಲ್ಲಿರುವವರ ವೈಭೊಗ ನೋಡಿ ಪರಿವಾರ ಮೂಲದ ಮತ್ತು ಮೂಲ ಬಿಜೆಪಿ ಶಾಸಕರು ಕುಂತಲ್ಲಿಯೇ ಕರುಬುತಿದ್ದಾರೆ. ವಲಸಿಗ ಸಚಿವರ ಆಡಳಿತ, ಆಟಾಟೋಪ, ಆರ್ಥಿಕ “ಆರೋಗ್ಯ’ ಕಂಡು ಮಂಕಾಗಿ ಹೋಗಿರುವ ಅವರುಗಳು, ಇರುವ ಖಾಲಿ ಸ್ಥಾನಗಳನ್ನೂ ತುಂಬದೆ ತಮ್ಮ ನಿಷ್ಠೆಯನ್ನ ಕಾಲಕಸವನ್ನಾಗಿಸಿದ ಪಕ್ಷದ ನಾಯಕತ್ವ ಮತ್ತು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ಶಪಿಸುತ್ತಿದ್ದಾರೆ. ದೇಶವನ್ನೇ ಬಿಜೆಪಿಮಯಮಾಡುವ ಉಮೇದಿನಲ್ಲಿರುವ ಮೋದಿ-ಅಮಿತ್ ಶಾ ಜೋಡಿ ಖಾಲಿ ಸಚಿವ ಸ್ಥಾನಗಳಿಗೆ ಅರ್ಹರನ್ನು ನೇಮಿಸಿ ಉಂಟಾಗಬಹುದಾದ ಭಿನ್ನಮತ ಶಮನಗೊಳಿಸುವಲ್ಲಿ ವಿಫಲರಾಗಿರುವುದು ರಾಜ್ಯ ಬಿಜೆಪಿ ಶಾಸಕರ ಬಗೆಗಿನ ಉಪೇಕ್ಷೆಯೇ ಸರಿ.


ಸತ್ಯವಾದ ಮಾಧುಸ್ವಾಮಿ ಹೇಳಿಕೆ

ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರು ಸರಕಾರ ನಡೆಸುತ್ತಿಲ್ಲ, ತಳ್ಳಿಕೊಂಡು ಹೋಗುತ್ತಿದ್ದೇವೆ ಎಂಬ ಹೇಳಿಕೆ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ಸರಕಾರದ ವಾಸ್ತವ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದರು. ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡದೆ ಕಾಲ ತಳ್ಳುತ್ತಿರುವುದು ಮಾಧುಸ್ವಾಮಿ ಹೇಳಿಕೆಯನ್ನು ಪುಷ್ಠೀಕರಿಸಿದೆ. ಅದೇ ರೀತಿ ನಿಗಮಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲೂ ಸರಕಾರ ವಿಳಂಬ ಧೋರಣೆ ತಾಳಿದೆ. ಈ ನೇಮಕವನ್ನು ಗಂಭೀರವಾಗಿ ಪರಿಗಣಿಸದ ಬಿಜೆಪಿ ನಾಯಕತ್ವ ಪಕ್ಷಕ್ಕಾಗಿ ರಕ್ತಬಸಿದ ಕಾರ್ಯಕರ್ತರನ್ನು ಕಡೆಗಣಿಸಿದೆ ಎಂದು ಅಭಿಪ್ರಾಯ ಪಕ್ಷದ ವಲಯದಲ್ಲಿದೆ.

Ad Widget

Related posts

ಕೊರೊನ ಆಘಾತ,ವಿದ್ಯುತ್ ಉತ್ಪಾದನೆಗೂ ಕಂಟಕ ಸಿಬ್ಬಂದಿಗೆ ರಜೆ ಇಲ್ಲ, ಲಸಿಕೆ ಮೊದಲೇ ಇಲ್ಲ

Malenadu Mirror Desk

ಜುಲೈ ೧ರಿಂದ ಶಿವಮೊಗ್ಗಜಿಲ್ಲೆಯ 18+ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕೆ: ಸಂಸದ

Malenadu Mirror Desk

ಶಿವಮೊಗ್ಗದಲ್ಲಿ ತ್ರಿಶತಕ ದಾಟಿದ ಕೊರೊನ, 1335 ಸಕ್ರಿಯ ಪ್ರಕರಣಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.