ಸೊರಬ : ನೆನೆಗುದಿಯಲ್ಲಿರುವ ತಾಲ್ಲೂಕಿನ ದಂಡಾವತಿ ಯೋಜನೆಗೆ ಬದಲಾಗಿ ಸರಣಿ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿ, ರೈತ ಹಿತ ಕಾಯಲಾಗುವುದು ಎಂದು ಶಾಸಕ ಕುಮಾರ ಬಂಗಾರಪ್ಪ ತಿಳಿಸಿದರು.
ಮಂಗಳವಾರ ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಚೀಲನೂರು, ಕಾಸರಗುಪ್ಪೆ, ತಲಕಾಲಕೊಪ್ಪ, ಕುಪ್ಪೆ, ದೂಗೂರು, ಹಲಸಿನಕೊಪ್ಪ, ಹೊಳೆಕೊಪ್ಪ, ಕೈಸೋಡಿ ಮೈಸಾವಿ, ಕಾನಳ್ಳಿ ಗ್ರಾಮಗಳಲ್ಲಿ ರೂ. ೧೩೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ದಂಡಾವತಿ ನದಿಗೆ ಡ್ಯಾಂ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿತ್ತು. ಆದರೆ ಯೋಜನಾ ದಡದಲ್ಲಿರುವ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುವುದನ್ನು ಮನಗಂಡು ಅಣೆಕಟ್ಟು ಬದಲಾಗಿ ವಿವಿಧೆಡೆ ಬ್ಯಾರೇಜ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಸರ್ಕಾರ ೬೫೦ ಕೋಟಿ ರೂ. ಅನುದಾನಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ತಿಂಗಳ ಮೊದಲ ವಾರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಬಗರ್‌ಹುಕುಂ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತನೆ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ದರಿಂದ ಬಗರ್‌ಹುಕುಂ ಸಾಗುವಳಿದಾರರು ಆತಂಕಪಡಬೇಕಿಲ್ಲ ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸರ್ಕಾರದಿಂದ ವಿವಿಧ ಇಲಾಖೆಯಡಿ ಬಿಡುಗಡೆಗೊಂಡಿರುವ ಅನುದಾನವನ್ನು ಕ್ರೂಡೀಕರಿಸಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ. ಗ್ರಾಮಸ್ಥರು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸೌಹಾರ್ದತೆಯಿಂದ ವರ್ತಿಸಿ ಗುಣಮಟ್ಟದ ಕಾಮಗಾರಿ ನಡೆಯಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಪ್ರತಿ ಹೋಬಳಿಗೂ ಕನಿಷ್ಠ ರೂ. ೧೦೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ೧೪ ಗ್ರಿಡ್‌ಗಳನ್ನು ಸ್ಥಾಪಿಸಲಾಗಿದೆ. ರೈತರ ಹೊಲಗಳಿಗೆ ತೆರಳಲು ೩೦ ಕಿ.ಮೀ. ರಸ್ತೆಗೆ ಮಂಜೂರಾತಿ ದೊರತಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ೫೦೦ ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲು ಗುರಿ ಹೊಂದಲಾಗಿದೆ ಎಂದರು.
ಕೆರೆಗಳಲ್ಲಿನ ಹೂಳೆತ್ತಲು ಕೆರೆ ಸಮಿತಿ ರಚಿಸಿಕೊಂಡು ಹೂಳನ್ನು ಬೇರೆಡೆ ಸ್ಥಳಾಂತರಿಸಲು ಗ್ರಾಮಸ್ಥರು ಮುಂದಾಗಬೇಕು. ಜೆಸಿಬಿ ಯಂತ್ರವನ್ನು ತಾಲ್ಲೂಕು ಆಡಳಿತದಿಂದ ಒದಗಿಸಲಾಗುವುದು ಎಂದ ಅವರು, ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಪಡೆಯಬೇಕಾದರೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡಾಗ ಮಾತ್ರ ಸರ್ಕಾರದಿಂದ ಅನುದಾನ ನೀಡಲು ಸಾಧ್ಯ ಎಂದರು.
ಕೈಸೋಡಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ, ಬೈರಪ್ಪ ಮೈಸಾವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಸಾಗರ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಹಾಲಪ್ಪ, ಓಂಕಾರಪ್ಪಗೌಡ, ದೇವೇಂದ್ರಪ್ಪ, ಬರಗಿ ರಾಮಪ್ಪ, ಬಾಬಣ್ಣ ಉಳವಿ, ಸೋಮಶೇಖರ್, ಏಕಾಂತಪ್ಪ, ಕಿರಣಕುಮಾರ್, ರಮೇಶ ಕೊರಕೋಡು. ಲೋಕೋಪಯೋಗಿ ಇಲಾಖೆ ಅಭಿಯಂತರ ಉಮಾ ನಾಯಕ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಕುಮಾರ್, ಜಿಲ್ಲಾ ಪಂಚಾಯಿತಿ ಅಭಿಯಂತರ ಯಶೋಧರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ReplyForward |