ಶಿಕಾರಿಪುರ: ಬಿಲ್ಲವ, ಈಡಿಗ, ನಾಮಧಾರಿ ಸಮಾಜದ ಸಂಘಟನೆ, ಸಮುದಾಯದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಜ.6ರಂದು ಮಂಗಳೂರಿನಿಂದ ಬೆಂಗಳೂರಿನವರೆಗೆ ೪೦ದಿನಗಳ ಪಾದಯಾತ್ರೆಗೆ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು ಎಂದು ಕಲಬುರ್ಗಿ ಜಿಲ್ಲೆ ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಕರೆನೀಡಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 70ಲಕ್ಷ ಜನಸಂಖ್ಯೆ ಹೊಂದಿರುವ ಬಿಲ್ಲವ, ಈಡಿಗ ಸಮಾಜದ ಜನರಿದ್ದರೂ ಅವರ ಅಭಿವೃದ್ಧಿಗಾಗಿ ನಿಗಮ ರಚನೆ ಮಾಡಿಲ್ಲ. ಸಿಂಗದೂರೇಶ್ವರಿ ದೇವಸ್ಥಾನ ಸಮಸ್ಯೆ ಉದ್ದೇಶಪೂರ್ವಕವಾಗಿ ಜೀವಂತ ಇಡಲಾಗಿದೆ. ಶೇಂದಿ ನಿಷೇಧ ಮಾಡಿದ ಸರಕಾರ ನಮ್ಮ ಸಮುದಾಯಕ್ಕೆ ಉದ್ಯೋಗ ನಷ್ಟಮಾಡಿತು ವಿನಃ ಸಮಾಜದ ಸ್ವಾಸ್ಥ್ಯ ಕಾಪಾಡಲಿಲ್ಲ ಬದಲಿಗೆ ಗುಟ್ಕಾ, ವಿಸ್ಕಿ, ಬ್ರಾಂಡಿ ಈವರೆಗೂ ನಿಷೇಧ ಮಾಡಿಲ್ಲ. ಶರಾವತಿ ಹಿನ್ನೀರಿನ ಜನರಿಗೆ ಭೂಮಿ ಹಕ್ಕು ನೀಡುವ ಸಮಸ್ಯೆ ಸೇರಿ ಹಲವು ಸಮಸ್ಯೆ ಪರಿಹಾರವಾಗಿಲ್ಲ.
ಶಿಕಾರಿಪುರ ತಾಲೂಕಿನಲ್ಲಿ 12ಸಾವಿರ ಜನಸಂಖ್ಯೆ ಇದ್ದರೂ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ, ಸಮುದಾಯ ಭವನಕ್ಕೆ ಅನುದಾನ ನೀಡಿಲ್ಲ. ಎಸ್.ಬಂಗಾರಪ್ಪ ನಂತರ ಜಿಲ್ಲೆಯ ಜನರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ತಾ.ಪಂ. ಜಿ.ಪಂ. ಟಿಕೇಟ್ ನೀಡಿಲ್ಲದಿರುವುದು ಸೇರಿ ಯಾವುದೆ ಪ್ರಯೋಜನ ಆಗಿಲ್ಲ ಬದಲಿಗೆ ರಾಜಕೀಯವಾಗಿ ಬಳಸಿಕೊಂಡು ಕೈಬಿಡಲಾಗಿದೆ ಎಂದು ಆರೋಪಿಸಿದರು.
ಕಂದಾಯ ಜಮೀನು, ಗೋಮಾಳ, ಹುಲ್ಲುಗಾವಲು ಸೇರಿ ಸರಕಾರಿ ಜಾಗದಲ್ಲಿ ಈಚಲು, ತೆಂಗು, ತಾಳೆಮರ ನೆಡಬೇಕು. ಸೇಂದಿ ಇಳಿಸುವವರಿಗೆ ಶೂನ್ಯಬಡ್ಡಿದರಲ್ಲಿ ಸಾಲ ನೀಡಬೇಕು, ಎಲ್ಲ ವಿವಿ ಗಳಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಬೇಕು, ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಸೇರಿ 10 ಪ್ರಮುಖ ಬೇಡಿಕೆ ಇಡೇರಿಸುವ ಉದ್ದೇಶಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು ಜಿಲ್ಲೆಯ ಈಡಿಗ ಸಮುದಾಯ ಶ್ರೀಪೀಠದ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಉಮೇಶ್ ಕೋಡಿಹಳ್ಳಿ, ಈಶ್ವರಪ್ಪ ಚಿಕ್ಕಲವತ್ತಿ, ಕೇಶವಮೂರ್ತಿ, ಪ್ರಕಾಶ್ ಇದ್ದರು.
ಶೇಂದಿ ನಿಷೇಧ ಮಾಡಿದ ಸರಕಾರ ನಮ್ಮ ಸಮುದಾಯಕ್ಕೆ ಉದ್ಯೋಗ ನಷ್ಟಮಾಡಿತು ವಿನಃ ಸಮಾಜದ ಸ್ವಾಸ್ಥ್ಯ ಕಾಪಾಡಲಿಲ್ಲ ಬದಲಿಗೆ ಗುಟ್ಕಾ, ವಿಸ್ಕಿ, ಬ್ರಾಂಡಿ ಈವರೆಗೂ ನಿಷೇಧ ಮಾಡಿಲ್ಲ. ಶರಾವತಿ ಹಿನ್ನೀರಿನ ಜನರಿಗೆ ಭೂಮಿ ಹಕ್ಕು ನೀಡುವ ಸಮಸ್ಯೆ ಸೇರಿ ಹಲವು ಸಮಸ್ಯೆ ಪರಿಹಾರವಾಗಿಲ್ಲ
-ಪ್ರಣವಾನಂದ ಸ್ವಾಮೀಜಿ