ಶಿವಮೊಗ್ಗ ನಗರದ ಶ್ರೀಗಂಧ ಹಾಗೂ ಸಾಮಗಾನ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ವೀರ ಸಾವರ್ಕರ್ ಅವರ ಮೊಮ್ಮಗ ಹಾಗೂ ರಾಷ್ಟ್ರವಾದಿ ಚಿಂತಕ ಸಾತ್ಯಕಿ ಸಾವರ್ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಲಾಯಿತು. ಬಳಿಕ ಸೈನ್ಸ್ ಮೈದಾನದಲ್ಲಿ ಸಾವರ್ಕರ್ ರಚಿತ ಗೀತೆಯ ಸಮೂಹ ಗಾಯನ ಜನರ ಗಮನ ಸೆಳೆಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮನೋಹರ್ ಮಠದ್, ಲಕ್ಷ್ಮೀ ರಾಜ್‌ಕುಮಾರ್ ಅವರುಗಳು ಸಾವರ್ಕರ್ ಅವರ ಸ್ವಾತಂತ್ರ್ಯ ಚಳವಳಿಯ ಹಾದಿಯ ಬಗ್ಗೆ ವಿವರಿಸಿದರು. ಸಾತ್ಯಕಿ ಸಾವರ್ಕರ್ ಅವರು ಮಾತನಾಡಿ, ಸಾವರ್ಕರ್ ಅವರು ಹಿಂದೂ ಸಮಾಜದ ಐಕ್ಯತೆಯನ್ನು ಬಯಸಿದ್ದರು. ಅವರು ಜೀವನವನ್ನೇ ದೇಶಕ್ಕಾಗಿ ತ್ಯಾಗ ಮಾಡಿದರು. ಯಾರು ಏನೇ ಅಪಪ್ರಚಾರ ಮಾಡಿದರೂ ಸತ್ಯಕ್ಕೆ ಯಾವತ್ತೂ ಸಾವಿಲ್ಲ ಎಂದು ಹೇಳಿದರು.
ಶ್ರೀಗಂಧ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಾವರ್ಕರ್ ಅಂದು ಹೀನಾಯವಾಗ ಹಿಂಸೆಯನ್ನು ಬ್ರಿಟಿಷರಿಂದ ಅನುಭವಿಸಿದ್ದರು. ಇಂದು ಅವರ ಫ್ಲಕ್ಸ್ ಕಿತ್ತು ಹಾಕಿದ ಸಂಘಟನೆಯನ್ನೇ ನಿಷೇಧ ಮಾಡುವ ಬಲಿಷ್ಠ ಭಾರತದಲ್ಲಿ ನಾವಿದ್ದೇವೆ. ಯಾವುದೇ ಧರ್ಮದ ದೇಶ ಭಕ್ತರನ್ನು ಗೌರವಿಸುತ್ತೇವೆ. ದೇಶದ್ರೋಹಿಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು. ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಎಸ್.ದತ್ತಾತ್ರಿ , ಸಾಮಗಾನ ಸಂಸ್ಥೆ ಗೌರವ ಅಧ್ಯಕ್ಷ ಕೆ.ಇ.ಕಾಂತೇಶ್ ಸೇರಿದಂತೆ ಅನೇಕ ಪ್ರಮುಖರು ವೇದಿಯಲ್ಲಿ ಹಾಜರಿದ್ದರು.