Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಅಧಿಕಾರಕ್ಕೆ ಬಂದರೆ ಮಲೆನಾಡಿನ ಸಮಸ್ಯೆ ಇತ್ಯರ್ಥ
ನುಡಿದಂತೆ ನಡೆವ ಕಾಂಗ್ರೆಸ್ ಪಕ್ಷ : ಸಿದ್ದಾರಾಮಯ್ಯ

ಶಿವಮೊಗ್ಗ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮಲೆನಾಡಿಗರ ಸಮಸ್ಯೆಯನ್ನು ಶೇ. ೧೦೦ರಷ್ಟು ಬಗೆಹರಿಸುವ ಭರವಸೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದಾರೆ.
ಸೋಮವಾರ ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಜರುಗಿದ ಮಲೆನಾಡ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೋರಾಟಕ್ಕೆ ಸಾಕ್ಷಿಯಾದ ಈ ಜಿಲ್ಲೆಯಲ್ಲಿ ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ ರೈತ ಪರ ಹೋರಾಡಿದವರು. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಗೋಡು ಅವರು ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನು ತಂದಿದ್ದಾಗ ಅರಣ್ಯ ಇಲಾಖೆಯ ಮುಖ್ಯ ಕಾರ್‍ಯದರ್ಶಿಯಾಗಿದ್ದ ಮದನ್‌ಗೋಪಾಲ್ ನೇತೃತ್ವದಲ್ಲಿ ಸಮಿತಿ ರ ಚಿಸಿ ೩೦ ಸಾವಿರ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ಮುಂದಡಿ ಇಡಲಾಗಿತ್ತು.9954 ಎಕ್ರೆ ಜಮೀನನ್ನು ನೀಡಲಾಗಿತ್ತು.1800 ಜನರಿಗೆ ಹಕ್ಕುಪತ್ರವನ್ನು ಕೊಡಲಾಗಿತ್ತು. 2019ರಲ್ಲಿ ಗಿರೀಶ್ ಆಚಾರ್ ಎನ್ನುವವರು ಈ ಸಂಬಂಧ ಹೈಕೋರ್ಟನಲ್ಲಿ ತಡೆಯಾಜ್ಞೆ ತಂದಾಗ ಸರಕಾರ ಹೊರಡಿಸಿದ್ದ ಎಲ್ಲಾ ೫೬ ಡಿನೋಟಿಫಿಕೇಶನ್‌ನನ್ನು ರದ್ದುಗೊಳಿಸಿತು. ಇದಕ್ಕೆ ಕೇಂದ್ರದ ಅನುಮತಿ ಪಡೆದಿಲ್ಲ ಎಂದು ಹೇಳಿ ಅಪೀಲು ಹೋಗಿದ್ದನ್ನೂ ವಜಾ ಮಾಡಿತು. ಇದರಿಂದಾಗಿ ಸಂತ್ರಸ್ತರ ಸಮಸ್ಯೆ ನೆನೆಗುದಿಗೆ ಬಿದ್ದಿತು ಎನ್ನುವುದನ್ನು ವಿವರಿಸಿದರು.


ಆದರೆ ಈಗಿನ ಸರಕಾರ ಈ ಆದೇಶವನ್ನೇ ಇಟ್ಟುಕೊಂಡು ಸಮಯ ಕಳೆಯಿತೇ ವಿನಾ ಕೇಂದ್ರದ ಅನುಮತಿ ಪಡೆಯುವ ಗೋಜಿಗೆ ಹೋಗಲಿಲ್ಲ. ಕೇಂದ್ರದಲ್ಲೂ ಅವರದ್ದೇ ಸರಕಾರವಿದ್ದಾಗ ಅನುಮತಿ ಪಡೆಯಬಹುದಿತ್ತು. ಆ ಕೆಲಸ ಮಾಡದೆ ಈಗ ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ೯೪ ಸಿ ಮತ್ತು ೯೪ ಸಿಸಿ ಅಡಿ ಅರ್ಜಿ ಸಲ್ಲಿಸಿದವರಿಗೂ ಭೂಮಿ ಕೊಟ್ಟಿಲ್ಲ. ಭೂಮಿ ಕೊಡಬಾರದೆಂದು ಹೈಕೋರ್ಟ್ ಎಲ್ಲಿಯೂ ಹೇಳಿಲ್ಲ. ರೈತರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ೪೦ ಪರ್ಸೆಂಟ್ ಕಮಿಷನ್‌ನಲ್ಲಿ ಮುಳುಗಿದ್ದಾರೆಂದು ಟೀಕಿಸಿದರು.ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ ರೈತರ ಸಮಸ್ಯೆಗಳನ್ನು ತೆರೆದಿಟ್ಟರು.

ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸ್ವಾಗತಿಸಿದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಚ್.ಎಂ. ರೇವಣ್ಣ, ಕಿಮ್ಮನೆ ರತ್ನಾಕರ,ಶಿವಮೂರ್ತಿ ನಾಯ್ಕ್, ಕೆಪಿಸಿಸಿ ಕಾರ್‍ಯಾಧ್ಯಕ್ಷ ಧ್ರುವನಾರಾಯಣ, ಎಐಸಿಸಿ ಕಾರ್‍ಯದರ್ಶಿ ಮಯೂರ್ ಜಯಕುಮಾರ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕೆ. ಬಿ. ಪ್ರಸನ್ನಕುಮಾರ್, ಹೆಚ್.ಎಂ.ಚಂದ್ರಶೇಖರಪ್ಪ, ಡಿ. ಬಿ. ಬಸವನಗೌಡ, ಕೆಪಿಸಿಸಿ ಕಿಸಾನ್ ಮೋರ್ಚಾ ಅಧ್ಯಕ್ಷ ಸಚಿನ್ ಮೀಗಾ, ಕಾರ್‍ಯಕ್ರಮದ ಸಂಚಾಲಕ, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಶಾಸಕ ಬಿ. ಕೆ. ಸಂಗಮೇಶ್, ಇಸ್ಮಾಯಿಲ್ ಖಾನ್, ಮುಖಂಡರಾದ ಎಸ್.ರವಿಕುಮಾರ್,ಬಲದೇವಕೃಷ್ಣ, ಡಾ.ಶ್ರೀನಿವಾಸ್, ಡಾ.ರಾಜನಂದಿನಿ, ತೀ.ನ.ಶ್ರೀನಿವಾಸ್,ಪಾಲಿಕೆ ಸದಸ್ಯ ಹೆಚ್.ಸಿ.ಯೋಗಿಶ್ ಮೊದಲಾದವರಿದ್ದರು. ಕಾರ್‍ಯಕ್ರಮವನ್ನು ಶರಾವತಿ ಸಂತ್ರಸ್ತರಾದ ನಾರಾಯಣ ಶೆಟ್ಟಿ, ದೇವೇಂದ್ರ ಮತ್ತು ಪ್ರಭಾಕರ ಎನ್ನುವವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. ಮಲೆನಾಡಿನ ಸಮಸ್ಯೆಗಳ ಅಧ್ಯಯನ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಅವರ ತಂಡ ವರದಿ ಸಲ್ಲಿಸಿತು. ಎಸ್.ಪಿ.ದಿನೇಶ್ ಕಾರ್ಯಕ್ರಮ ನಿರೂಪಿದರು. ಕಲಗೋಡು ರತ್ನಾಕರ್ ವಂದಿಸಿದರು. ಹುಮಾಯೂನ್ ಹರ್ಲಾಪುರ್ ಅವರಿಂದ ಸಂಗೀತ ಕಾರ್ಯಕ್ರಮವಿತ್ತು.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಈಗ ಕೊಡುತ್ತಿರುವ 5 ಕೆಜಿ ಅಕ್ಕಿಯ ಬದಲು 10 ಕೆಜಿ ಅಕ್ಕಿಯನ್ನು ಕೊಡಲಾಗುವುದು. ಮೊನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರದಿಂದ ಬಂದ ಅಕ್ಕಿಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆಂಬ ಸುಳ್ಳನ್ನು ಹೇಳಿದ್ದಾರೆ. ಆದರೆ ಆಹಾರ ಭದ್ರತೆ ಕಾಯಿದೆಯನ್ನು ಜಾರಿಗೆತಂದವರಾರು ಎನ್ನುವುದನ್ನು ಅವರು ಹೇಳಿಲ್ಲ.10 ಕೆಜಿ ಅಕ್ಕಿಯನ್ನು ಉಚಿತವಾಗಿ ಜಾತಿ, ಮತ ನೋಡದೆ ಎಲ್ಲರಿಗೂ ಕೊಡಲಾಗಿದೆ. ಆದರೆ ನೀವೇಕೆ ಅದನ್ನು ೫ ಕೆಜಿಗೆ ಇಳಿಸಿದ್ದೀರಿ. ಈ ಅಕ್ಕಿ ಕೇಂದ್ರದ್ದೇ ಆಗಿದ್ದರೆ ಬಿಜೆಪಿ ಆಳ್ವಿಕೆ ಇರುವ ಉಳಿದ ರಾಜ್ಯದವರೇಕೆ ಈ ಯೋಜನೆ ಜಾರಿಗೆ ತರಲಿಲ್ಲ. ಸುಳ್ಳು ಹೇಳುವುದನ್ನು ಮೊದಲು ಬಿಜೆಪಿ ನಿಲ್ಲಿಸಿ, ಸತ್ಯ ಬಾಯ್ಬಿಡುವ ಕೆಲಸ ಮಾಡಬೇಕು.

