ಶಿರಸಿ: ಯುವ ಜನತೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಾವಲುಗಾರರಾಗದೇ ಹೋದರೆ ಮುಂದಿನ ಭವಿಷ್ಯ ಉಜ್ವಲವಾಗಿರಲು ಸಾಧ್ಯವಿಲ್ಲ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಡಿಜಿಟಲ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್, ಎಲ್ಎಂಎಸ್ ಉದ್ಘಾಟಿಸಿ ಮತ್ತು ಕಾಲೇಜು ಮುಂಭಾಗದ ರಸ್ತೆ ಹಾಗೂ ಕಾಲೇಜಿನ ವಾಹನಗಳ ನಿಲ್ದಾಣ ಕಾಮಗಾರಿ ಶಂಕಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ನಮ್ಮಲ್ಲಿ ಅನುದಾನದ ಕೊರತೆ ಇಲ್ಲ, ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಪ್ರಾಂಶುಪಾಲರಾದ ದಕ್ಷಾಯಿಣಿ ಹೆಗಡೆ ಅವರ ನೇತೃತ್ವದಲ್ಲಿ ಕಾಲೇಜು ಉತ್ತಮವಾಗಿ ನಡೆಯುವ ಜತೆಗೆ ಅಭಿವೃದ್ಧಿ ಹೊಂದುತ್ತಿದ್ದು, ಉಪನ್ಯಾಸಕರು, ಸಿಬ್ಬಂದಿ ಅವರಿಗೆ ಸಹಕರಿಸಿದಾಗ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಕಾಲೇಜಿಗೆ ಸಮರ್ಪಕವಾಗಿ ಅನುದಾನ ನೀಡಿ ಅಭಿವೃದ್ಧಿ ಪಡಿಸಿ ನ್ಯಾಕ್ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಹಕರಿಸಲಾಗುವುದು. ವಿದ್ಯಾರ್ಥಿಗಳು ಸ್ವಯಂ ಶಿಸ್ತಿನ ಜತೆಗೆ ದೇಶಾಭಿಮಾನ ಹೊಂದಿದಾಗ ಸಮಾಜ ಹಾಗೂ ವ್ಯವಸ್ಥೆಗಳು ಸರಿದಾರಿಯಲ್ಲಿ ನಡೆಯಲು ಅನುಕೂಲವಾಗುತ್ತದೆ. ರಸ್ತೆ, ವಾಹನಗಳ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರಾಂಶುಪಾಲರಾದ ಡಾ.ದಕ್ಷಾಯಿಣಿ ಜಿ.ಹೆಗಡೆ ಮಾತನಾಡಿ, ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ವಿಧಾನ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಕಾರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮ ಉಪನ್ಯಾಸಕ ವರ್ಗವಿದ್ದು ಹೊಸ ಕೋರ್ಸುಗಳನ್ನು ತೆರೆಯುವ ಚಿಂತನೆ ಇದೆ ಎಂದರು.
ಕುಮಟ ಬಾಳಿಗ ವಾಣಿಜ್ಯ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕ ಡಾ.ಶಿವಾನಂದ ಬುಳ್ಳ ಮಾತನಾಡಿ, ಮಕ್ಕಳು ಎಲ್ಲಾ ರೀತಿಯ ಜ್ಞಾನ ಪಡೆಯಲು ಡಿಜಿಟಲ್ ಲೈಬ್ರರಿ ಅನುಕೂಲವಾಗಲಿದೆ ಎಂದರು.
ಕುಳವೆ ಗ್ರಾ.ಪಂ ಅಧ್ಯಕ್ಷ ವಿನಯ್ ಭಟ್, ಉಪಾಧ್ಯಕ್ಷೆ ಜ್ಯೋತಿ, ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ್, ಉಪಾಧ್ಯಕ್ಷೆ ವೀಣಾ, ನಗರ ಯೋಜನೆ ಪ್ರಾಧಿಕಾರದ ಅಧಿಕಾರಿ ನಂದನ್ ಸಾಗರ್, ಕಾಲೇಜಿನ ವಿವಿಧ ವೇದಿಕೆಗಳ ಸಂಚಾಲಕರಾದ ಡಾ.ಸತೀಶ್ ಎನ್. ನಾಯ್ಕ್, ವಿಶ್ವಲಿಂಗ ಪ್ರಸಾದ್, ವಿ.ಬಿ.ಭುವನೇಶ್ವರ್, ಡಾ.ಸಿ.ಎಸ್.ಲೋಕೇಶ್, ವಿ.ರೀತಾ, ಎಸ್.ಮಂಜುನಾಥ್, ಪೊಲೀಸ್ ಉಪ ನಿರೀಕ್ಷಕ ಈರಣ್ಣಯ್ಯ ಸೇರಿದಂತೆ ಕುಳವೆ ಗ್ರಾ.ಪಂ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕರಾದ ಬಿ.ಪ್ರಕಾಶ್ ಸ್ವಾಗತಿಸಿ, ವಿ.ರೀತಾ ನಿರೂಪಿಸಿ, ಅನಿತಾ ಭಟ್ ಅತಿಥಿ ಪರಿಚಯಿಸಿದರು.