Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಮಲೆನಾಡ ಜನಾಕ್ರೋಶ ಸಮಾವೇಶ :ಕಾಂಗ್ರೆಸ್ ಪಕ್ಷದ ಶಕ್ತಿಪ್ರದರ್ಶನ

ಶಿವಮೊಗ್ಗ,ನ.:ಶರಾವತಿ ಸಂತ್ರಸ್ತರ ಭೂಮಿಯ ಹಕ್ಕು, ಅಡಕೆ ಎಲೆಚುಕ್ಕಿ ರೋಗ, ಅರಣ್ಯ ಭೂಮಿ ಸಮಸ್ಯೆ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸೋಮವಾರ ನಡೆಸಿದ ಮಲೆನಾಡು ಜನಾಕ್ರೋಶ ಸಮಾವೇಶ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿತು.
ಶರಾವತಿ ಸಂತ್ರಸ್ತರ ಭೂಮಿಗೆ ಹಕ್ಕು ಪತ್ರ ನೀಡಲು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಮಾಡಿದ್ದ ೫೬ ಡಿನೋಟಿಫಿಕೇಷನ್ ಆದೇಶಗಳನ್ನು ರದ್ದು ಮಾಡಿರುವ ಬಿಜೆಪಿ ಸರಕಾರದ ನಡೆ ಖಂಡಿಸಲು ರೂಪಿಸಿದ್ದ ಮಲೆನಾಡ ಜನಾಕ್ರೋಶ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿತು. ಆಯನೂರಿನಿಂದ ಬೆಳಗ್ಗೆ ಆರಂಭವಾಗಿದ್ದ ಪಾದಯಾತ್ರೆಯನ್ನು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ಸಿಗೆ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು. ಆಯನೂರಿನಿಂದ ಸುಮಾರು ೨೩ ಕಿಲೋಮೀಟರ್ ಪಾದಯಾತ್ರೆಯಲ್ಲಿ ಶರಾವತಿ ಸಂತ್ರಸ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡು ಸರಕಾರದ ರೈತವಿರೋಧಿ ನೀತಿಯನ್ನು ಖಂಡಿಸಿದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಅವರ ನೇತೃತ್ವದಲ್ಲಿ ಆರಂಭವಾದ ಪಾದಯಾತ್ರೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಯುವಕರು ಹಾಗೂ ಹಿರಿಯ ಜೀವಗಳೂ ತಮಗೆ ಭೂಮಿ ಹಕ್ಕು ಕೊಡಬೇಕೆಂದು ಆಗ್ರಹಿಸಿ ದಣಿವರಿಯದೆ ಪಾದಯತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಕಾರ್, ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ನ ಅನೇಕ ಮುಖಂಡರೊಡಗೂಡಿ ಹೆಜ್ಜೆಹಾಕಿದರು. ಪಕ್ಷದ ನಾಯಕರನ್ನು ಕಾರ್ಯಕರ್ತರು ಅನುಸರಿಸಿದರು. ನಡಿಗೆಯ ಮಧ್ಯೆ ಪಾದಯಾತ್ರಿಗಳಿಗೆ ಕುಡಿಯುವ ನೀರನ್ನು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ೧೨ ಗಂಟೆಯಿಂದಲೇ ಸಾಗರ ರಸ್ತೆಯ ಶರಾವತಿ ಡೆಂಟಲ್ ಕಾಲೇಜು ಸಮೀಪ ತಲುಪಿದ ಕಾರ್ಯಕರ್ತರು ಅಲ್ಲಿ ಊಟ ಮಾಡಿದರು. ಶರಾವತಿ ಡೆಂಟಲ್ ಕಾಲೇಜು ಸಮೀಪದ ಮೈದಾನದಲ್ಲಿ ಪೆಂಡಾಲ್ ಹಾಕಿ ಊಟದ ವ್ಯವಸ್ಥೆ ಮಾಡಲಾಗಿತ್ತು. ೨೦ಕ್ಕೂ ಹೆಚ್ಚು ಕೌಂಟರ್‌ಗಳನ್ನು ಮಾಡಿದ್ದು, ಅತ್ಯಂತ ಶಿಸ್ತಿನಿಂದ ಅನ್ನ ದಾಸೋಹ ನಡೆಯಿತು. ಅನ್ನ ಸಾಂಬಾರ್ ಹಾಗೂ ಹೆಸರುಕಾಳು ಪಲ್ಯವನ್ನು ಮಾಡಲಾಗಿತ್ತು. ೧೨ ಗಂಟೆಯಿಂದ ಮೂರು ಗಂಟೆವರೆಗೂ ಬಂದ ಕಾರ್ಯಕರ್ತರಿಗೆ ಊಟ ಬಡಿಸಲಾಯಿತು.