ಸಿದ್ದರಾಮಯ್ಯ

ಅಡಿಕೆ ಮಂಡಳಿಯ ರಚನೆ,

ಶಿವಮೊಗ್ಗ: ಅಡಿಕೆ ಮಂಡಳಿಯ ರಚನೆ, ಮಲೆನಾಡು ಮತ್ತು ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ರಚನೆ, ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕೆಬ್ಬಿಸದಿರುವುದು.. ಇವು ಕಾಂಗ್ರೆಸ್ ಮುಂದಿರುವ ರೈತಪರ ಯೋಜನೆಗಳೆಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಗೋಳು ಸಂಕಷ್ಟ ಹೇಳತೀರದಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆ, ಅಡಿಕೆ ರೋಗದ ಸಮಸ್ಯೆ, ಹಕ್ಕುಪತ್ರ, ಬಗರ್ ಹುಕುಂ ಈ ರೀತಿ ಸಮಸ್ಯೆಗಳನ್ನು ಪಕ್ಷದ ಮುಖಂಡರು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಮಲೆನಾಡಿನ ರೈತರ ಸಮಸ್ಯೆ ಪರಿಹರಿಸಲು ಒಂದು ಸಮಿತಿಯನ್ನು ರಮೇಶ್ ಹೆಗ್ಡೆ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಅವರು ವರದಿ ನೀಡಿದ್ದಾರೆ. ಅದನ್ನು ಸಂಪೂರ್ಣವಾಗಿ ಓದಿದ ನಂತರ ಪರಿಹಾರಕ್ಕೆ ಕ್ರಮ ಜರುಗಿಸಲಾಗುವುದು ಎಂದರು.
ಸಂತ್ರಸ್ತರಾದವರಿಗೆ ಮನೆ, ಸಹಿತ ಎಲ್ಲಾ ಮೂಲಸೌಕರ್‍ಯ ಕೊಡಬೇಕೆಂಬ ಆದೇಶ ೧೯೫೯ರಲ್ಲೇ ಆಗಿದೆ. ಮನೆಗಾಗಿ ಜಮೀನನ್ನು ಕಂದಾಯ ಅಥವಾ ಅರಣ್ಯ ಜಾಗದಲ್ಲಿ ಕೊಡಬಹುದು. ಅದಕ್ಕಾಗಿ ೫೬ ಅಧಿಸೂಚನೆಯನ್ನು ಕಾಂಗ್ರೆಸ್ ಸರಕಾರ ಹೊರಡಿಸಿತ್ತು. ಆದರೆ ಇಂದಿನ ಹೃದಯವಿಲ್ಲದ ಸರಕಾರ ಏನನ್ನೂ ಮಾಡದೆ ಬರೇ ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದೆ ಎಂದರು.


