ಶಿವಮೊಗ್ಗ : ಶಿಮುಲ್ ಶಿವಮೊಗ್ಗ ಘಟಕವು ರಾಜ್ಯೋತ್ಸವದ ಕೊಡುಗೆಯಾಗಿ ನವೆಂಬರ್ 01 ರಿಂದ ಅನ್ವಯವಾಗುವಂತೆ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲು ಶಿವಮೊಗ್ಗ ಹಾಲು ಒಕ್ಕೂಟ ನಿರ್ಣಯಿಸಿದೆ.
ಒಕ್ಕೂಟದ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಇದರಿಂದಾಗಿ ಶಿಮುಲ್‌ಗೆ 10 ಕೋಟಿ ರೂ.ಗಳ ಆರ್ಥಿಕ ಹೊರೆಬೀಳಲಿ. ಪ್ರಸ್ತುತ ಸಂದರ್ಭದಲ್ಲಿ ಒಕ್ಕೂಟದ ಲಾಭಾಂಶ ಹಾಗೂ ಒಕ್ಕೂಟದ ವ್ಯಾಪ್ತಿಯಲ್ಲಿ ಅಸ್ವಾಭಾವಿಕ ಮಳೆಯಿಂದಾಗಿ ಮೇವಿನ ಕೊರತೆಯಿಂದ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ, ಹಿಂಡಿ ದರದಲ್ಲಿ ಹೆಚ್ಚಳ, ಹೈನು ರಾಸುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗ ಮುಂತಾದವುಗಳಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಖರೀದಿ ದರ ಪರಿಷ್ಕರಿಸಿ, ಒಕ್ಕೂಟದಿಂದ ಸಂಘಗಳಿಗೆ ನೀಡುತ್ತಿದ್ದ ಮೊತ್ತವನ್ನು 30.06ರೂ.ನಿಂದ 32.15 ರೂ.ಗಳಿಗೆ ಹಾಗೂ ಸಂಘಗಳಿಂದ ಉತ್ಪಾದಕರಿಗೆ ನೀಡುತ್ತಿದ್ದ ಮೊತ್ತವನ್ನು ಪ್ರತಿ ಲೀ.ಗೆ 28.20 ರೂ.ನಿಂದ 30.29ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೇ ಒಕ್ಕೂಟದ ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಿರುವ ಕಾರಣದಿಂದಾಗಿ ಉಳಿತಾಯವಾಗಿರುವ ಮೊತ್ತ ಹಾಗೂ ಒಕ್ಕೂಟದ ಲಾಭಾಂಶವನ್ನು ಹಾಲು ಉತ್ಪಾದಕರ ಹಿತ ಕಾಪಾಡುವ ಹಿನ್ನೆಲೆಯಲ್ಲಿ ಸಕಾಲದಲ್ಲಿ ಅರ್ಹ ಹೈನುಕೃಷಿಕರಿಗೆ ವಿತರಿಸಲು ಒಕ್ಕೂಟ ಮಹತ್ವದ ನಿರ್ಣಯ ಕೈಗೊಂಡಿದೆ. 2022 ರ ಜನವರಿ 01 ರ ಹೊತ್ತಿಗೆ 16 ಕೋಟಿ ನಷ್ಟದಲ್ಲಿದ್ದ ಒಕ್ಕೂಟವು ಆಡಳಿತ ಮಂಡಳಿಯ ಸಕಾಲಿಕ ನಿರ್ಣಯಗಳಿಂದಾಗಿ ಮಾರ್ಚ್ ಮಾಸಾಂತ್ಯಕ್ಕೆ19 ಕೋಟಿ ರೂ.ಗಳ ಲಾಭ ಹಾಗೂ ಅಕ್ಟೋಬರ್ ಮಾಸಾಂತ್ಯದಲ್ಲಿ 6.50 ಕೋಟಿ ರೂ.ಗಳ ಲಾಭ ಗಳಿಸಿದೆ ಎಂದರು.
ಹಾಲಿನ ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿರುವ ಶಿವಮೊಗ್ಗ ಹಾಲು ಒಕ್ಕೂಟವು ಲಾಭದಲ್ಲಿ ಮುನ್ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಜನರು ನಿರೀಕ್ಷಿಸುವಂತೆ ಇನ್ನೂ ೪.೦೦ಲಕ್ಷ ಲೀ. ಹಾಲಿನ ಅಗತ್ಯವಿದ್ದು, ಮಾರುಕಟ್ಟೆಗೆ ಪೂರೈಸುವುದು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ನಂದಿನಿ ಉತ್ಪನ್ನಗಳು ಎಲ್ಲೆಡೆ ದೊರೆಯುವಂತಾಗಲು ಕ್ರಮ ವಹಿಸಿದ್ದು, ಹಾಲಿನ ಮಾರಾಟ ಮಳಿಗೆಯನ್ನು ಆರಂಭಿಸಲು ಇಚ್ಚಿಸುವ ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ ಎಂದರು.
ಒಕ್ಕೂಟದ ವ್ಯಾಪ್ತಿಗೊಳಪಡುವ ದಾವಣಗೆರೆ ಹಾಲಿನ ಘಟಕಕ್ಕೆ ಉತ್ಕೃಷ್ಟ ಗುಣಮಟ್ಟ ಹಾಗೂ ಆಹಾರ ಸುರಕ್ಷತೆಯ ಪ್ರತೀಕವಾಗಿ ನೀಡಲಾಗುವ FSSC 22000- V5.1ಮಾನ್ಯತೆ ದೊರೆತಿದೆ. ಕಳೆದ ಸಾಲಿನಲ್ಲಿ ಶಿವಮೊಗ್ಗ ಘಟಕವು ಇದೇ ಮಾನ್ಯತೆಯನ್ನು ಹೊಂದಿತ್ತು ಎಂದವರು ತಿಳಿಸಿದರು.
ಒಕ್ಕೂಟದ ವ್ಯಾಪ್ತಿಯಲ್ಲಿ ಶೇ. 25ರ ಸಹಾಯಧನದಲ್ಲಿ ಒಟ್ಟು25,000 ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್‌ಗಳನ್ನು ನೀಡಲಾಗಿದೆ. ಅಲ್ಲದೇ 325ಕ್ಕೂ ಹೆಚ್ಚಿನ ಮಂದಿಗೆ ಮೇವು ಕಟಾವು ಯಂತ್ರಗಳನ್ನು ಕೊಡಿಸಲಾಗಿದೆ ಎಂದವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮುರಳೀಧರ್, ವೇದಮೂರ್ತಿ ಉಪಸ್ಥಿತರಿದ್ದರು.