ಶಿವಮೊಗ್ಗ, ನ.೨೨.ದೀಪ ಬಾಳಿನ ಅಂಧಕಾರವನ್ನು ಕಳೆದು ಬೆಳಕು ಚೆಲ್ಲುವುದರ ಸಂಕೇತ. ಈ ಕಾರಣದಿಂದ ಕಾರ್ತಿಕ ದೀಪೋತ್ಸವ ನಡೆಸಲಾಗುತ್ತಿದೆ. ಅಜ್ಞಾನವೆಂಬ ಅಂಧಕಾರವನ್ನು ಕಳೆಯಲು ವಿದ್ಯಾಭ್ಯಾಸವೆಂಬ ಜ್ಯೋತಿ ಬೆಳಗಬೇಕಿದೆ ಎಂದು ಸಾರಗನ ಜೆಡ್ಡಿನ ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.
ಸಾರಗನಜಡ್ಡು ಕ್ಷೇತ್ರದಲ್ಲಿ ೧೧ನೇ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿನ ದಾರಿದ್ರ್ಯ ದೂರ ಮಾಡಲು ಅರಿವಿನ ಬೆಳಕಿನ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಅಗತ್ಯವಿದೆ. ಕ್ಷೇತ್ರದಿಂದ ನಿರಂತರವಾಗಿ ಜನಮುಖಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದರು.
ಸ್ವಾಮೀಜಿಗಳು ಬರೀ ಕಾರಿನಲ್ಲಿ ಓಡಾಡಿದರೆ ಮತ್ತು ಪಾದಪೂಜೆಗಳಿಂದ ಉಪಯೋಗವಿಲ್ಲ. ತುಂಬಾ ಸ್ವಾಮೀಜಿಗಳು ಹಣದ ಹಿಂದೆ ಬೀಳುವ ಪ್ರಸಂಗಗಳೂ ನಡೆಯುತ್ತಿವೆ. ಇದು ಸರಿಯಲ್ಲ ನಮ್ಮಲ್ಲಿ ಅನುಷ್ಠಾನ ಇದ್ದರೆ ಆ ದುಡ್ಡು ಅದಾಗಿಯೇ ಬರುತ್ತದೆ. ನಾವು ಅದನ್ನು ಕಂಡುಕೊಂಡಿದ್ದೇವೆ. ನಾನು ನಂಬಿದ್ದು ಶಕ್ತಿ ಮಾತ್ರ, ಆ ಶಕ್ತಿಯನ್ನು ಜನರ ಸೇವೆಗೆ ಬಳಸಿದಲ್ಲಿ ಮತ್ತಷ್ಟು ಶಕ್ತಿ ಲಭಿಸತ್ತೆ ಎಂಬುದು ನನ್ನ ನಂಬಿಕೆ ಎಂದು ಶ್ರೀಗಳು ಹೇಳಿದರು.
ದೀಪೋತ್ಸವ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನ ಹಾಗೂ ಬಳೆ ಕೋಲಾಟ ಸ್ಪರ್ಧೆ ಏರ್ಪಡಿಸಲಾಗಿತ್ತು, ಸುತ್ತಮುತ್ತಲ ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಭಾಗಿಯಾಗಿದ್ದರು.
ಶಿವಮೊಗ್ಗದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಕಲಗೋಡು ರತ್ನಾಕರ, ಡಾ. ರಾಜನಂದಿನಿ ಕಾಗೋಡು, ಸಂಶೋಧಕ ಮಧುಗಣಪತಿ ಮಡೆನೂರು,ಬೇಗುವಳ್ಳಿ ಸತೀಶ್, ಎನ್ ಕೆ ನಾಯ್ಕ್, ಎನ್‌ಪಿ ಧರ್ಮರಾಜ್ ಮತ್ತಿತರರು ಹಾಜರಿದ್ದರು.