ತೀರ್ಥಹಳ್ಳಿ: ಮೇಲಿನಕುರುವಳ್ಳಿಯ ಬಂಡೆ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನುಷ್ಯತ್ವ ಇಲ್ಲ. ಹಸಿವಿಗೆ ಕಾನೂನಿಲ್ಲ ಎಂಬುದನ್ನು ಸರ್ಕಾರ,ಇಲಾಖೆ ಅರಿಯಲಿ. ಶುಕ್ರವಾರ ಬೆಳಿಗ್ಗೆ ಒಳಗೆ ಬಡ ಬಂಡೆ ಕೂಲಿ ಕಾರ್ಮಿಕರ ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ೨೪ ಗಂಟೆಯ ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.
ಪಟ್ಟಣದ ಮೇಲಿನ ಕುರುವಳ್ಳಿಯಿಂದ ಹೊರಟ ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ನೂರಾರು ವರ್ಷಗಳಿಂದ ಮೇಲಿನಕುರುವಳ್ಳಿ, ಕುರುವಳ್ಳಿ ಬಂಡೆ ಕಾರ್ಮಿಕರು ಕಲ್ಲನ್ನು ಕೈಯಿಂದ ಒಡೆದು ಜೀವನ ಸಾಗಿಸುತ್ತಿದ್ದಾರೆ. ೫೦೦೦ಕ್ಕೂ ಹೆಚ್ಚು ಮಂದಿ ಇದನ್ನೇ ನಂಬಿಕೊಂಡು ಬದುಕು ನೆಡೆಸುತ್ತಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಬಡ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಬಂಡೆಗೆ ಹೋಗುವ ದಾರಿಯಲ್ಲಿ ಟ್ರಂಚ್ ನಿರ್ಮಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡ ಕಾರ್ಮಿಕರ ನಾಳೆಯ ಊಟಕ್ಕೆ ಕಲ್ಲುಹಾಕುತ್ತಿರುವ ಗಣಿ ಅಧಿಕಾರಿಗಳು ಲಂಚದ ಎಂಜಲು ತಿಂದು ಕೆಲಸ ಮಾಡುತ್ತಿದ್ದು ಇವರಿಗೆ ಕ್ಷೇತ್ರದ ಶಾಸಕರ ಸಂಪೂರ್ಣ ರಕ್ಷಣೆಯಿದೆ. ಬಂಡೆ ಕಾರ್ಮಿಕರಿಗೆ ಕಳೆದ ನಾಲ್ಕುವರೆ ವರ್ಷದಿಂದ ಶಾಸಕ ಜ್ಞಾನೇಂದ್ರ ಏನು ಮಾಡಿದ್ದಾರೆ, ಬಿಜೆಪಿ ಪಟಾಲಂಗಳಿಗೆ ಬಂಡೆಯ ಲೀಸ್ ಕೊಡಿಸಿದ ಶಾಸಕರು ಕೂಲಿ ಕಾರ್ಮಿಕರ ದಾರಿ ತಪ್ಪಿಸಿದ್ದಾರೆ ಎಂದರು.
ಈ ಪ್ರತಿಭಟನೆಯಲ್ಲಿ ಹೊಸಕೊಪ್ಪ ಸುಂದರೇಶ್, ನೆಂಪೆ ದೇವರಾಜ್, ಜಾವಗಲ್ ಶಿವಪ್ಪ, ಮೇಲಿನ ಕುರುವಳ್ಳಿ ಗ್ರಾ.ಪಂ.ಸದಸ್ಯ ನಿಶ್ಚಲ್ ಶೆಟ್ಟಿ, ನಾಗರಾಜ್ ಪೂಜಾರಿ, ಆನಂದ್, ಮಾಜಿ ಸದಸ್ಯೆ ಗೀತಾ, ತೀರ್ಥಹಳ್ಳಿ ಪ.ಪಂ.ಅಧ್ಯಕ್ಷೆ ಸುಶೀಲಾ ಶೆಟ್ಟಿ ಮಾತನಾಡಿದರು.
ಗ್ರಾಪಂ.ಅಧ್ಯಕ್ಷೆ ಭವ್ಯ, ಸದಸ್ಯೆ ಅನಿತಾ, ಯು.ಡಿ. ವೆಂಕಟೇಶ್,ತಾ.ಪಂ.ಮಾಜಿ ಸದಸ್ಯೆ ಶೃತಿ ವೆಂಕಟೇಶ್,ಪ.ಪಂ.ಉಪಾಧ್ಯಕ್ಷ ಜೆ ಯು ಶೆಟ್ಟಿ, ಸದಸ್ಯೆ ಗೀತಾ ರಮೇಶ್, ಮಂಜುಳಾ ನಾಗೇಂದ್ರ, ಕಲ್ಲುಕುಟಿಕರ ಸಂಘದ ಅಧ್ಯಕ್ಷ ನಾಗೇಂದ್ರ, ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್,ಕೆಳಕೆರೆ ದಿವಾಕರ್,ಮುಂತಾದವರಿದ್ದರು.
ತೀರ್ಥಹಳ್ಳಿಯ ಬಾಳೆಬಯಲು ಪದವಿ ಕಾಲೇಜು ಮುಂಭಾಗದಲ್ಲಿ ಗೃಹಸಚಿವರ ಆಪ್ತರೊಬ್ಬರ ರಾಶಿಗಟ್ಟಲೆ ಮರಳು ಸಂಗ್ರಹವಾಗಿದೆ,ಪಕ್ಕದ ಹೊಸನಗರದ ಬಿಜೆಪಿಯ ಮುಖಂಡರು ಅಕ್ರಮವಾಗಿ ಲಾರಿಗಟ್ಟಲೆ ಮರಳು ಸಾಗಿಸುತ್ತಿದ್ದಾರೆ ಇವೆಲ್ಲಾ ಗಣಿ, ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕಾಣುವುದಿಲ್ಲವೇ..? ಸಚಿವ ಜ್ಞಾನೇಂದ್ರ ರವರ ಅಣತಿಯಂತೆ ಇವರು ಕೆಲಸ ಮಾಡುತ್ತಿದ್ದಾರೆ.
- ಕಿಮ್ಮನೆ ರತ್ನಾಕರ್.