ಅರು ದಶಕಗಳ ಹಿಂದೆ ನಾಡಿಗೆ ಬೆಳಕು ಕೊಡಲು ಬದುಕು ತ್ಯಾಗ ಮಾಡಿದ್ದ ಶರಾವತಿ ಜಲವಿದ್ಯುತ್ ಯೋಜನೆ ಸಂತ್ರಸ್ತರ ಪುನರ್ವಸತಿ ಯೋಜನೆಯ ಅರಣ್ಯ ಭೂಮಿ ಡಿ-ನೋಟಿಫಿಕೇಶನ್ ರದ್ದುಪಡಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಬಾಕಿ ಉಳಿದಿರುವ ಸರ್ಕಾರಿ ಆದೇಶಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂಬ ಒತ್ತಡವನ್ನು ಸರಕಾರದ ಮೇಲೆ ಹಾಕುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶಿವಮೊಗ್ಗದಲ್ಲಿ ನಡೆದ ಶರಾವತಿ ಮುಳುಗಡೆ ಸಂತ್ರಸ್ಥರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರ ಪನರ್ವಸತಿಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೯ ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ೧ ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿತ್ತು.ಆದರೆ ಪರಿಸರವಾದಿಯೊಬ್ಬರು ಡಿನೋಟಿಫಿಕೇಷನ್‌ಗೆ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲವೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಸಾವಿರಾರು ರೈತ ಕುಟುಂಬಗಳು ಭೂ ವಂಚಿತರಾಗಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ಥ ಸಮಸ್ಯೆಗೆ ನ್ಯಾಯಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ತನಕ ಹೋರಾಟ ನಡೆಸಲಾಗುವುದು. ಶರಾವತಿ ಮುಳುಗಡೆ ಸಂತ್ರಸ್ಥರ ಭೂ ಹಕ್ಕಿನ ವಿಚಾರವನ್ನು ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ಜನರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ತೀ.ನಾ ಶ್ರೀನಿವಾಸ್ ಮಾತನಾಡಿ, ಕಳೆದ ಆರು ದಶಕಗಳ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ಡಬಲ್ ಇಂಜಿನ್ ಸರ್ಕಾರಕ್ಕೆ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ.ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸದ ಕಾರಣ ಇಂದು ಭೂ ವಂಚಿತರಾಗಬೇಕಾಗಿದೆ ಎಂದು ದೂರಿದರು.
ರಾಜ್ಯ ಸರಕಾರ ಜನವಿರೋಧಿ ಅರಣ್ಯ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ವರದಿಯನ್ನು ಯಥಾವತ್ತಾಗಿ ಅನುಷ್ಟಾನಗೊಳಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡಲು98 ಸರ್ಕಾರಿ ಆದೇಶ ಹೊರಡಿಸಿದೆ.ಇದರಲ್ಲಿ 56 ಅಧಿಸೂಚನೆಯನ್ನು ರದ್ದು ಮಾಡಿ ಆದೇಶಿಸಿದ ರಾಜ್ಯ ಸರ್ಕಾರದ ನಡೆ ರೈತ ವಿರೋಧಿಯಾಗಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿ ೫೬ ಅಧಿಸೂಚನೆಯಲ್ಲಿ 26ಅಧಿಸೂಚನೆಗೆ ಮಾತ್ರ ಅನುಮತಿ ಕೇಳಿದ್ದಾರೆ. ಬಾಕಿ ಉಳಿದ 30 ಅಧಿಸೂಚನೆಗೆ ಅನುಮತಿ ಬೇಡವಾ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ,ಕೆ.ಬಿ ಪ್ರಸನ್ನ ಕುಮಾರ್,ಶರಾವತಿ ಮುಳುಗಡೆ ಸಂತ್ರಸ್ಥರ ಕಾಂಗ್ರೆಸ್ ಜಾಗೃತ ಸಮಿತಿ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್,ಮುಖಂಡರಾದ ಡಾ.ರಾಜನಂದಿನಿ, ರಮೇಶ್ ಹೆಗಡೆ, ಎಸ್.ಪಿ.ದಿನೇಶ್, ಜಿ.ಡಿ ಮಂಜುನಾಥ್, ಶ್ರೀನಿವಾಸ್ ಕರಿಯಣ್ಣ,ಮುಡುಬ ರಾಘವೇಂದ್ರ ಸೇರಿದಂತೆ ಹಲವರಿದ್ದರು.
