ಹೊಸನಗರ,ಜ.೧೪: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಹೋರಾಟದ ನೆಲ ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸಿದೆ.
ಐತಿಹಾಸಿಕ ಪಾದಯಾತ್ರೆಯ ೮ ನೇ ದಿನದಂದು ಉಡುಪಿ ಜಿಲ್ಲೆ ಹೊಸಂಗಡಿ ಯಿಂದ ಪ್ರಾರಂಭಿಸಿ ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಬಾಳೆ ಬರೆ ಘಾಟಿಯ ೧೫ ಕಿ. ಮೀ ಘಟ್ಟಪ್ರದೇಶದ ಮೂಲಕ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಗೆ ಪ್ರವೇಶ ಪಡೆದಿದೆ. ಶ್ರೀ ಚಂಡಿಕಾಂಬ ದೇವ ಸ್ಥಾನದಲ್ಲಿ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ ,ಉಡುಪಿ ಜಿಲ್ಲೆಯ ಪಾದ ಯಾತ್ರೆ ಸಮಿತಿಯ ಅಧ್ಯಕ್ಷ ರಾದ ರಾಘವೇಂದ್ರ ಅಮೀನ್, ಜಿಲ್ಲಾ ಸಂಚಾಲಕರಾದ ವಿಶುಕುಮಾರ್ ಕಲ್ಯಾಣ್‌ಪುರ, ಬಾಲಚಂದ್ರನ್ , ಕೃಷ್ಣಪ್ಪ ಪೂಜಾರಿ ಸಿದ್ದಾಪುರ ಇವರು ಹೊಸನಗರ ತಾಲೂಕು ಉಸ್ತುವಾರಿ ಗಳಾದ ವಾಸಪ್ಪ ಮಾಸ್ತಿಕಟ್ಟೆ ಇವರಿಗೆ ಪರಮ ಪೂಜ್ಯ ಸ್ವಾಮೀಜಿಗಳ ಪಾದ ಯಾತ್ರೆಯ ಸಂಪೂರ್ಣ ಜವಾಬ್ದಾರಿ ಯಾನ್ನು ಒಪ್ಪಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಪ್ರವೇಶದ ಬಳಿಕ ಮಾಸ್ತಿಕಟ್ಟೆಯಲ್ಲಿ ಜಾಗೃತಿ ಸಮಾವೇಶ ನಡೆಸಲಾಯಿತು. ಮಾಸ್ತಿಕಟ್ಟೆ ಯಲ್ಲಿ ಐತಿಹಾಸಿಕ ಪಾದಯಾತ್ರೆ ಗೆ ಸಮಾಜದ ಮುಖಂಡರಾದ ಲಯನ್ ಹೆಚ್. ವಾಸಪ್ಪ, ಏರಗಿ ಉಮೇಶ್, ಮುರಳೀಧರ ಜಿ ಈ, ಶ್ರೀಮತಿ ಸುಮತಿ ಆರ್ ಪೂಜಾರ್ ಇವರ ನೇತೃತ್ವದಲ್ಲಿ ಅಭೂತ ಪೂರ್ವ ಸ್ವಾಗತ ಕೋರಲಾಯಿತು.
ಈ ಸಂದರ್ಭ ಪ್ರಣವಾನಂದ ಸ್ವಾಮೀಜಿ ಅವರು, ಪಾದಯಾತ್ರೆ ಉದ್ದೇಶ ಮತ್ತು ರಾಜ್ಯದಲ್ಲಿ ಈಡಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ವಿವರಿಸಿದರು. ಮೀಸಲಾತಿ, ಈಡಿಗ ಅಭಿವೃದ್ಧಿ ನಿಗಮ, ಸಿಗಂದೂರು ದೇವಳದ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ ಇತ್ಯಾದಿ ವಿಷಯಗಳ ಬಗ್ಗೆ ಭಕ್ತರ ಗಮನ ಸೆಳೆದರು. ಪಾದಯಾತ್ರೆಯು ಭಾನುವಾರ ಮಾಸ್ತಿಕಟ್ಟೆಯಿಂದ ಪ್ರಯಾಣಿಸಿ ನಗರಕ್ಕೆ ತಲುಪಲಿದೆ.