ಶಿವಮೊಗ್ಗ :- ಜನರ ಹಣ ಜನರಿಗೇ ಸಲ್ಲಬೇಕು ಎಂಬುದು ಕಾಂಗ್ರೆಸ್ ಸಿದ್ಧಾಂತವಾಗಿದ್ದು, ಪ್ರತಿ ಮನೆಗೆ ೨೦೦ ಯೂನಿಟ್‌ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ ೨ ಸಾವಿರ ರೂ.ನೇರವಾಗಿ ಬ್ಯಾಂಕ್ ಖಾತೆಗೆ ಮತ್ತು ರಾಜ್ಯದ ೪ ಕೋಟಿ ಜನರಿಗೆ ಪ್ರತಿಯೊಬ್ಬರಿಗೂ ೧೦ ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ ನೀಡುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಕಾಂಗ್ರೆಸ್ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ೩.೧೦ ಲಕ್ಷ ಕೋಟಿ ಬಜೆಟ್‌ನಲ್ಲಿ ಶೇ. ೪೦ರಷ್ಟು ಎಂದರೆ ಸುಮಾರು ೭೫ ಲಕ್ಷ ಕೋಟಿಯಷ್ಟು ದುಡ್ಡು ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಆ ಹಣದಲ್ಲೇ ನಾವು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೆ ರಾಜ್ಯದ ಎಲ್ಲಾ ಮನೆಗಳಿಗೂ ಉಚಿತ ವಿದ್ಯುತ್, ಪ್ರತಿ ಮನೆಯ ಗೃಹಿಣಿಗೆ ಮನೆ ಖರ್ಚಿಗೆ ೨ಸಾವಿರ ರೂ. ಹಾಗೂ ಅನ್ನಭಾಗ್ಯ ನೀಡುವ ಆದೇಶ ಮಾಡುತ್ತೇವೆ ಎಂದರು.
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಎಲ್ಲಾ ಜನರು ಮಾತನಾಡುತ್ತಿದ್ದಾರೆ. ೪೦ರಷ್ಟು ಕಮಿಷನ್ ಬಗ್ಗೆ ಇಡೀ ದೇಶದ ಗಮನವನ್ನು ಕರ್ನಾಟಕ ಸೆಳೆದಿದೆ. ಆರೋಪ ಕಾಂಗ್ರೆಸ್ ಮಾಡುತ್ತಿಲ್ಲ. ರಾಜ್ಯದ ೫೦ಸಾವಿರ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಆರೋಪಿಸಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ತಾನು ಮಾಡಿದ ಕೆಲಸಕ್ಕೆ ೪೦ರಷ್ಟು ಕಮಿಷನ್ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡ. ಆತನ ವೃದ್ಧ ತಂದೆ ಮತ್ತು ಪತ್ನಿ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇನ್ನೋರ್ವ ಗುತ್ತಿಗೆದಾರ ಬೆಂಗಳೂರು ಗ್ರಾಮಾಂತರದ ಟಿ.ಎನ್. ಪ್ರಸಾದ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜೇಂದ್ರ ಎಂಬ ವ್ಯಕ್ತಿ ಕೂಡ ಕಮಿಷನ್ ನೀಡಲಾಗದೆ ಸತ್ತಿದ್ದಾನೆ. ಬಿಜೆಪಿಗೆ ಎಷ್ಟು ಹಣ ಬೇಕು ಎಂದು ಹೇಳಲಿ. ಅವರ ಹಣದ ದಾಹವನ್ನು ಕಾಂಗ್ರೆಸ್ ತೀರಿಸುತ್ತದೆ. ಆದರೆ ಸತ್ತ ಗುತ್ತಿಗೆದಾರರನ್ನು ಅವರು ವಾಪಾಸು ಕೊಡಬಲ್ಲರೇ ಎಂದು ಅವರು ಪ್ರಶ್ನಿಸಿದರು.
ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಪಿಎಸ್‌ಐ ಹಗರಣದಲ್ಲಿ ಜೈಲುಪಾಲಾಗಿರುವುದು ದೇಶದಲ್ಲೇ ಮೊದಲು. ಇವರು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಸಹಕಾರಿ ಬ್ಯಾಂಕ್‌ಗಳ ನೇಮಕಾತಿ, ಪಿಎಸ್‌ಐ ನೇಮಕಾತಿ, ಇಂಜಿನಿಯರ್‌ಗಳ ನೇಮಕಾತಿ, ವರ್ಗಾವಣೆ, ಖಾಸಗಿ ಶಾಲೆಗಳಿಗೆ ಅನುದಾನ ಮಂಜೂರು ಮಾಡಲು ಕೂಡ ನೇರವಾಗಿ ಲಂಚ ಕೇಳಿದ್ದಾರೆ ಎಂದು ಅವರ ಸಂಘಟನೆಯ ಪ್ರಮುಖರೇ ಆರೋಪಿಸಿದ್ದಾರೆ. ಮಠ ಮಂದಿರಗಳಿಗೆ ಅನುದಾನ ನೀಡಲು ಕೂಡ ಕಮಿಷನ್ ಕೇಳಿದ್ದಾರೆ ಎಂದು ಸ್ವಾಮೀಜಿಗಳೇ ಆರೋಪಿಸಿದ್ದಾರೆ. ಹಾಗಾಗಿ ಕರ್ನಾಟಕದ ಜನ ಮತ ಹಾಕುವ ಮುನ್ನ ಎಚ್ಚರ ವಹಿಸಿ. ಕೇವಲ ಆರು ತಿಂಗಳಲ್ಲಿ ೮ ಬಾರಿ ಪ್ರಧಾನಿ ಬಂದು ಹೋಗಿದ್ದಾರೆ. ಟಾಟಾ ಮಾಡಿ ಹೋಗಿದ್ದು ಬಿಟ್ಟರೆ ಮುಗ್ಧ ಜನರಿಗೆ ಏನನ್ನೂ ಕೊಟ್ಟಿಲ್ಲ. ಕಾಂಗ್ರೆಸ್ ಕೊಟ್ಟ ಯೋಜನೆಗಳನ್ನು ತಮ್ಮದೆಂದು ಬಿಂಬಿಸುತ್ತಿದ್ದಾರೆ. ಹಕ್ಕುಪತ್ರ ನೀಡಿಲ್ಲ, ಮನೆ ನೀಡಿಲ್ಲ, ಉದ್ಯೋಗ ಸೃಷ್ಟಿ ಮಾಡಿಲ್ಲ. ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಮಾರಿದ್ದಾರೆ. ಜಿಲ್ಲೆಯ ಎರಡು ಪ್ರಮುಖ ಕಾರ್ಖಾನೆಗಳನ್ನು ಮುಚ್ಚಿದ್ದಾರೆ ಸ್ವಾಮೀಜಿಗಳು ಮಾಡಿದ ಆರೋಪಕ್ಕೆ ಸಿಎಂ ಹಾಗೂ ಬಿಎಸ್‌ವೈ ೬ತಿಂಗಳಾದರೂ ಉತ್ತರಿಸಿಲ್ಲ. ೨೦ ರೂ. ಸೋಪಿನಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿದ ಇವರು ಕರ್ನಾಟಕವನ್ನು ಬಿಡುತ್ತಾರೆಯೇ ಎಂದರು.
ಇಡೀ ಹಿಂದುಸ್ಥಾನದಲ್ಲಿ ಇವರ ಭ್ರಷ್ಟಾಚಾರ ಸಾರ್ವಜನಿಕರಿಗೆ ಗೊತ್ತಾಗಿದೆ. ಪೌರ ಕಾರ್ಮಿಕರ ನೇಮಕಾತಿಯಲ್ಲಿ ಕೂಡ ಭ್ರಷ್ಟಾಚಾರ ಮಾಡಿದ್ದಾರೆ. ಹಿಂಸೆಯ ರಾಜಕಾರಣ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಜಗ್ಗಲ್ಲ. ಮಹಾತ್ಮಾ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಗುಂಡಿಗೆ ಬಲಿಯಾದರು. ಆದರೆ ಕಾಂಗ್ರೆಸ್ ಸತ್ತಿಲ್ಲ. ದೇಶ ಜೀವಂತವಾಗಿದೆ. ಸಿದ್ದರಾಮಯ್ಯನವರಿಗೆ ಒಬ್ಬ ಸಚಿವ ಕೊಲೆ ಬೆದರಿಕೆ ಹಾಕುತ್ತಾನೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರನ್ನು ನಾನು ತಂದು ಬಿಜೆಪಿಯವರ ಮುಂದೆ ನಿಲ್ಲಿಸುತ್ತೇನೆ ತಾಕತ್ತಿದ್ದರೆ ಹೊಡೆದುಹಾಕಲಿ ಎಂದರು.
