Malenadu Mitra
ರಾಜ್ಯ ಶಿವಮೊಗ್ಗ

ಭಾವುಕ ಲೋಕ ಸೃಷ್ಟಿಮಾಡಿದ್ದ ಗುರುವಂದನೆ, ಶಿಷ್ಯವೃಂದದ ಗೌರವ ಸ್ವೀಕರಿಸಿ ಪುನೀತರಾದ ಗುರುಗಳು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಹೃದಯ ಸ್ಪರ್ಶಿ ಕಾರ್ಯಕ್ರಮ

¨ಅಲ್ಲೊಂದು ಭಾವುಕ ಲೋಕ ಸೃಷ್ಟಿಯಾಗಿತ್ತು, ಎಲ್ಲರ ಮುಖದಲ್ಲಿಯೂ ಒಂದು ಧನ್ಯತಾಭಾವ, ೨೭ ವರ್ಷಗಳ ನಂತರ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾದ ಮಧುರ ಕ್ಷಣ, ಎಷ್ಟೋ ವರ್ಷಗಳ ಬಳಿಕ ಸಹೋದ್ಯೋಗಿಗಳ ಭೇಟಿ. ಕಲಿಯುವಾಗ ತರಲೆಯಾಗಿದ್ದ ಶಿಷ್ಯರ ವಿನೀತ ಭಾವ, ಕುಚುಕು ಗೆಳೆಯರೆ ಆಲಿಂಗನ, ಗೆಳತಿಯರ ಸಂಭ್ರಮ, ಮಕ್ಕಳ ಕಲರವ.
ಇದು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ 1993-96 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಶನಿವಾರ ಗಾಜನೂರಿನ ತುಂತುರು ಫಾರಂನಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಕಂಡು ಬಂದು ಅವಿಸ್ಮರಣೀಯ ದೃಶ್ಯ. ಸಹ್ಯಾದ್ರಿ ಕಾಲೇಜಿನಲ್ಲಿ ಕಲಿತು ಈಗ ತಮ್ಮದೇ ಜೀವನ ಕಟ್ಟಿಕೊಂಡಿರುವ ಶಿಷ್ಯವರ್ಗ ತಮಗೆ ಶಿಕ್ಷಣ ನೀಡಿದ್ದ ಗುರುವರ್ಯರನ್ನು ನೆನೆದು ಅವರಿಗೆ ಗೌರವ ಸರ್ಮರ್ಪಣೆ ಮಾಡುವ ಮಾದರಿ ಕಾರ್ಯಕ್ರಮ ಅದಾಗಿತ್ತು.


ರಾಜ್ಯದ ಬೇರೆ ಬೇರೆ ಭಾಗದಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದ ಗುರುಗಳನ್ನು ಒಂದು ಕಡೆ ಸೇರಿಸಿದ್ದ ಶಿಷ್ಯವರ್ಗ ಗುರುಗಳ ಪಾದಪೂಜೆ ಮಾಡುವ ಮೂಲಕ ಗುರುನಮನ ಸಲ್ಲಿಸಿದರು. ಈ ಸಂದರ್ಭ ಭಾವುಕರಾದ ಗುರು -ಶಿಷ್ಯರ ಕಣ್ಣಾಲಿಗಳು ತೇವವಾಗಿದ್ದವು. ಶಿಷ್ಯವರ್ಗದ ಪ್ರೀತಿಗೆ ಪ್ರಸನ್ನರಾದ ಗುರುಗಳು ಶಿಷ್ಯರೊಂದಿಗೆ ಮಕ್ಕಳಂತೆ ಬೆರೆತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ೫೭ ಗುರುಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ್ದ 1993-96 ನೇ ಸಾಲಿನಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ.ಎ.ಎಸ್.ಚಂದ್ರಶೇಖರ್ ಅವರು, ನನಗೆ ಮತ್ತೆ ಕಾಲೇಜಿಗೆ ಬಂದ ಅನುಭವ ಆಗಿದೆ. ಸಂಬಂಧಗಳು ಮೌಲ್ಯ ಕಳೆದುಕೊಳ್ಳೂತ್ತಿರುವ ಈ ದಿನಗಳಲ್ಲಿ ಎಲ್ಲಾ ನನ್ನ ಸಹೋದ್ಯೋಗಿಗಳನ್ನು ಒಂದೆಡೆ ಸೇರಿಸಿದ್ದೀರಿ. ಇದೊಂದು ಮಾದರಿ ಮತ್ತು ಎಂದೂ ಮರೆಯಲಾರದ ಕಾರ್ಯಕ್ರಮ. ಗುರು-ಶಿಷ್ಯ ಪರಂಪರೆ ಇದೇ ರೀತಿ ಮುಂದುವರಿಯಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡೋಣ ಎಂದು ಹೇಳಿದರು.