ಈ ಜಿಲ್ಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಹಿತ ೬ ಬಿಜೆಪಿ ಶಾಸಕರಿದ್ದಾರೆ. ಅವರೇಕೆ ಇಲ್ಲಿಯವರೆಗೆ ರೈತರ ಸಮಸ್ಯೆ ಬಗೆಹರಿಸಲಿಲ್ಲ. ಅರ್ಜಿಯನ್ನು ವಜಾ ಮಾಡಲಿಕ್ಕೆ, ರೈತರನ್ನು ಒಕ್ಕಲೆಬ್ಬಿಸಲಿಕ್ಕೆ ಮಾತ್ರ ಇವರಿಗೆ ಅಧಿಕಾರವಿದೆಯೇ, ಅಡಿಕೆಗೆ ರೋಗ ಬಂದರೆ ಪರಿಹಾರ ಸೂಚಿಸುವ ಅಧಿಕಾರ ನಿಮಗಿಲ್ಲವೇ, ನಿಮ್ಮದೇ ಪಕ್ಷದ ನಾಯಕ ಅಮಿತ್ ಶಾ ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವ ಸುಳ್ಳು ಹೇಳಿ ಹೋದರು. ಆ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತಿಲ್ಲ, ರೈತರಿಗೇನು ಉತ್ತರ ಕೊಡುತ್ತೀರಿ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಯಿತು. ಇದರಲ್ಲಿ ಹೂಡಿಕೆದಾರರು ಶಿವಮೊಗ್ಗಕ್ಕೇಕೆ ಹಣ ಹೂಡಲು ಬರಲಿಲ್ಲ. ಇಲ್ಲಿ ಗಲಾಟೆ, ಕೋಮುಗಲಭೆ, ಅಶಾಂತಿ ಸೃಷ್ಟಿಸುವುದರಲ್ಲೇ ಬಿಜೆಪಿಯವರು ನಿರತರಾಗಿದ್ದಾರೆ. ಇದರಿಂದ ಇಲ್ಲಿಗೆ ಯಾರೂ ಬರುತ್ತಿಲ್ಲ. ಇದನ್ನೆಲ್ಲ ಜನ ಯೋಚಿಸಬೇಕು. ನಗರ ಅಭಿವೃದ್ಧಿಯಾಗಬೇಕಾದರೆ ಹೊರಗಿನಿಂದ ಹೂಡಿಕೆದಾರರು ಬರಬೇಕು, ಹಾಗಾದರೆ ಹೂಡಿಕೆಗೆ ಬಂದವರೆಲ್ಲ ಬೇರೆ ಊರನ್ನೇ ಏಕೆ ಆಯ್ಕೆ ಮಾಡಿಕೊಂಡರು.
ಡಿ ಕೆ. ಶಿವಕುಮಾರ್

Ad Widget

Related posts

ಅನ್ನದಾತರ ಆಕ್ರೋಶ ಸರಕಾರ ಸುಡಲಿದೆ

Malenadu Mirror Desk

ಸ್ಥಳೀಯ ಸಮಸ್ಯೆಗಳ ಇತ್ಯರ್ಥಕ್ಕೆ ನಿರಂತರ ಹೋರಾಟ, ಜನ್ಮದಿನ ಆಚರಿಸಿಕೊಂಡ ಮಾಜಿ ಶಾಸಕ ಮಧುಬಂಗಾರಪ್ಪ ಸಂಕಲ್ಪ

Malenadu Mirror Desk

ಹಿಂದೂ ಧರ್ಮದಲ್ಲಿ ಸಾಮಾಜಿಕ ಪರಿವರ್ತನೆ ಆಗತ್ಯ: ಜಡೆ ಮಹಾಂತ ಸ್ವಾಮೀಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.