ಶಿವಮೊಗ್ಗ,ಜ.೨೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶ್ರೀ ನಾರಾಯಣಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ಜ.೨೨ ರಂದು ಶಿವಮೊಗ್ಗ ನಗರದಲ್ಲಿ ಹಮ್ಮಿಕೊಂಡಿರುವ ಹಕ್ಕೊತ್ತಾಯ ಸಮಾವೇಶವಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸುಮಾರು ೫೦ ಸಾವಿರ ಕುಲಬಾಂಧವರು ಸೇರುವ ನಿರೀಕ್ಷೆಯಿದೆ ಎಂದು ಎಸ್.ಎನ್.ಜಿ ರಾಜ್ಯಾಧ್ಯಕ್ಷ ಸತ್ಯಜಿತ್‌ಸುರತ್ಕಲ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮಾಜದ ಎಲ್ಲಾ ೨೬ ಉಪ ಪಂಗಡಗಳ ಜನರಿಂದ ಈ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ಹಳ್ಳಿಯನ್ನೂ ನಾವು ತಲುಪಿದ್ದೇವೆ. ನಮ್ಮ ನ್ಯಾಯಯುತವಾದ ಬೇಡಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಈಡಿಗ ಅಭಿವೃದ್ಧಿ ನಿಗಮ ಘೋಷಣೆ ಮಾತ್ರ ಆಗಿದ್ದು, ಅದು ಆದೇಶವಾಗಬೇಕು. ಶಿವಮೊಗ್ಗ ವಿಮಾನನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರು ನಾಮಕಾರಣ ಮಾಡಬೇಕೆಂಬ ಬೇಡಿಕೆ ನಮ್ಮದಾಗಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ನಗರದ ಸೈನ್ಸ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಈಡಿಗರ ಭವನದಿಂದ ಬೃಹತ್ ಮೆರವಣಿಗೆ ಸಾಗಲಿದೆ. ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಸಿಗಂದೂರಿಗೆ ಹಸ್ತಕ್ಷೇಪ ಬೇಡ:
ಈಡಿಗರ ಆರಾಧ್ಯದೈವವಾದ ತಾಯಿ ಸಿಗಂದೂರು ಚೌಡಮ್ಮ ದೇಗುಲದ ಮೇಲೆ ಅನ್ಯರ ಹಸ್ತಕ್ಷೇಪ ನಿಲ್ಲಬೇಕು. ದಕ್ಷಿಣ ಕನ್ನಡ,ಚಿಕ್ಕಮಗೂರು ಸೇರಿದಂತೆ ರಾಜ್ಯದ ಅನೇಕ ಧಾರ್ಮಿಕ ಕೇಂದ್ರಗಳು ಅರಣ್ಯ ಪ್ರದೇಶದಲ್ಲಿಯೇ ಇವೆ. ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿರುವ ಆ ಕ್ಷೇತ್ರಗಳ ಬಗ್ಗೆ ಚಕಾರವೆತ್ತದ ಸರಕಾರ ಸಿಗಂದೂರಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಮಲೆನಾಡಿನ ದೀವರ ಅಸ್ಮತೆಯಾದ ಹಸೆಚಿತ್ತಾರಕ್ಕೆ ಆದ್ಯತೆ ನೀಡಬೇಕು. ಮತ್ತು ಹಸೆ ಚಿತ್ತಾರ ಪರಿಷತ್ ರಚನೆ ಮಾಡಬೇಕೆಂದು ಬೇಡಿಕೆಯನ್ನೂ ನಾವು ಸಮಾವೇಶದಲ್ಲಿ ಸರಕಾರದ ಮುಂದಿಡಲಿದ್ದೇವೆ ಎಂದು ಸತ್ಯಜಿತ್ ಹೇಳಿದರು.
ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾದ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು, ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಘೋರ ಅನ್ಯಾಯವಾಗಿದೆ. ನಾಡಿಗೆ ಬೆಳಕು ಕೊಟ್ಟವರ ಬದುಕು ಸಂಕಷ್ಟದಲ್ಲಿದೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಹಕ್ಕೊತ್ತಾಯ ಸಮಾವೇಶ ಯಾವುದೇ ಪಕ್ಷ, ರಾಜಕಾರಣಿ ಹಾಗೂ ಸಿದ್ಧಾಂತದ ವಿರುದ್ಧ ಅಲ್ಲ. ನಮ್ಮ ಜನರಿಗೆ ಅನ್ಯಾಯವಾಗಿದೆ ಸರಕಾರ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಡಬೇಕಿದೆ. ಈ ಸಮಾವೇಶವಕ್ಕೆ ಭಾನುವಾರ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕರೆನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್.ಜಿ.ವಿ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ,ಈಡಿಗ ಮಹಿಳಾ ಸಂಘದ ಗೀತಾಂಜಲಿ, ಬಿಲ್ಲವರ ಸಂಘದ ಜಿಲ್ಲಾಧ್ಯಕ್ಷ ಭುಜಂಗಯ್ಯ, ಕಾನೂನು ಸಲಹೆಗಾರ ಕೆ.ಎಲ್.ಉಮೇಶ್, ಪ್ರಮುಖರಾ ವೆಂಕಟೇಶ್ ನಾಯ್ಕ್, ರಾಘವೇಂದ್ರ ಸುಂಟ್ರಳ್ಳಿ, ಹೊದಲ ಶಿವು ಮತ್ತಿತರರಿದ್ದರು.
ನಮ್ಮ ಹಕ್ಕೊತ್ತಾಯ ಸಮಾವೇಶ ಯಾವುದೇ ಪಕ್ಷ, ರಾಜಕಾರಣಿ ಹಾಗೂ ಸಿದ್ಧಾಂತದ ವಿರುದ್ಧ ಅಲ್ಲ. ನಮ್ಮ ಜನರಿಗೆ ಅನ್ಯಾಯವಾಗಿದೆ ಸರಕಾರ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಡಬೇಕಿದೆ
ಡಾ.ಎಸ್.ರಾಮಪ್ಪ, ಸಿಗಂದೂರು ಧರ್ಮದರ್ಶಿ
ಹಕ್ಕೊತ್ತಾಯ ಸಮಾವೇಶ ಇಲ್ಲಿಗೆ ಮುಗಿಯುವುದಿಲ್ಲ. ಸರಕಾರದ ಪ್ರತಿನಿಧಿಗಳ ಬಳಿ ನಿಯೋಗ ಹೋಗುತ್ತೇವೆ. ರಾಜ್ಯಮಟ್ಟದಲ್ಲಿಯೂ ದೊಡ್ಡ ಹೋರಾಟ ಕಟ್ಟುತ್ತೇವೆ. ಸಮಾವೇಶದ ಹಿಂದೆ ಯಾವುದೇ ವಯಕ್ತಿಕ ಉದ್ದೇಶವಿಲ್ಲ. ನಮ್ಮವರಿಗಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತೇವೆ
ಸತ್ಯಜಿತ್ ಸುರತ್ಕಲ್. ಎಸ್‌ಎನ್‌ಜಿವಿ ರಾಜ್ಯಾಧ್ಯಕ್ಷ