ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿ ಹಿಂದುಳಿದವರ್ಗಗಳ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಆ ಪಕ್ಷ ತೊರೆದಿದ್ದ ರಾಜು ತಲ್ಲೂರು ಅವಲು ಗುರುವಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಅವರು, ರಾಜು ತಲ್ಲೂರು ಅವರು ತಮ್ಮ ತಪ್ಪಿನ ಅರಿವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.ಇವರ ನೇತೃತ್ವದಲ್ಲಿ ಪಕ್ಷ ಮತ್ತು ಸಂಘಟನೆಗೆ ಹೆಚ್ಚಿನ ಶಕ್ತಿ ಲಭಿಸಲಿದೆ . ರಾಷ್ಟ್ರದೆಲ್ಲೆಡೆ ಬಿಜೆಪಿಗೆ ಸೇರ್ಪಡೆ ಪರ್ವ ಆರಂಭಗೊಂಡಿದೆ. ಪಂಡಿತ್ ದೀನ್ ದಯಾಳ್ ಜೀ ಅವರ ಕನಸು ಕಾರ್ಯರೂಪಕ್ಕೆ ಬರುತ್ತಿದೆ. ನಮ್ಮನ್ನು ಬೆಳೆಸಿದ ತಾಯಿಯಂತಿರುವ ಬಿಜೆಪಿಗೆ ನೋವಾಗದಂತೆ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ ಎಂದರು.
ರಾಜು ಎಂ ತಲ್ಲೂರು ಮಾತನಾಡಿ, ರಾಜ್ಯದ ೧೫ ಲಕ್ಷಕ್ಕೂ ಹೆಚ್ಚು ಮಡಿವಾಳ ಸಮಾಜದ ಬಂಧುಗಳು ಬಿಜೆಪಿ ಪರವಾಗಿದ್ದು, ಸೊರಬದಲ್ಲಿ ೩೦೦ಕ್ಕೂ ಹೆಚ್ಚು ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರಲಿದ್ದು, ಮುಂದಿನ ದಿನಗಳಲ್ಲಿ ಸೊರಬದಲ್ಲಿ ಕಾಂಗ್ರೆಸ್ಸೇ ಇಲ್ಲದ ಹಾಗೆ ಬಿಜೆಪಿಯನ್ನು ಕಟ್ಟಿ ಬೆಳೆಸುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರಗಳು ಮಾಡುತ್ತಿರುವ ಅಭಿವೃದ್ಧಿ ಕಾರ್ಯ ಗಮನಿಸಿ ರಾಜು ತಲ್ಲೂರು ಮತ್ತು ಅವರ ಬೆಂಬಲಿಗರು ಪಕ್ಷಕ್ಕೆ ಬಂದಿರುವುದಕ್ಕೆ ಸ್ವಾಗತಿಸುತ್ತೇನೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಲಿತರಿಗೆ ಮತ್ತು ಹಿಂದುಳಿದವರಿಗೆ ಏನು ಮಾಡಿದ್ದಾರೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ ನಾವೇನು ಕೊಟ್ಟಿದ್ದೇವೆ ಎಂದು ಶ್ವೇತಪತ್ರ ಹೊರಡಿಸುತ್ತೇವೆ. ಜನ ತೀರ್ಮಾನ ಮಾಡುತ್ತಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಸೊರಬ ಬಿಜೆಪಿ ಮುಖಂಡರಾದ ಪ್ರಕಾಶ್, ಸೂಡಾ ಅಧ್ಯಕ್ಷ ನಾಗರಾಜ್, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸಿ.ಹೆಚ್. ಮಾಲತೇಶ ಮತ್ತಿತರರಿದ್ದರು.
ಹಿಂದೆ ನಾನು ಬಿಜೆಪಿಯಲ್ಲೇ ಇದ್ದೆ. ಕಾರಣಾಂತರಗಳಿಂದ ಕಾಂಗ್ರೆಸ್‌ಗೆ ಹೋಗಿ ಅಲ್ಲಿಂದ ಸ್ಪರ್ಧಿಸಿ ಸೋತಿದ್ದೆ. ಕಾಂಗ್ರೆಸ್‌ಗೆ ಹೋದ ನಂತರ ನನಗೆ ತಪ್ಪಿನ ಅರಿವಾಗಿದೆ. ನಾನು ಬೇಷರತ್ ಕ್ಷಮೆ ಕೇಳಿ ಬಿಜೆಪಿಗೆ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಶೀರ್ವಾದ ಪಡೆದಿದ್ದೇನೆ. ಎಲ್ಲ ಮುಖಂಡರ ಮಾರ್ಗದರ್ಶನದಲ್ಲಿ ಸೊರಬ ಸೇರಿದಂತೆ ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರನ್ನು ಒಗ್ಗೂಡಿಸಿ ಬಿಜೆಪಿಯನ್ನು ಇನ್ನೂ ಸದೃಢಗೊಳಿಸುತ್ತೇನೆ
ರಾಜು ತಲ್ಲೂರು