ಸಹ್ಯಾದ್ರಿ ಕಾಲೇಜಿನ ಹಾಲಿ ಪ್ರಾಚಾರ್ಯರಾದ ಡಾ.ರಾಜೇಶ್ವರಿ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ತುಂಬಾ ಮಹತ್ವ ಇದೆ. ನಿಮಗೆ ಕಲಿಸಿದ ಗುರುಗಳನ್ನು ಇಷ್ಟು ವರ್ಷಗಳ ಬಳಿಕ ಸ್ಮರಿಸಿ ಸನ್ಮಾನಿಸುತ್ತಿರುವುದು ಬಹುಷಃ ಇದೇ ಮೊದಲು. ಶಿಷ್ಯವರ್ಗದ ಇಂತಹ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಗುರುಗಳಾದ ಪ್ರೊ. ಗಾಯತ್ರಿದೇವಿ ಸಜ್ಜನ್, ಪ್ರೊ.ಪುಷ್ಪಲತಾ, ಪ್ರೊ.ಸುಭಾಷ್,ಪ್ರೊ.ದಿವಾಕರ್, ಪ್ರೊ.ಸುಬ್ರಹ್ಮಣ್ಯಂ, ಡಾ.ನಾಗರಾಜ್, ಪ್ರೊ.ಜಯದೇವಪ್ಪ, ಪ್ರೊ.ಗೌಡರ ಶಿವಣ್ಣನವರ್, ಡಾ.ಪರಮೇಶ್ವರ್ ನಾಯ್ಕ್, ಮಂಜುಳಾ, ನಾಗರಾಜ್,ಪ್ರೊ.ನಾಗಭೂಷಣ್ ರೆಡ್ಡಿ ಮಾತನಾಡಿ ಹಳೆಯ ನೆನಪು ಹಂಚಿಕೊಂಡರು.
ಹಿರಿಯ ವಿದ್ಯಾರ್ಥಿ ಜೇಸುದಾಸ್ ಪಿ ಪ್ರಾಸ್ತಾವಿಕ ಭಾಷಣ ಮಾಡಿದರು. ಗುರುವಂದನಾ ಸಮಿತಿ ಅಧ್ಯಕ್ಷ ಉಮೇಶ್ ಮಾನೆ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಕೆ.ಎನ್.ಗಿರೀಶ್, ವೇಣುಗೋಪಾಲ್, ನಿರಂಜನ ವೇದಿಕೆಯಲ್ಲಿದ್ದರು. ನಾಗರಾಜ್ ನೇರಿಗೆ ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಕೆ ಮತ್ತು ಜ್ಞಾನೇಶ್ ಎಂ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಶಿವಕುಮಾರ್ ಪ್ರಾರ್ಥಿಸಿದರು. ಪರಮೇಶ್ವರ್ ಅವರು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಶ್ರೀಮತಿ ಆಶಾ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಲತಾಮಣಿ ಎಲ್ಲರನ್ನೂ ವಂದಿಸಿದರು.

ಶ್ರದ್ಧಾಂಜಲಿ:
ಕಾರ್ಯಕ್ರಮಕ್ಕೂ ಮುನ್ನ ನಿಧನರಾದ ಅಧ್ಯಾಪಕರು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಇಂದಿನ ಕಾರ್ಯಕ್ರಮ ಸಾರಿದೆ. ತಮ್ಮದೇ ಆದ ವೈಯಕ್ತಿಕ ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಆದರೆ ಗುರುವಂದನೆ ಕಾರ್ಯಕ್ರಮ ಮಾಡಿ ಎಲ್ಲಾ ಅಧ್ಯಾಪಕರನ್ನು ಒಂದೆಡೆ ಸೇರಿಸಿರುವ 1993-96 ನೇ ಬ್ಯಾಚ್‌ನ ಶಿಷ್ಯಕೂಟ ಮಾದರಿ ಕೆಲಸ ಮಾಡಿದೆ.

ಪ್ರೊ.ಹೆಚ್.ಎಂ.ವಾಗ್ಧೇವಿ, ವಿಶ್ರಾಂತ ಪ್ರಾಂಶುಪಾಲರು, ಸಹ್ಯಾದ್ರಿ ವಿಜ್ಞಾನ ಕಾಲೇಜು,

ಸೆಲ್ಫಿ ಸಂಭ್ರಮ
ಬಹಳ ವರ್ಷಗಳ ನಂತರ ಪರಸ್ಪರ ಭೇಟಿಯಾದ ಸವಿನೆನಪಿಗಾಗಿ ಎಲ್ಲೆಂದರಲ್ಲಿ ಸೆಲ್ಫೀ ಸಂಭ್ರಮವೇ ಎದ್ದುಕಾಣುತಿತ್ತು. ಶಿಷ್ಯವರ್ಗ ತಮ್ಮ ಗುರುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಮಕ್ಕಳು,ಕುಟುಂಬ ವರ್ಗ ಸೆಲ್ಫಿ ತೆಗೆಸಿಕೊಂಡು ಗುರುವಂದನೆ ಕಾರ್ಯಕ್ರಮವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಸಾಂಸ್ಕೃತಿಕ ಕಾರ್ಯಕ್ರಮ:
ಹಿರಿಯ ವಿದ್ಯಾರ್ಥಿಗಳು ಮತ್ತು ಕುಟುಂಬ ವರ್ಗಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲರೂ ತಮ್ಮ ಕುಣಿದು ಸಂಭ್ರಮಿಸಿ ಕಾಲೇಜು ದಿನಗಳನ್ನು ಮರುಸೃಷ್ಟಿಸಿಕೊಂಡಿದ್ದು, ಎಲ್ಲರಲ್ಲೂ ಧನ್ಯತಾಭಾವ ಮೂಡಿಸಿತು.

Ad Widget

Related posts

ಸಾಗರ ಕ್ಷೇತ್ರದಲ್ಲಿ ಹಾಲಪ್ಪರ ಭರದ ಪ್ರಚಾರ

Malenadu Mirror Desk

ಹೆಂಡ ಕುಡಿದು ಇಬ್ಬರು ಹುಡುಗಿಯರು ಸಾವು

Malenadu Mirror Desk

ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಂಘದ ಸರ್ವಸದಸ್ಯರ ಸಭೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.