ಬೃಹತ್ ಪ್ರತಿಭಟನಾ ಸಭೆ
ನ.28 ರ ಸಂಜೆ 4ಗಂಟೆಗೆ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. ಸಭೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಪ್ರತಿಪಕ್ಷ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ರಾಜ್ಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂತ್ರಸ್ತರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಪರವಾಗಿ ಇತ್ತು. ಸುಮಾರು ೫೮ ಡಿನೋಟಿಫಿಕೇಷನ್ ಮಾಡುವ ಮೂಲಕ ಸಂತ್ರಸ್ತರ ಬದುಕಲ್ಲಿ ಬೆಳಕು ಮೂಡಿಸಿತ್ತು. ಆದರೆ ಬಿಜೆಪಿ ಸರ್ಕಾರ ಹೈಕೋರ್ಟ್‌ನಲ್ಲಿ ಎರಡು ನೋಟಿಫಿಕೇಷನ್ನಿಗೆ ಸಂಬಂಧಿಸಿದಂತೆ ರದ್ದಾಗಿರುವುದನ್ನೇ ಇಟ್ಟಕೊಂಡು ಉಳಿದೆಲ್ಲಾ ಡಿನೋಟಿಫಿಕೇಷನ್ ರದ್ದುಮಾಡಿ ನೋಟಿಫಿಕೇಷನ್ ಮಾಡಿ ಸಂತ್ರಸ್ತರನ್ನು ಅತಂತ್ರರನ್ನಾಗಿ ಮಾಡಿದೆ.
ಆರ್.ಪ್ರಸನ್ನ ಕುಮಾರ್, ಸಮಿತಿ ಸಂಚಾಲಕ
ನಮ್ಮ ಹೋರಾಟ ಐತಿಹಾಸಿಕ ರೂಪ ಪಡೆಯುವುದರಲ್ಲಿ ಆಶ್ಚರ್ಯವೇ ಇಲ್ಲ. ನೇಣು ಇಲ್ಲವೇ ಹೋರಾಟ ಎಂಬ ನಿರ್ಧಾರಕ್ಕೆ ಸಂತ್ರಸ್ತರು ಬಂದಿದ್ದಾರೆ. ಈಗಾಗಲೇ ದಯಾಮರಣಕ್ಕೆ ಸಂತ್ರಸ್ತರು ಅರ್ಜಿ ಹಾಕಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಗಡುಕ ಬಿಜೆಪಿ ಸರ್ಕಾರದ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟವನ್ನು ನಾವು ಆರಂಭಿಸಿದ್ದೇವೆ. ನ.೨೮ರಂದು ಈ ಬೃಹತ್ ಹೋರಾಟಕ್ಕೆ ಕರೆಕೊಟ್ಟಿದ್ದೇವೆ. ಎತ್ತು, ಗಾಡಿ., ಮಕ್ಕಳು, ಮರಿ ಹೀಗೆ ಕುಟುಂಬ ಸಮೇತ ನ.೨೮ರಂದು ಮಲೆನಾಡಿನ ಎಲ್ಲ ಹಳ್ಳಿಗಳ ರಸ್ತೆಗಳು ಶಿವಮೊಗ್ಗಕ್ಕೆ ಸೇರಿಕೊಳ್ಳುತ್ತವೆ.
-ಬೇಳೂರು ಗೋಪಾಲಕೃಷ್ಣ ,ಮಾಜಿ ಶಾಸಕರು
ಶರಾವತಿ ಸಂತ್ರಸ್ಥರಿಗೆ ಜಾಗ ಮಂಜೂರು ಮಾಡಲಾಗಿತ್ತು. ಈಗ ಅದನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಪ್ರಭಾವಿಗಳ ಜಾಗ ಬಿಟ್ಟು ಉಳಿದ ಜಾಗವನ್ನು ಡಿನೋಟಿಫೈ ಮಾಡಲಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನೇ ನಾವು ಮುಂದಿಟ್ಟುಕೊಂಡು ಇದನ್ನು ಮುಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿಯೇ ಸಂತ್ರಸ್ತರ ಸಮಸ್ಯೆ ಪರಿಹರಿಸವ ಘೋಷಣೆ ಮಾಡುತ್ತೇವೆ.
–ಕಿಮ್ಮನೆ ರತ್ನಾಕರ್, ಮಾಜಿ ಸಚಿವ