ಶಿವಮೊಗ್ಗ,ಅ.೮: ಎಲ್ಲಾ ಧರ್ಮದವರು ಅವರವರ ಧಾರ್ಮಿಕ ಆಚರಣೆಗಳಿಗೆ ಚ್ಯುತಿ ಬಾರದ ವಾತಾವರಣ ಇರುವುದು ಭಾರತದಲ್ಲಿ ಮಾತ್ರ. ಪ್ರಪಂಚದಲ್ಲಿ ನೈತಿಕತೆ ಮೌಲ್ಯಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಭಾರತದಲ್ಲಿ ನೈತಿಕ ಜೀವನಕ್ರಮವಿದೆ. ಇಲ್ಲಿ ಎಲ್ಲರಿಗೂ ಸಮಾನ ಆದ್ಯತೆ ಇದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಹಯೋಗದಲ್ಲಿ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾ ಸಂವಾದಲ್ಲಿ ಅವರು ಮಾತನಾಡಿದರು. ವಿಜೃಂಭಿಸುತ್ತಿರುವ ಮತಾಂಧ ಶಕ್ತಿಗಳಿಗೆ ಭಾರತ ಸರ್ಕಾರ ತಕ್ಕ ಉತ್ತರ ಕೊಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮತಾಂಧ ಶಕ್ತಿಗಳು ವಿಜೃಂಭಿಸುತ್ತಿವೆ. ಎಲ್ಲಿ ನೋಡಿದರೂ ಧಾರ್ಮಿಕ ತಲ್ಲಣಗಳು ನಡೆಯುತ್ತಲೇ ಇವೆ. ಧರ್ಮಗಳ ನಡುವೆ ಕೆಲವು ಮುಸ್ಲಿಂ ಗೂಂಡಾಗಳು(ಎಲ್ಲಾ ಮುಸ್ಲಿಮರು ಗೂಂಡಾಗಳಲ್ಲ) ಹಿಂದೂ ಯುವಕರನ್ನು ಹತ್ಯೆ ಮಾಡುತ್ತಿದ್ದಾರೆ. ಅತ್ಯಾಚಾರದಲ್ಲಿ ತೊಡಗಿದ್ದಾರೆ. ಇಂತಹ ಗೂಂಡಾಗಳಿಗೆ ಭಾರತ ಸರ್ಕಾರ ದಿಟ್ಟ ಉತ್ತರ ಕೊಡುತ್ತಿದೆ. ಹಾಗಂತ ಎಲ್ಲಾ ಮುಸ್ಲಿಮರು ಗೂಂಡಾಗಳಲ್ಲ ರಾಷ್ಟ್ರಭಕ್ತ ಮುಸ್ಲಿಮರು ಈ ದೇಶದಲ್ಲಿ ಇದ್ದಾರೆ ಎಂದರು.
ಹಿಂದೂ ಯುವಕರನ್ನು ಗೂಂಡಾಗಳು ಎಂದು ಏಕೆ ಕರೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮದ ಕಾರಣಕ್ಕಾಗಿ ಹಿಂದೂ ಯುವಕರು ಕೊಲೆ ಮಾಡಿದ ಉದಾಹರಣೆಗಳು ಇಲ್ಲ. ಹಿಂದೂ ಯುವಕರನ್ನು ನಿರಂತರವಾಗಿ ಹತ್ಯೆಗೈಯಲಾಗುತ್ತಿದೆ. ಇಂತಹ ಇಂತಹವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ಸ್ಮಾರ್ಟ್ ಕಾಮಗಾರಿ ಸಮರ್ಥನೆ:
ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಅನೇಕ ದೂರುಗಳು ಕೇಳಿ ಬರುತ್ತಿರುವುದು ನಿಜ. ಆದರೆ, ಸಾರ್ವಜನಿಕರು ಗಮನಿಸಬೇಕಾಗಿದೆ. ಇಲ್ಲಿನ ಕೆಲಸ ನೋಡಿ ಕಸ ನೋಡಬೇಡಿ ಎಂದ ಅವರು, ಸ್ಮಾರ್ಟ್ ಸಿಟಿ ಮುಗಿದ ನಂತರವೇ ಅದರ ನಿಜವಾದ ಕೆಲಸ ಗೊತ್ತಾಗುತ್ತದೆ. ಕೆಲವು ಕಡೆ ಲೋಪವಿರಬಹುದು, ಆದರೆ, ಅಂತಹ ಕಳಪೆ ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಸ್ಮಾರ್ಟ್ ಸಿಟಿ ಕೆಲಸ ಸ್ಮಾರ್ಟ್ ಆಗಿಯೇ ಇದೆ ಎಂದರು.
