ಶಿವಮೊಗ್ಗ ತಾಲೂಕು ಹನಸವಾಡಿಯಲ್ಲಿರುವ ಮುರಾರ್ಜಿ ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ವಾಂತಿ, ಹೊಟ್ಟೆನೋವು ಸೊಂಟನೋವಿನಂತಹ ಬೇನೆಗಳು ಕಾಣಿಸಿಕೊಂಡಿದ್ದು ಸುಮಾರು ೭೦ ಕ್ಕೂ ಮಕ್ಕಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
೯,೧೦ ಮತ್ತು ಪಿಯುಸಿ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆಕಂಡು ಬಂದಿದ್ದು, ಇದರಲ್ಲಿ ಬಹುತೇಕ ಮಕ್ಕಳು ಭಾನುವಾರ ನಡೆದ ಯೋಗಥಾನ್‌ನಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅಲ್ಲಿ ಸೇವಿಸಿದ್ದ ಆಹಾರ ಅಥವಾ ಸಂಕ್ರಾಂತಿ ಕಾಳಿನಲ್ಲಿಯೇ ಏನೋ ದೋಷ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಯೋಗಥಾನ್‌ನಲ್ಲಿ ಭಾಗವಹಿಸದ ವಸತಿಶಾಲೆಯ ಇತರೆ ಮಕ್ಕಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ.
ಸಂಜೆಯಿಂದಲೇ ಮಕ್ಕಳಲ್ಲಿ ವಾಂತಿ, ಹೊಟ್ಟೆನೋವು ತಲೆನೋವು ಮತ್ತು ಬೆನ್ನುನೋವು ಕಂಡುಬಂದಿದ್ದು, ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಎಲ್.ಅಶೋಕ್ ನಾಯ್ಕ್ ಅವರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಸೂಕ್ತ ಆರೈಕೆ ಮಾಡುವಂತೆ ವೈದ್ಯರಿಗೆ ಸೂಚಿಸಿದರು.
ಹಾಸ್ಟೆಲ್ ನಲ್ಲಿ ೫೪೦ ಮಕ್ಕಳಿದ್ದು ಅದರಲ್ಲಿ ಈಗಾಗಲೇ ೭೦ ಕ್ಕೂ ಹೆಚ್ಚು ಮಕ್ಕಳು ಬಂದು ದಾಖಲಾಗಿದ್ದರೆ. ಎಲ್ಲ ಮಕ್ಕಳು ಅಸ್ವಸ್ಥರಾಗಿ ಕಂಡು ಬಂದಿದ್ದಾರೆ.
ಯೋಗಥಾನ್ ನಲ್ಲಿ ನೀಡಿದ ಬೆಳಗ್ಗಿನ ತಿಂಡಿಯ ಸೇವನೆಯಿಂದಲೇ ವಿದ್ಯಾರ್ಥಿಗಳಲ್ಲಿ ಈ ಬೇನೆ ಕಾಣಿಸಿಕೊಂಡಿರುವುದಾಗಿ ಪೋಷಕರು ದೂರುತ್ತಿದ್ದಾರೆ.
ಬೇರೆ ಶಾಲೆ ಮಕ್ಕಳಿಗೂ ತೊಂದರೆ:
ಹನಸವಾಡಿ ಮಾತ್ರವಲ್ಲದೆ, ಕುಂಸಿ ಹಾಗೂ ಶಿವಮೊಗ್ಗ ಆದಿಚುಂಚನಗಿರಿ ಕಾಲೇಜು ಮಕ್ಕಳಲ್ಲಿಯೂ ಈ ಆರೋಗ್ಯ ಸಮಸ್ಯೆ ಕಂಡುಬಂದಿದು, ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಯೋಗಥಾನ್‌ನಲ್ಲಿ ಮಕ್ಕಳಿಗೆ ಕೊಟ್ಟಿರುವ ಆಹಾರದಲ್ಲಿಯೇ ದೋಷ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
ವೈದ್ಯರ ಸಮರೋಪಾದಿ ಕಾರ್ಯಾಚರಣೆ:
ಮಕ್ಕಳು ಅಸ್ವಸ್ಥರಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಮತ್ತು ಎಲ್ಲಾ ಹಂತದ ಸಿಬ್ಬಂದಿಗಳೂ ಸಮಾರೋಪಾದಿಯಲ್ಲಿ ಕೆಲಸ ಮಾಡಿ ಪೋಷಕರ ಮೆಚ್ಚುಗೆಗೆ ಪಾತ್ರರಾದರು. ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್ ಅವರು ತಡರಾತ್ರಿವರೆಗೂ ಆಸ್ಪತ್ರೆಯಲ್ಲಿದ್ದು, ಉಸ್ತುವಾರಿ ನೋಡಿಕೊಂಡರು. ಸಿಮ್ಸ್‌ನ ಎಲ್ಲಾ ವಿಭಾಗದವರೊಂದಿಗೆ ಮಾತುಕತೆ ನಡೆಸಿದ ಅವರು, ಮಕ್ಕಳ ಆರೈಕೆಯಲ್ಲಿ ಭಾಗಿಯಾಗಿದ್ದರು. ಮಕ್ಕಳಿಗೆ ನೀರು, ಗಂಜಿ ವ್ಯವಸ್ಥೆಯನ್ನು ತಕ್ಷಣ ಮಾಡಿ, ಪೋಷಕರು ಹಾಗೂ ವಸತಿ ಶಾಲೆಯ ಸಿಬ್ಬಂದಿಗಳಿಗೆ ಧೈರ್ಯ ಹೇಳಿದರು.
ಜಿಲ್ಲಾಪಂಚಾಯತ್ ಸಿಇಒ, ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳಾದ ಡಾ.ನಾಗರಾಜ್ ನಾಯ್ಕ್, ಮಲ್ಲಪ್ಪ ಮತ್ತಿತರರು ಸ್ಥಳಕ್ಕೆ ಆಗಮಿಸಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಪ್ರಾಥಮಿಕವಾಗಿ ಆಹಾರ ವ್ಯತ್ಯದಿಂದ ಹೀಗಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಯೋಗಥಾನ್‌ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಹೇಳಲಾಗದು. ವೈದ್ಯರು ಸ್ಯಾಂಪಲ್ ಪಡೆದಿದ್ದಾರೆ. ಅಲ್ಲಿ ಬಳಸುವ ನೀರನ್ನು ಪರೀಕ್ಷೆಗೆ ಕಳಿಸಲಾಗಿದೆ. ಸಿಬ್ಬಂದಿಯ ಲೋಪ ಕಂಡುಬಂದರೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು
ಅಶೋಕ್ ನಾಯ್ಕ್, ಶಾಸಕರು
ಮಕ್ಕಳು ದಾಖಲಾಗುತ್ತಿದ್ದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಶರವೇಗದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಾ ಮಕ್ಕಳು ಗುಣಮುಖರಾಗುತ್ತಿದ್ದಾರೆ. ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.
ಡಾ.ಶ್ರೀಧರ್ ವೈದ್ಯಕೀಯ ಅಧೀಕ್ಷಕ