ದಮ್ಮು, ತಾಕತ್ತಿನ ಬಗ್ಗೆ ಹೇಳಿಕೆ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶರಾವತಿ ಸಂತ್ರಸ್ಥರ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ಯಾಕೆ ದಮ್ಮು, ತಾಕತ್ತು ಪ್ರದರ್ಶಿಸುತ್ತಿಲ್ಲ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸುವ ಕುರಿತು ವಿಶ್ವಾಸ ವ್ಯಕ್ತಪಡಿಲ್ಲ. ಕೇವಲ ಆಶ್ವಾಸನೆ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಅವರಿಗೆ ವರದಿ ಕೇಳಿದ್ದೇನೆ. ಬಳಿಕ ಕೇಂದ್ರ ಸರ್ಕಾರದ ಬಳಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಇದು ಶರಾವತಿ ಮುಳುಗಡೆ ಸಂತ್ರಸ್ಥರ ಗೊಂದಲಕ್ಕೆ ಕಾರಣವಾಗಿದೆ ಎಂದು ದೂರಿದರು.
ಗಡುವು ಮುಕ್ತಾಯ
೧೫ ದಿನದಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಭರವಸೆ ನೀಡಿದ್ದರು. ಆದರೆ ಅವರು ಕೇಳಿದ ೧೫ ದಿನದ ಗಡುವು ಶನಿವಾರಕ್ಕೆ ಪೂರ್ಣಗೊಂಡಿದೆ. ಇನ್ನು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕಿದೆ. ಅಲ್ಲದೇ ಒಂದೇ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ರೀತಿ ಹೇಳಿದರೆ ಸಂಸದರು ಇನ್ನೊಂದು ರೀತಿ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಮಾಡಿದ್ದಾರೆ ಎಂದರು.
ಹೈಕೋರ್ಟ್ ಸೂಡೂರು ಹಾಗೂ ಕೂಡಿ ಗ್ರಾಮದ ಎರಡು ಸರ್ವೇ ನಂಬರ್‌ಗಳಲ್ಲಿ ಡಿನೋಟಿಫೀಕೇಶನ್ ವಜಾ ಮಾಡಿದರೆ ರಾಜ್ಯ ಸರ್ಕಾರ ಎಲ್ಲಾ ೫೬ ನೋಟಿಫೀಕೇಶನ್‌ಗಳನ್ನು ವಜಾ ಮಾಡಿದೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಮೂಲಕ ನ್ಯಾಯಲಯಕ್ಕೆ ಸಂತ್ರಸ್ಥರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.
ಜನಾಕ್ರೋಶ ಹೋರಾಟಕ್ಕೆ ಸಜ್ಜು
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಕಾನೂನು ಬದ್ಧವಾಗಿ ಭೂ ಹಕ್ಕು ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಾ ಸಮಿತಿ ವತಿಯಿಂದ ನ.೨೮ ರಂದು ಆಯನೂರಿನಿಂದ ಜನಾಕ್ರೋಶ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಪಾದಯಾತ್ರೆಯಲ್ಲಿ ಭಾಗಿಯಾಗುವ ರೈತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯು ಆಯನೂರಿನಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್ ಮೂಲಕ ಎನ್‌ಇಎಸ್ ಮೈದಾನ ತಲುಪಲಿದೆ. ಸಂಜೆ ೪ ಗಂಟೆಗೆ ಎನ್‌ಇಎಸ್ ಮೈದಾನದಲ್ಲಿ ಸಮಾವೇಶ ನಡೆಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಕಲಗೋಡು ರತ್ನಾಕರ್, ಎನ್. ರಮೇಶ್, ಇಸ್ಮಾಯಿಲ್ ಖಾನ್, ಎಸ್.ಪಿ. ದಿನೇಶ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ,ಇಕ್ಕೇರಿ ರಮೇಶ್, ದೀಪಕ್ ಸಿಂಗ್, ಮಂಜುನಾಥ ಬಾಬು ಮೊದಲಾದವರು ಇದ್ದರು.
ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿ: ಶಾರದಾ ಪೂರ್ಯಾನಾಯ್ಕ್
ಶಿವಮೊಗ್ಗ :ಶರಾವತಿ ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿ ನ್ಯಾಯ ಒದಗಿಸಬೇಕು ಎಂದು ಜೆಡಿಎಸ್ ನಾಯಕಿ ಶಾರದ ಪೂರ್ಯಾನಾಯ್ಕ್ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್‌ನಲ್ಲಿ ಪರಿಸರವಾದಿ ಗಿರೀಶ್ ಆಚಾರ್ ಅವರು ದಾವೆ ಹೂಡಿರುವುದರಿಂದ ಸಂತ್ರಸ್ಥರ ಬದುಕು ಅತಂತ್ರವಾಗಿದೆ. ಸರ್ಕಾರ ರೈತರ ಪರವಾಗಿ ನಿಲ್ಲಬೇಕಿತ್ತು. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ಈಗ ಸಂತ್ರಸ್ಥರ ಅಸಹಾಯಕತೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
೨೦೧೭ರಲ್ಲಿ ಅಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಭೂಮಿಯ ಹಕ್ಕು ಕೊಡುವ ಉದ್ದೇಶಕ್ಕಾಗಿ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ಅವರಿಂದ ವರದಿ ತರಿಸಿ ಸುಮಾರು 13600 ಎಕರೆ ಜಮೀನಿಗೆ ಡಿನೋಟಿಫಿಕೇಷನ್ ಮಾಡಿಸಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಟ್ಟಿದ್ದರು. ಅದನ್ನು ಪ್ರಶ್ನಿಸಿ ಈಗ ಪರಿಸರವಾದಿ ಗಿರೀಶ್ ಆಚಾರ್ ಎಂಬುವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ತೀರ್ಪು ಕೂಡ ಸಂತ್ರಸ್ತರ ವಿರುದ್ಧವಾಗಿಯೇ ಬಂದಿದೆ ಎಂದರು.
ಸಂತ್ರಸ್ಥರ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ೫೬ ಅಧಿಸೂಚನೆಗಳು ಆಗಿದ್ದವು. ಅದರಲ್ಲಿ ಗಿರೀಶ್ ಆಚಾರ್ ದಾವೆ ಹೂಡಿದ್ದ2 ಡಿನೋಟಿಫಿಕೇಷನ್‌ಗಳಿಗೆ ಮಾತ್ರ ಸಂತ್ರಸ್ತರ ವಿರುದ್ಧ ಬಂದಿದೆ. ಸರ್ಕಾರ ಮಾತ್ರ ಒಟ್ಟಾರೆಯಾಗಿ ಎಲ್ಲಾ ಅಧಿಸೂಚನೆಗಳನ್ನು ಈ ತೀರ್ಪನ್ನು ಅನ್ವಯಿಸುವಂತೆ ಆದೇಶ ಮಾಡಿರುವುದರಿಂದ ಸಂತ್ರಸ್ಥರು ಕಂಗಾಲಾಗಿದ್ದಾರೆ. ನಾಡಿಗೆ ಬೆಳಕು ಕೊಟ್ಟು ತಾವು ಕತ್ತಲಲ್ಲಿದ್ದಾರೆ ಎಂದರು.
ರಾಜಕೀಯ ಗಿಮಿಕ್ ಮಾಡಿ, ಸಮಾವೇಶ ಮಾಡುವುದರಿಂದ ಸಾಧ್ಯವಿಲ್ಲ.
ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಮತ್ತು ಕೇಂದ್ರದ ಮೇಲೆ ಒತ್ತಡ ಹಾಕದೆ ಇರುವುದರಿಂದ ಸಂತ್ರಸ್ತರ ಸುಮಾರು 25ಸಾವಿರ ಕುಟುಂಬಗಳು ಈಗ ಬೀದಿಗೆ ಬಂದಿವೆ. ಈ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯಲು ಸಾಧ್ಯವಿಲ್ಲ. ತಾಂತ್ರಿಕ ತೊಂದರೆ ಇದೆ. ರಾಜ್ಯ ಸರ್ಕಾರ ಕೇಂದ್ರದ ಮೇಲ ಒತ್ತಡ ತಂದು ಮದನ್ ಗೋಪಾಲ್ ವರದಿಯಂತೆ ಡಿನೋಟಿಫಿಕೇಷನ್ ಮಾಡಿಸಿ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಿಸಬೇಕು. ಇಲ್ಲವಾದಲ್ಲಿ ಜೆಡಿಎಸ್ ಕೂಡ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದರು.
ರಾಜಕೀಯ ಗಿಮಿಕ್ ಮಾಡಿ, ಸಮಾವೇಶ ಮಾಡುವುದರಿಂದ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೆ ಇದೆ. ಈಗಲು ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಬಹುದು. ಈ ಬಗ್ಗೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಶಾರದಾ ಪೂರ್ಯಾನಾಯ್ಕ್ ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸತೀಶ್, ಬಸಪ್ಪ ಗೌಡ, ಸತೀಶ್, ಸುರೇಶ್, ಪ್ರದೀಪ್ ಪುರದಾಳು ಮತ್ತಿತರರು ಇದ್ದರು.