ಶಿವಮೊಗ್ಗ: ಚಂದ್ರು ಮೃತದೇಹ ಪತ್ತೆ ಮಾಡುವುದಕ್ಕೆ ಡ್ರೋನ್ ಕ್ಯಾಮೆರಾ ಬಳಸಿ ಅವಶೇಷ ಪತ್ತೆ ಮಾಡಲಾಯಿತು ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ೩ ರಂದು ಡ್ರೋನ್ ಕ್ಯಾಮೆರಾ ಬಳಸಿ ಯುಟಿಪಿ ಚಾನಲ್‌ನಲ್ಲಿ ಹುಡುಕಾಟ ನಡೆಸಲಾಗಿತ್ತು. ಅದರಂತೆ ಕಾರಿನ ಜಾಡು ಪತ್ತೆಯಾಗಿದೆ. ಶವವನ್ನು ಅಂದೇ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಮೊದಲ ದಿನದಿಂದಲೇ ಪೊಲೀಸ್ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಿದ್ದಾರೆ. ಗುರುವಾರ ಬೆಳಿಗ್ಗೆ ಚನ್ನಗಿರಿಯಲ್ಲಿ ಈ ಘಟನೆ ಕುರಿತಂತೆ ಉನ್ನತ ಸಭೆಯನ್ನು ಐಜಿಪಿ ತ್ಯಾಗರಾಜನ್ ಜೊತೆ ಚರ್ಚೆ ಮಾಡಲಾಗಿದೆ. ತಕ್ಷಣವೇ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವುದಾಗಿ ಅಲೋಕ್‌ಕುಮಾರ್ ಹೇಳಿದರು.
ಅಕ್ಟೋಬರ್ ೩೧ನೇ ತಾರಿಖು ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಕಿರಣ್ ಅವರನ್ನು ವಿಚಾರಣೆ ಮಾಡಲಾಗಿದೆ. ಕಿರಣ್ ಅವರನ್ನು ದಸ್ತಗಿರಿ ಮಾಡಿಲ್ಲ. ಚಂದ್ರು ಪ್ರಯಾಣಿಸಿದ ಕಾರು ಏನಾಯ್ತು ಎಂಬುದರ ಬಗ್ಗೆಯೇ ತನಿಖೆ ಆರಂಭಗೊಂಡಿತ್ತು. ಹೀಗಾಗಿ ಮಾಹಿತಿ ಸಲುವಾಗಿ ಕೆಲವರನ್ನು ವಿಚಾರಣೆ ಮಾಡಿದ್ದೇವೆ. ಚಂದ್ರು ಕಾರಿನಲ್ಲಿ ಹೋಗುವಾಗ ಕೆಲವರು ನೋಡಿದ್ದಾರೆ. ಅಂತವರನ್ನು ಕರೆದು ವಿಚಾರಣೆ ಮಾಡಿದ್ದೇವೆ. ಇದು ತನಿಖೆಯ ಒಂದು ಭಾಗವಷ್ಟೆ ಎಂದು ವಿವರಿಸಿದರು.
ಪ್ರತಿಕ್ರಿಯೆ ಕೊಡಲಾಗದು:
ಚಂದ್ರು ಸಾವಿಗೆ ಕೋಮು ಬಣ್ಣದ ಟಚ್ ಇರೋ ಬಗ್ಗೆ ರೇಣುಕಾಚಾರ್ಯ ನೀಡಿದ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಲೋಕ್‌ಕುಮಾರ್, ಎಫ್.ಐ.ಆರ್‌ನಲ್ಲಿ ಏನು ವಿಷಯ ಇದೆ. ಅದರ ಆಧಾರದ ಮೇಲೆ ತನಿಖೆ ಮಾಡಲಾಗುತ್ತದೆ. ನಾವು ಯಾರೊಟೀಕೆ ಟೆಪ್ಪಣಿಗಳನ್ನು ಮಾಡಿದ್ರೆ, ಅದಕ್ಕೆ ಪ್ರತಿಕ್ರಿಯಿಸೋದು ತಪ್ಪಾಗುತ್ತದೆ. ನಾವು ಸಾಕ್ಷ್ಯದ ಪ್ರಕಾರ ಮಾತನಾಡಬೇಕಾಗುತ್ತದೆ. ತನಿಖೆಯಲ್ಲಿ ಏನು ನಿಜಾಂಶವಿದೆ ಅದು ಹೊರಬರುತ್ತದೆ. ಕೈಯಲ್ಲಿ ಸಾಕ್ಷ್ಯ ಇಲ್ಲದೆ, ಗುಮಾನಿ ಮೇಲೆ ಮಾತನಾಡಲು ಸಾಧ್ಯವಿಲ್ಲ ಎಂದರು.
ಅಗತ್ಯ ಬಿದ್ದರೆ ವಿನಯ್ ಗುರೂಜಿ ವಿಚಾರಣೆ:
ಚಂದ್ರು ಘಟನೆಯಾದ ನಂತರ ಪೊಲೀಸರು ಅವರ ಅಶ್ರಮಕ್ಕೆ ಹೋಗಿ ವಿನಯ್ ಗುರೂಜಿಯವರಿಂದ ಹೇಳಿಕೆ ಪಡೆದಿದ್ದಾರೆ. ತನಿಖೆಯಲ್ಲಿ ವಿನಾ ಕಾರಣ ಯಾರನ್ನೂ ಕರೆದು ವಿಚಾರಣೆ ಮಾಡುವುದು ಸರಿಯಲ್ಲ. ಚಂದ್ರು ಯಾರ್‍ಯಾರ ಬಳಿ ಹೋಗಿದ್ದರು ಎಂದು ಎಲ್ಲರನ್ನು ಕರೆದು ವಿಚಾರಣೆ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಕಾರ ವಿನಯ್ ಗುರೂಜಿ ಅವರನ್ನು ವಿಚಾರಣೆಗೊಳಪಡಿಸುವ ಅಗತ್ಯತೆ ಕಂಡು ಬಂದಿಲ್ಲ. ತನಿಖೆಯಲ್ಲಿ ಏನಾದರೂ ಅಗತ್ಯ ಕಂಡು ಬಂದರೆ, ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.