ಸಚಿವ ಸ್ಥಾನ ಸಿಗುತ್ತದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ, ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದೆ. ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಗೃಹ ಸಚಿವ ಜಾರ್ಜ್ ಅವರನ್ನು ಕೂಡ ರಾಜೀನಾಮೆಗೆ ಒತ್ತಾಯಿಸಿದ್ದೆ. ಅವರು ರಾಜೀನಾಮೆ ನೀಡಿದ್ದರು, ನಿರ್ದೋಷಿಯಾದ ಬಳಿಕ ಮತ್ತೆ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗೆಯೇ ನಾನು ಕೂಡ ನಿರ್ದೋಷಿಯಾಗಿರುವೆ. ಸಚಿವ ಸ್ಥಾನಕ್ಕೆ ಬಯಸಿರುವುದು ನಿಜ. ಆದರೆ, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ಕಾಂಗ್ರೆಸ್ ಇಡೀ ದೇಶದಲ್ಲಿಯೇ ನೆಲ ಕಚ್ಚುತ್ತಿದೆ. ಆದರೂ, ಈ ಕಾಂಗ್ರೆಸಿಗರು ತಮ್ಮ ನುದ್ಧಿಯನ್ನು ಬಿಡುತ್ತಿಲ್ಲ. ಇಡಿ ವಿಚಾರಣೆಗೆ ಕರೆದರೆ ಡಿ.ಕೆ. ಶಿವಕುಮಾರ್ ಅವರಂತಹವರು ನನಗೆ ಸಮಯವಿಲ್ಲ ಎನ್ನುತ್ತಾರೆ. ಈ ನೆಲದ ಕಾನೂನಿಗೆ ಇಂತಹವರು ಹೇಗೆ ಗೌರವ ಕೊಡುತ್ತಾರೆ. ನ್ಯಾಯಾಲಯಗಳು ಇವರ ಸಮಯವನ್ನು ನೋಡಿ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕೆ ಎಂದು ವ್ಯಂಗ್ಯವಾಡಿದರು.
ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತ ವಿಷಯವಾಗಿದೆ. ಹಾಗೆಯೇ ಇತರೆ ಜಾತಿಯವರು ಕೂಡ ನಮಗೆ ಮೀಸಲಾತಿ ಬೇಕೆಂದು ಕೇಳುತ್ತಿದ್ದಾರೆ. ಯಾರು ಮೀಸಲಾತಿ ಬೇಕೆಂದು ಕೇಳುತ್ತಾರೋ ಅವರ ಜಾತಿಯನ್ನು ಕುಲಶಾಸ್ತ್ರೀಯ ಅಧ್ಯಯನಕ್ಕೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ನಂತರ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದರು.
ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಗೌರವಾಧ್ಯಕ್ಷ ಚಂದ್ರಕಾಂತ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಗೋ.ವ. ಮೋಹನಕೃಷ್ಣ ಇದ್ದರು.
1989 ರಲ್ಲಿ ಮೊದಲ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ಆದರೆ ಪಕ್ಷ ನನಗೆ ಅವಕಾಶ ನೀಡಿತು. ಆ ಬಳಿಕವೂ ಶಿಸ್ತಿನ ಸಿಪಾಯಿಯಂತೆ ನಾನಿರುವೆ. ಪಕ್ಷ ಮತ್ತು ಸಂಘದ ಹಿರಿಯರು ಹೇಳಿದಂತೆ ನಡೆಯುವೆ. ಈಗ ಮತ್ತೆ ಸಚಿವನಾಗುತ್ತೇನೊ, ಮುಂದೆ ಮತ್ತೆ ಸ್ಪರ್ಧೆ ಮಾಡುತ್ತೇನೊ ಎಂಬ ವಿಚಾರಗಳು ಪಕ್ಷದ ಹಿರಿಯರಿಗೆ ಬಿಟ್ಟ ಸಂಗತಿಗಳು
ಕೆ.ಎಸ್.ಈಶ್ವರಪ್ಪ, ಶಾಸಕ