ಸಮಾವೇಶಕ್ಕೆ ಜನಸಾಗರ:


ಮಧ್ಯಾಹ್ನ ನಾಲ್ಕು ಗಂಟೆಗೆ ಸಮಾವೇಶ ಆರಂಭ ಎಂದು ಹೇಳಿದ್ದರೂ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಗಿದ್ದರಿಂದ ಕಾರ್ಯಕ್ರಮ ಒಂದು ತಾಸು ತಡವಾಗಿ ಆರಂಭವಾಗಿತ್ತು. ಸಮಾವೇಶಕ್ಕೆ ಜಿಲ್ಲೆಯಾದ್ಯಂತ ಶರಾವತಿ ಸಂತ್ರಸ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಮೊದಲೇ ಹಾಕಿದ್ದ ಆಸನಗಳು ಸಾಲದೆ ಹೆಚ್ಚುವರಿ ಖುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರತ್ಯೇಕ ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದರು. ನಾಯಕರು ವೇದಿಕೆಗೆ ಬರುತಿದ್ದಂತೆ ಕಾರ್ಯಕರ್ತರು ಜಯಘೋಷ ಕೂಗಿ ಬೆಂಬಲ ವ್ಯಕ್ತಪಡಿಸಿದರು.


ಹೌದು ಹುಲಿಯಾ ಘೋಷಣೆ:


ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲಿ ಬಿಜೆಪಿ,ಪ್ರಧಾನಿ, ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ,ಈಶ್ವರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಅವರು ಮಾತನಾಡುವಾಗ ಕಾರ್ಯಕರ್ತರು ಹೌದು ಹುಲಿಯಾ ಎಂದು ಘೋಷಣೆ ಕೂಗುವ ಮೂಲಕ ತಮ್ಮ ನಾಯಕನನ್ನು ಬೆಂಬಲಿಸಿದರು. ಬಿಜೆಪಿಯ ಬದ್ಧತೆ ಏನು ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಂತೆ, ೪೦ ಪರ್ಸೆಂಟ್ ಎಂದು ಕಾರ್ಯಕರ್ತರೇ ಕೂಗಿ ಹೇಳುತ್ತಿದ್ದರು.
ಶಿವಮೊಗ್ಗದ ನಾಯಕರ ಆಸ್ತಿ ಪ್ರಸ್ತಾಪ:
ಶಿವಮೊಗ್ಗ ಜಿಲ್ಲೆ ಹೋರಾಟಗಳ ತವರೂರು, ಇಲ್ಲಿ ಅನೇಕ ಕ್ರಾಂತಿಕಾರಕ ಹೋರಾಟಗಳು ನಡೆದಿವೆ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಿಂದಾಗಿ ಇಲ್ಲಿನ ಜನರಿಗೆ ಭೂಮಿಯ ಹಕ್ಕುದಾರಿಕೆ ಸಿಕ್ಕಿದೆ. ಕಾಗೋಡು ತಿಮ್ಮಪ್ಪ ಅವರು ಇಲ್ಲಿನ ಸ್ವಚ್ಛ ರಾಜಕಾರಣದ ಸಾಕ್ಷಿಪ್ರಜ್ಞೆಯಂತೆ ಇದ್ದಾರೆ. ಅವರ ಜೀವನವೇ ಹೋರಾಟ, ಆಸ್ತಿ ಮಾಡಲಿಲ್ಲ ಅವರು. ಆದರೆ ಈ ಜಿಲ್ಲೆಯ ಬಿಜೆಪಿ ನಾಯಕರುಗಳು ದಶದಿಕ್ಕುಗಳಿಗೂ ಆಸ್ತಿ ಮಾಡಿದ್ದಾರೆ. ಇವರಿಗೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರ ಲೂಟಿಗೆ ಪ್ರಧಾನಿ ನರೇಂದ್ರ ಮೋದಿ ಅವರ ರಕ್ಷಣೆ ಇದೆ ಎಂದು ಹೇಳಿದರು.

