ಸಾಗರ,ಡಿ೨೮: ಗೆಳತಿ ನಿನ್ನ ವಿಚಾರದಲ್ಲಿ ವಿಧಿ ಕ್ರೂರಿ. ಒಟ್ಟಿಗೆ ತಿಂಡಿ ತಿಂದಿದ್ದೆವು, ತಾಸಿನಲ್ಲಿಯೇ ಹೋಗಿಬಿಟ್ಟೆಯಲ್ಲ. ನಿನ್ನದಲ್ಲದ ತಪ್ಪಿಗೆ ಆದ ಈ ಸಾವು ಅನ್ಯಾಯ.. ಇದು ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಬುಧವಾರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ ಪ್ರತಿಮಾಳ(೧೮) ಸಹಪಾಠಿಗಳ ಆಕ್ರಂದನ.
ಸಾಗರ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿದ್ದುಕೊಂಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಪ್ರತಿಮಾ, ಎಂದಿನಂತೆ ಹಾಸ್ಟೆಲ್‌ನಿಂದ ಕಾಲೇಜಿಗೆ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿನ ಜೋಗ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಮೂವರು ಗೆಳತಿಯರು ಒಟ್ಟಿಗೆ ಹೋಗುತ್ತಿರುವಾಗ ಯಮಸ್ವರೂಪಿ ಟಿಪ್ಪರ್ ಮೂವರಿಗೂ ಡಿಕ್ಕಿ ಹೊಡೆದಿದೆ. ಚಕ್ರಕ್ಕೆ ಸಿಕ್ಕ ಪ್ರತಿಮಾ ಕೆಲ ಹೊತ್ತಿನಲ್ಲಿ ಜೀವಕಳೆದುಕೊಂಡಿದ್ದಾಳೆ. ಮೃತ ಪ್ರತಿಮಾ ಶಿಕಾರಿಪುರ ತಾಲೂಕು ಚಿಕ್ಕಾವಲಿ ಗ್ರಾಮದವಳು.
ಸಹಪಾಠಿ ಸೊರಬ ತಾಲ್ಲೂಕಿನ ಪುಟ್ನಳ್ಳಿ ಗ್ರಾಮದ ಅಂಕಿತಾ ಹಾಗೂ ಶಿಕಾರಿಪುರದ ಐಶ್ವರ್ಯ ಅವರಿಗೂ ಗಾಯಗಳಾಗಿದ್ದು, ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಳಿ ಬದುಕು ಬೇಕಿದ್ದ ಬಾಲೆಯ ಅನ್ಯಾಯದ ಸಾವಿಗೆ ನೆರೆದವರ ಕಣ್ಣಾಲಿಗಳು ತೇವಗೊಂಡಿದ್ದವು. ಸಾಗರ ಪದವಿಪೂರ್ವ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಇರುವ ಕಾರಣ ಶಿಕಾರಿಪುರ ಬಿಟ್ಟು ಸರಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಪ್ರತಿಮಾ ಅಭ್ಯಾಸ ಮಾಡುತ್ತಿದ್ದಳು. ಆಸ್ಪತ್ರೆಗೆ ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಗಾಯಾಳು ಬಾಲಕಿಯರುಗಳಿಗೆ ಸಾತ್ವಾನ ಹೇಳಿದ್ದಾರೆ.
ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
next post