ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವವರ ಕೈ ಕಟ್ ಮಾಡುವೆ ಎಂದು ಹೇಳುವ ಧಂ ಬಿಜೆಪಿ ನಾಯಕ ಈಶ್ವರಪ್ಪ ಅವರಿಗೆ ಇಲ್ಲವೇ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಶನಿವಾರ ಅವರು ಮಾತನಾಡಿದರು. ಭದ್ರಾವತಿಯ ಕಾರ್ಖಾನೆಗಳು ಕನ್ನಡ ನಾಡಿದ ಅಸ್ಮಿತೆಗಳು ಅವುಗಳನ್ನು ಉಳಿಸಿಕೊಳ್ಳಲೇ ಬೇಕು. ಖಾಸಗಿ ಕಂಪನಿಗಳಿಗೆ ಬೆಲೆ ಬಾಳುವ ಭೂಮಿಯನ್ನು ಮಾರುವ ಹುನ್ನಾರ ಈ ನಿರ್ಧಾರದ ಹಿಂದೆ ಇರಬಹುದು ಎಂಬ ಅನುಮಾನ ಬರುತ್ತಿದೆ. ಕಾರ್ಖಾನೆಗಳನ್ನು ಮುಚ್ಚುವುದೇ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯೇ ಎಂದು ಟೀಕಿಸಿದ ಅವರು, ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ಒಂದು ಲಕ್ಷ ರೂಪಾಯಿಯನ್ನೂ ಶಿವಮೊಗ್ಗಕ್ಕೆ ತರಲು ಸಾಧ್ಯವಾಗಿಲ್ಲ ಎಂದರೆ ಇಲ್ಲಿನ ರಾಜಕಾರಣಿಗಳ ಸಾಮರ್ಥ್ಯದ ಅರಿವಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದರು ಕೇಂದ್ರ ಮಟ್ಟದಲ್ಲಿ ಮಾತುಕತೆ ನಡೆಸಿ ವಿಐಎಸ್‌ಎಲ್‌ಗೆ ೫೦೦ ಕೋಟಿ ರೂ. ಬಂಡವಾಳ ತರಲಾಗಿಲ್ಲ. ಸಾವಿರಾರು ಕುಟುಂಬಗಳ ಹೆಣ್ಣುಮಕ್ಕಳ ಕಣ್ಣೀರಿನ ಶಾಪ ಇವರಿಗೆ ತಟ್ಟುತ್ತದೆ. ಮೈಸೂರು ಅರಸರ ಕಾಲದಲ್ಲಿ ಆದ ಕಾರ್ಖಾನೆಯನ್ನು ಬಿಜೆಪಿ ಆಡಳಿತದಲ್ಲಿ ಮುಚ್ಚವ ಕೆಲಸ ಆಗುತ್ತದೆ. ಪ್ರಧಾನಿ ವಿಮಾನ ನಿಲ್ದಾಣ ಉದ್ಘಾಟನೆಗೆ ಬರುತ್ತಿದ್ದಾರೆ. ಅವರಿಗೆ ಕಾರ್ಖಾನೆ ಉಳಿಸುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮನವರಿಕೆ ಮಾಡಿಕೊಡಬೇಕಿದೆ ಎಂದು ವಿಶ್ವನಾಥ್ ಆಗ್ರಹಿಸಿದರು.
ಚುನಾವಣೆ ದುಬಾರಿ:
ಮುಂಬರು ಚುನಾವಣೆಯಲ್ಲಿ ನಾನು ಮತ್ತು ನನ್ನ ಮಗ ಇಬ್ಬರೂ ಸ್ಪರ್ಧಿಸುವುದು ಸಾಧ್ಯವಿಲ್ಲ. ಈಗ ರಾಜಕಾರಣ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಪಾರ್ಟಿಗೆ ಅರ್ಜಿ ಹಾಕಿದವರನ್ನು ಆಕಾಂಕ್ಷಿಗಳು ಎನ್ನುವುದಕ್ಕಿಂತ ಗಿರಾಕಿಗಳು ಎಂದು ನೋಡುವಂತಾಗಿದೆ. ಯಾವ ಗಿರಾಕಿ ಹೆಚ್ಚು ಬಂಡವಾಳ ಹೊಂದಿದ್ದಾನೊ ಅವನಿಗೆ ಟಿಕೆಟ್ ಸಿಗುವಂತಾಗಿದೆ. ರಾಜಕೀಯದ ಪರಿಭಾಷೆಯೇ ಬದಲಾಗಿದೆ ಹೀಗಾದರೆ ಮೌಲ್ಯಗಳಿಗೆ ಬೆಲೆ ಇಲ್ಲ ಎಂದು ವಿಶ್ವನಾಥ್ ಹೇಳಿದರು.
ಹಣ ಪಡೆದಿಲ್ಲ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಹಣ ಪಡೆದಿದ್ದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಟೀಕಿಸುವ ನೈತಿಕತೆ ನನಗಿರುತ್ತಿರಲಿಲ್ಲ. ಜನ ಬೇಕಾದ ರೀತಿ ಅರ್ಥೈಸುತ್ತಿದಾರೆ. ಆದರೆ ಹಣದ ಹಿಂದೆ ಹೋಗುವ ರಾಜಕಾರಣಿ ನಾನಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಪರ ಪ್ರಚಾರ:
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವೆ. ನಾನೀಗ ವಿಧಾನ ಪರಿಷತ್ ಸದಸ್ಯನಾಗಿರುವುದು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶಿತನಾಗಿ. ನಾನು ಕಾಂಗ್ರೆಸ್ ಕುಟುಂಬದವನು. ನಲವತ್ತು ವರ್ಷ ರಾಜಕಾರಣ ಅಲ್ಲಿಯೇ ಮಾಡಿದ್ದು, ಕಾಂಗ್ರೆಸ್ ನನ್ನ ಮನೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುವೆ ಈ ಬಗ್ಗೆ ಅನುಮಾನ ಬೇಡ ಎಂದು ವಿಶ್ವನಾಥ್ ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್ ಯಡಗೆರೆ,ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.