Malenadu Mitra
ಮಲೆನಾಡು ಸ್ಪೆಷಲ್ ರಾಜ್ಯ ಶಿವಮೊಗ್ಗ

ಸಂಕ್ರಾಂತಿ ಸಂಭ್ರಮ, ಕಾಲೇಜಿನಲ್ಲಿ ಅರಳಿದ ಚೆಲುವಿನ ಚಿತ್ತಾರ……

ಶಿವಮೊಗ್ಗ: ಸಂಕ್ರಾಂತಿ ಎಂದರೆ ಸುಗ್ಗಿ ಸಂಭ್ರಮ. ಸಂಕ್ರಾಂತಿ ಎಂದರೆ ಲವಲವಿಕೆ. ಸಂಕ್ರಾಂತಿ ಹೆಸರಲ್ಲಿ  ಕಾಲೇಜು ಪ್ರಾಂಗಣದಲ್ಲಿ ಎತ್ನಿಕ್ ಡೇ ಆಚರಿಸಿದರೆ ಹೇಗಿರಬೇಡ ಹೇಳಿ….
ಅಂತಹದೊಂದು ಚೆಲುವಿನ ಚಿತ್ತಾರ ಅರಳಿದ್ದು  ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ.  ಭೂರಮೆಯೇ ಮೇಲೆದ್ದು ಬಂದಾಳೆಯೇ ಎಂಬ ಸೋಜಿಗ ಕಾಲೇಜು ಕನ್ನಿಕೆಯರ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣುತಿತ್ತು.
ಹೆಣ್ ಹೈಕ್ಳಿಗಿಂತ ನಾವೇನು ಕಮ್ಮಿಯಿಲ್ಲ ಎಂದು ಪಂಚೆ, ಶಲ್ಯ ತೊಟ್ಟು ಹುಡುಗರೂ ಸಂಭ್ರಮಿಸಿದರು. ಸಂಕ್ರಾಂತಿ ಸುಗ್ಗಿ ಹಬ್ಬದಲ್ಲಿ ಇಡೀ ಕಾಲೇಜು ಮಿಂದೆದ್ದು, ನೋಡುಗರ ಕಣ್ಣುಗಳಲ್ಲಿ ಕನಸುಗಳನ್ನು ಬಿತ್ತಿದ್ದಂತೂ ನಿಜ.


ರಾಶಿಪೂಜೆ:


ಕಾಲೇಜಿನ ಆವರಣದಲ್ಲಿ ಸುಗ್ಗಿ ಸಂಭ್ರಮ ಸಾಂಪ್ರದಾಯಿಕ ದಿನವನ್ನು ಬಹಳ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಆಚರಿಸಿದರು. ಹಳ್ಳಿಯಲ್ಲಿ ರೈತರು ಸಂಕ್ರಾಂತಿ ಹಬ್ಬದ ದಿನವನ್ನ ಹೇಗೆ ಆಚರಿಸುತ್ತಾರೋ ಅದೇ ರೀತಿಯಲ್ಲಿ ಕಬ್ಬನ್ನು ಜೋಡಿಸಿ, ಬೆಳೆದಂತಹ ಧವಸ-ಧಾನ್ಯಗಳನ್ನ ಇಟ್ಟು ರಾಶಿ ಪೂಜೆ ನೆರವೇರಿಸಿ ಈ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಇದಕ್ಕೂ ಮುನ್ನ ಕಾಲೇಜು ಪ್ರಶಿಕ್ಷಣಾರ್ಥಿಗಳು ತಲೆ ಮೇಲೆ ಪೂರ್ಣ ಕುಂಭ ಹೊತ್ತುಕೊಂಡು ಕಾಲೇಜಿನಿಂದ ನಗರದ ಗೋಪಿ ವೃತ್ತದವರೆಗೆ ಮೆರವಣಿಗೆ ನಡೆಸಿ ಗಮನ ಸೆಳೆದರು.
 ಅತಿಥಿಗಳು ಕೂಡ ರಾಶಿಗೆ ಪೂಜೆ ನೆರವೇರಿಸುವ ಮೂಲಕ, ಈ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಫೋಟೋಗೆ ಫೋಸ್ ನೀಡಿದ ವಿದ್ಯಾರ್ಥಿಗಳು, ಸೆಲ್ಫಿಗೆ ಪೋಸ್ ಕೊಡುತ್ತಾ ನಕ್ಕು ನಲಿದಾಡಿದರು. ಪರಸ್ಪರ ಎಳ್ಳು ಬೆಲ್ಲ ತಿಂದು ಸಂಕ್ರಾಂತಿ ಶುಭಾಶಯ ಕೋರಿದರು.


