ಶ್ರೀಕ್ಷೇತ್ರ ಸಿಗಂದೂರು ಚೌಡಮ್ಮ ದೇವಿ ದೇಗುಲದಲ್ಲಿ ಎರಡು ದಿನಗಳ ಕಾಲ ನಡೆದ ಅದ್ದೂರಿ ಜಾತ್ರಾ ಮಹೋತ್ಸವ ಭಾನುವಾರ ಸಮಾಪನಗೊಂಡಿತು. ಎರಡನೇ ದಿನವೂ ದೇವಸ್ಥಾನದಲ್ಲಿ ಸೀಗೆ ಕಣಿವೆಯ ಅಧಿ ದೇವತೆ ಸಿಗಂದೂರು ದೇವಿಗೆ ವಿಶೇಷ ಪೂಜೆಗಳು ಧರ್ಮದರ್ಶಿಗಳ ನೇತೃತ್ವದಲ್ಲಿ ನೆರವೇದವು.
ಮುಂಜಾನೆ ಸುಮಾರು ೪ಗಂಟೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು ಚಂಡಿಕಾ ಹೋಮ, ನವ ಚಂಡಿಕಾ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ೨ಗಂಟೆಗೆ ನವ ಚಂಡಿಕಾ ಹವನದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್ ದಂಪತಿ ಸಮೇತ ಭಾಗಿಯಾಗಿ ೨ನೇ ದಿನದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
೨ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ರಾತ್ರಿ ೮ ಗಂಟೆಯಿಂದ ಸರಿಗಮಪ, ಎದೆ ತುಂಬಿ ಹಾಡುವೆನು ಖ್ಯಾತಿಯ ಪ್ರಸಿದ್ದ ಗಾಯಕರಾದ ಚನ್ನಪ್ಪ ಹುತ್ತೇದಾರ್, ಸಂದೇಶ್ ನೀರ್ ಮಾರ್ಗ, ಕಲಾವತಿ ದಯಾನಂದ, ವಸುಶ್ರೀ ಹಳೇ ಮನೆ, ವರ್ಣ ಚೌಹಾಣ್, ಸಾಧ್ವಿನಿ ಕೊಪ್ಪ, ಸುಪ್ರೀತ್ ಫಾಲ್ಗುಣ ಮುಂತಾದವರಿಂದ ಗಾನ ವೈಭವ ಕಾರ್ಯಕ್ರಮ ಕೇಳುಗರ ಮನತಣಿಸಿತು. ಸಾವಿರಾರು ಭಕ್ತರು ಕಾರ್ಯಕ್ರಮ ಕಣ್ತುಂಬಿಕೊಂಡರು.
ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಭೇಟಿ
ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಆರ್ಯ ಈಡಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ ದೇವಸ್ಥಾನಕ್ಕೆ ಭೇಟಿ ನೀಡಿ ನೀಡಿ ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ರಜಾ ದಿನ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ತಂಡೋಪವಾಗಿ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದರು. ರಾತ್ರಿ ೧೦:೩೦ ಕ್ಕೆ ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ ನಡೆಯಿತು.