ಶಿವಮೊಗ್ಗ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೋಪಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪ ಮೇಯರ್ ಸುರೇಖಾ ಮುರಳೀಧರ್ ಅವರು, ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ತಾಕತ್ತಿದ್ದರೆ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಕುರಿತು ಹೇಳಿಕೆ ನೀಡಲಿ. ಕಾಂಗ್ರೆಸ್ ಪಕ್ಷದವರು ಓಲೈಕೆ ರಾಜಕಾರಣ ಬಿಡಬೇಕು. ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಗರ ಕಾರ್ಯದರ್ಶಿ ದೀನ ದಯಾಳು ಅವರು ಮಾತನಾಡಿ, ಈ ಪ್ರತಿಭಟನೆ ಕೇವಲ ಸತೀಶ್ ಜಾರಕಿಹೊಳಿ ವಿರುದ್ಧವಲ್ಲ. ಇಡೀ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆಯಾಗಿದೆ. ದಿನೇಶ್ ಗುಂಡೂರಾವ್ ಅವರು ಜಾರಕಿಹೊಳಿ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇದು ಮುಸ್ಲಿಮರ ಓಲೈಕೆ. ಸೋನಿಯಾ ಗಾಂಧಿಯವರ ಗಮನ ಸೆಳೆಯಲು ಈ ಪ್ರಯತ್ನ ಎಂದು ಆರೋಪಿಸಿದರು.
ಹಿಂದೂ ಪದದ ಅರ್ಥ ಅಶ್ಲೀಲ ಅಂತಾ ಹೇಳಿದ್ದಾರೆ.ಜಾರಕಿಹೊಳಿಗೆ ಅವರ ಕುಟುಂಬದವರೆ ಚಪ್ಪಲಿಯಲ್ಲಿ ಹೊಡೆಯುವ ಸ್ಥಿತಿ ನಿರ್ಮಾಣ ಆಗಲಿದೆ. ಹಿಂದೂ ಧರ್ಮ, ಸಮಾಜ, ಧ್ವಜದ ವಿಚಾರವಾಗಿ ಅವಹೇಳನಕಾರಿಯಾಗಿ ಮಾತನಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಸತೀಶ್ ಜಾರಕಿಹೊಳಿ ವಿರುದ್ದ ಪ್ರತಿ ನಗರದಲ್ಲೂ ಕೇಸ್ ದಾಖಲಾಗಬೇಕು ಎಂದರು. ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ ನಾಯ್ಕ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.