ಶಿವಮೊಗ್ಗ:ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ (ಎಸ್‌ಎಎಎಸ್) ಸಂಘಟನೆಯ ನಗರ ಘಟಕದ ವತಿಯಿಂದ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಹಾಗೂ ಶಕ್ತಿಪೂಜೆ ಕಾರ್ಯಕ್ರಮವನ್ನು ಡಿ.೧೬ರ ಸಂಜೆ ೬ ಗಂಟೆಗೆ ಶುಭಮಂಗಳ ಸಮುದಾಯಭವನದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಕೆ.ಈ. ಕಾಂತೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಎಎಸ್ ಸಂಘಟನೆಯು ಕಳೆದ ೧೮ ವರ್ಷಗಳಿಂದ ರಾಷ್ಟ್ರಾದ್ಯಂತ ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬಂದಿದೆ. ಇದೇ ರೀತಿ ಶಿವಮೊಗ್ಗ ನಗರ ಘಟಕವು ಕೂಡ ಶಬರಿಮಲೈ ಯಾತ್ರಾರ್ಥಿಗಳಿಗೆ ಸನ್ನಿದಾನದಲ್ಲಿ ನೀಡುವ ಅನ್ನದಾನಕ್ಕಾಗಿ ‘ಮುಷ್ಟಿ ಅಕ್ಕಿ’ ಯೋಜನೆಯನ್ನು ಹಮ್ಮಿಕೊಂಡಿತ್ತು. ನಗರದ ಭಕ್ತರು ಸುಮಾರು ೪೩ಸಾವಿರ ಕೆ.ಜಿ. ಅಕ್ಕಿಯನ್ನು ದಾನವಾಗಿ ನೀಡಿದ್ದರು. ಈ ಎಲ್ಲಾ ಧವಸ-ಧಾನ್ಯಗಳನ್ನು ಲಾರಿಗಳ ಮೂಲಕ ಶಬರಿಮಲೈ ಸನ್ನಿಧಾನಕ್ಕೆ ಕಳುಹಿಸಿಕೊಡಲಾಗಿದೆ ಎಂದರು.
ಇದರ ಮುಂದುವರಿದ ಭಾಗವಾಗಿ ಡಿ.೧೬ರಂದು ಶುಭಮಂಗಳ ಸಮುದಾಯ ಭವನದಲ್ಲಿ ವಿಶೇಷ ಪಡಿಪೂಜೆ ಆಯೋಜಿಸಲಾಗಿದೆ. ಈ ಪೂಜೆಗೆ ಕೇರಳದ ಶಬರಿಮಲೈನಿಂದ ತಂತ್ರಿಗಳು ಆಗಮಿಸಲಿದ್ದಾರೆ. ಇದೊಂದು ವಿಶೇಷ ಪೂಜೆಯಾಗಿದ್ದು, ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಹೇಗೆ ನಡೆಯುತ್ತದೆಯೋ ಅದೇ ರೀತಿಯಲ್ಲಿ ನಡೆಯುತ್ತದೆ ಎಂದರು. ಸುಮಾರು ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪಡಿಪೂಜೆ ನಂತರ ಅಯ್ಯಪ್ಪ ಭಕ್ತರಿಂದ ಭಜನೆ ಹಾಗೂ ಶಕ್ತಿಪೂಜೆ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್, ಕುಮಾರ್, ಎನ್.ಡಿ. ಸತೀಶ್, ವಿಶ್ವಾಸ್, ಮಂಜುನಾಥ್, ಶಂಕರ್, ಕೆ.ವಿ. ಅಣ್ಣಪ್ಪ ಇದ್ದರು.
ಇದೊಂದು ಸೌಭಾಗ್ಯವೇ ಆಗಿದೆ. ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಈ ಪೂಜೆ ಮಾಡಿಸಲು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಆದರೆ ನಗರದ ಅಯ್ಯಪ್ಪ ಭಕ್ತರಿಗೆ, ಮಾಲಾಧಾರಿಗಳಿಗೆ ಈ ಪೂಜೆ ಸೌಭಾಗ್ಯವಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ
ಸುರೇಶ್ ಬಾಳೆಗುಂಡಿ. ಸಮಿತಿಯ ಪ್ರಧಾನ ಕಾರ್ಯದರ್ಶಿ