ಸಮೃದ್ಧಿಯ ಸಂಕೇತ: ಡಾ.ಮೋಹನ್ ಚಂದ್ರಗುತ್ತಿ

ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ  ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಮೋಹನ್ ಚಂದ್ರಗುತ್ತಿ,  ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ. ಕೃಷಿಯ ಪ್ರತಿಯೊಂದು ಆಚರಣೆಗಳು ಮನುಷ್ಯನ, ಸಂವೇದನೆ, ಜೀವನ ಪ್ರೀತಿಯನ್ನು ತೋರುತ್ತದೆ. ಕೂರಿಗೆಯಲ್ಲಿ ಬೀಜ ಬಿತ್ತುವಾಗ ಪೂಜೆ ಸಲ್ಲಿಸಲಾಗುತ್ತದೆ. ಅದು ನಮ್ಮ ಸಂಸ್ಕೃತಿ ಪ್ರೀತಿ ತೋರುತ್ತದೆ ಎಂದರು.
ನಮ್ಮ ಸಂಸ್ಕೃತಿ ಸಾರುವ ಕಾರ್ಯಕ್ರಮಗಳು ಕೇವಲ ಆಚರಣೆ,  ತೋರಿಕೆಗೆ ಮಾತ್ರ ಸೀಮಿತವಾಗಿರದೆ, ಬದುಕಿನ ಜೊತೆಗೆ ಅಳವಡಿಸಿಕೊಂಡು, ಅದರ ಹಿನ್ನೆಲೆಯ ಅರ್ಥ ತಿಳಿಯಬೇಕು. ಕಾಲ ಬದಲಾದಂತೆ ನಮ್ಮ ಸಂವೇದನೆಗಳು ನಾಶವಾಗುತ್ತಿವೆ. ಸಣ್ಣ ಆನಂದವನ್ನೂ ಅನುಭವಿಸುವ ಕ್ಷಣ ನಮ್ಮ ನಡುವೆ ಇಲ್ಲ. ಮನುಷ್ಯ ತನ್ನನ್ನು ತಾನು ವಿನಾಶದ ಅಂಚಿಗೆ ಸರಿಸಿಕೊಳ್ಳುತ್ತಿದ್ದಾನೆ ಎಂದರು.
ಜಗತ್ತು ತನ್ನ ಪಥ ಬದಲಿಸಿಕೊಳ್ಳುತ್ತಿರುವಾಗ, ನಮ್ಮ ವಿವೇಕದ ದಾರಿ, ಜ್ಞಾನ ಪರಂಪರೆ, ಬದುಕಿನ ಹಲವು ಆಲೋಚನೆಯನ್ನು ಮರು ವಿನ್ಯಾಸ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.
 ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್.ಬಿ.ಆದಿಮೂರ್ತಿ, ಚಲನಚಿತ್ರ ಹಿನ್ನೆಲೆ ಗಾಯಕಿ ಕು.ಸಾದ್ವಿನಿಕೊಪ್ಪ, ಪ್ರಾಚಾರ್ಯ ಡಾ.ಮಧು, ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

Ad Widget

Related posts

ಕಲಾವಿದರು ಉಳಿದರೆ ಕಲೆ ಉಳಿಯುತ್ತದೆ.

Malenadu Mirror Desk

ನೀರಿನ ಕರ ಏರಿಕೆ: ಹೋರಾಟಕ್ಕೆ ಸಜ್ಜಾಗಲು ವಾಣಿಜ್ಯ ಸಂಘ ಕರೆ

Malenadu Mirror Desk

ಹುಣಸೋಡಿಗೆ ಸ್ಫೋಟಕ ಪೂರೈಕೆದಾರರ ಬಂಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.