ಅಚ್ಚುಕಟ್ಟಾದ ವೇದಿಕೆಯಲ್ಲಿ ಮುಖಂಡರದ್ದೇ ಅಶಿಸ್ತು:


ಎನ್‌ಇಎಸ್ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾದ ವೇದಿಕೆ, ಡಿಜಿಟಲ್ ಬ್ಯಾಕ್ ಡ್ರಾಪ್ ವ್ಯವಸ್ಥೆ ಇತ್ತು. ಆದರೆ ಕಾಂಗ್ರೆಸ್‌ನ ಮೂರನೇ ಹಂತದ ಮುಖಂಡರುಗಳು ಎಂದಿನಂತೆ ತಮ್ಮ ಅಶಿಸ್ತನ್ನು ಮುಂದುವರಿಸಿದರು. ನಾಯಕರನ್ನು ವೇದಿಕೆಗೆ ಕರೆದೊಯ್ಯುವಾಗ ಮತ್ತು ಅವರು ಜನರಿಗೆ ಕೈ ಬೀಸುವಾಗ ನೂಕುನುಗ್ಗಲು ಮಾಡಿದರು. ನಿರೂಪಕರು ವೇದಿಕೆಯಿಂದ ಇಳಿಯಿರಿ ಎಂದು ಎಷ್ಟು ಕೇಳಿದರು ಸ್ಪಂದಿಸಲಿಲ್ಲ.
ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಅವಕಾಶ ಕೊಡದ ಕಾರಣ ಕಾರ್ಯಕ್ರಮ ನಡೆವಾಗ ಸೆಲ್ಫಿ ಕಿರಿಕಿರಿ ಇರಲಿಲ್ಲ.
ಸಂಗಮೇಶ್‌ಅವರ ಮುಂಡೇಮಕ್ಕಳು ಹೇಳಿಕೆ:
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಮಾತನಾಡುವಾಗ ಬಿಜೆಪಿಯವರು ಶಾಂತಿ ಸಔಹಾರ್ದತೆಗೆ ಕೊಳ್ಳಿ ಇಡುತ್ತಾರೆ. ಇವರ ಮನೆ ಹಾಳಾಗ, ಈ ಮುಂಡೇ ಮಕ್ಳು ಜನರಿಗೆ ಒಳ್ಳೆದು ಮಾಡಲ್ಲ. ಆಸ್ತಿ ಮಾಡುವಲ್ಲಿ ಇವರು ಎತ್ತಿದಕೈ ಎಂದು ಮತ್ತೆ ಮತ್ತೆ ಹೇಳಿದ್ದು, ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ಮಲೆನಾಡಿಗರ ಸಮಸ್ಯೆಯನ್ನು ಮುಂದಿಟ್ಟುಕೊಂಡ ಹೋರಾಟ ಆರಂಭಿಸಲಾಗಿದೆ.ಹಿಂದಿನ ಕಾಂಗ್ರೆಸ್ ಸರ್ಕಾರ ರೈತರಿಗೆ ಕೊಟ್ಟ ಭೂಮಿಯನ್ನು ರಾಜ್ಯ ಸರ್ಕಾರ ನೋಟಿಫೈ ಮಾಡಿದೆ.ಆದರೆ, ಇನ್ನೂ,ಕಾಲ ಮಿಂಚಿಲ್ಲ,ಸಂತ್ರಸ್ಥರ ಭೂಮಿಯನ್ನು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು.
ಕಾಗೋಡು ತಿಮ್ಮಪ್ಪ,ಮಾಜಿ ಸಚಿವರು

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡಲು ಡಿನೋಟಿಫಿಕೇಷನ್ ಮಾಡಲಾಗಿತ್ತು.ಆದರೆ ಬಿಜೆಪಿ ಸರ್ಕಾರ ಡಿನೋಟಿಫಿಕೇಷನ್ ರದ್ದು ಮಾಡುವ ಮೂಲಕ ಮುಳುಗಡೆ ರೈತರನ್ನು ಬೀದಿ ಪಾಲು ಮಾಡಿದ್ದಾರೆ.ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆದು ಭೂಮಿ ಹಂಚಿಕೆ ಮಾಡಬೇಕು.

ಮಧುಬಂಗಾರಪ್ಪ.ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರು

Ad Widget

Related posts

ಮಧು ಬಂಗಾರಪ್ಪ ಕಾಂಗ್ರೆಸ್‍ಗೆ ಬಂದರೆ ಸ್ವಾಗತ: ಬೇಳೂರು ಗೋಪಾಲಕೃಷ್ಣ

Malenadu Mirror Desk

ಸಮಾಜವಾದಿ ಚಳವಳಿ ಯಶಸ್ಸಿನಲ್ಲಿ ಮಾಧ್ಯಮ ಪಾತ್ರ ದೊಡ್ಡದು

Malenadu Mirror Desk

ಶಿವಮೊಗ್ಗದಲ್ಲಿ ಆ. 20 ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ವಿಸ್ತರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.