ಮಾ.೧೧ರಿಂದ ನಮ್ಮ ಗ್ಯಾರಂಟಿ ಕಾರ್ಡ್ ಅನ್ನು ರಾಜ್ಯದ ಎಲ್ಲರ ಮನೆಗೂ ತಲುಪಿಸುತ್ತೇವೆ. ಅದರ ಒಂದು ಭಾಗದಲ್ಲಿ ಅವರಿಂದ ನಂಬರ್ ಪಡೆದು ಇನ್ನರ್ಧ ಭಾಗವನ್ನು ಗ್ಯಾರಂಟಿಯಾಗಿ ನೀಡುತ್ತೇವೆ.ನಮ್ಮ ಸರ್ಕಾರ ಬಂದ ತಕ್ಷಣ ಈ ಮೂರೂ ಯೋಜನೆಗಳು ಜಾರಿಗೆ ಬರುತ್ತವೆ ಜನರ ಹಣವನ್ನೇ ಜನರಿಗೆ ನೀಡುತೇವೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದರು.
ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ, ಪ್ರಮುಖರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್,ಮಧು ಬಂಗಾರಪ್ಪ, ಕೆ.ಬಿ. ಪ್ರಸನ್ನಕುಮಾರ್, ಆರ್ ಪ್ರಸನ್ನಕುಮಾರ್, ಆರ್‌ಎಂ. ಮಂಜುನಾಥ್ ಗೌಡ, ಹೆಚ್. ಎಂ. ಚಂದ್ರಶೇಖರಪ್ಪ ಎನ್. ರಮೇಶ್ ಮೊದಲಾದವರು ಮಾತನಾಡಿದರು. ಸುರ್ಜೆವಾಲಾ ಭಾಷಣವನ್ನು ಬಲ್ಕಿಷ್‌ಭಾನು ಭಾಷಾಂತರಿಸಿದರು. ಸಭೆಯಲ್ಲಿ ಬೇಳೂರು ಗೋಪಾಲಕೃಷ್ಣ, , ಇಸ್ಮಾಯಿಲ್ ಖಾನ್, ಹೆಚ್.ಸಿ. ಯೋಗೀಶ್‌ಎಸ್.ಪಿ. ದಿನೇಶ್, ವೈ.ಹೆಚ್. ನಾಗರಾಜ್, ಪಲ್ಲವಿ, ಸತ್ಯನಾರಾಯಣರಾವ್, ರವಿಕುಮಾರ್, ಎಸ್.ಕೆ. ಮರಿಯಪ್ಪ, ಡಾ. ಶ್ರೀನಿವಾಸ ಕರಿಯಣ್ಣ, ರಾಮೇಗೌಡಬಲದೇವಕೃಷ್ಣ, ಇಕ್ಕೇರಿ ರಮೇಶ್ ಮತ್ತಿತರರಿದ್ದರು.
ಹೆಣ್ಣು ಮಕ್ಕಳಿಗೆ ರೈತರಿಗೆ, ಯುವಕರಿಗೆ, ದಲಿತರಿಗೆ ಬಿಜೆಪಿ ನ್ಯಾಯ ಕೊಡುವುದಿಲ್ಲ. ಮೋದಿ ಬಂದುಹೋದ ಮೇಲೆ ಗ್ಯಾಸ್ ಬಲೆ ೫೦ರೂ. ಹೆಚ್ಚಳವಾಯ್ತು. ಪಕೋಡ ಮಾಡುವ ವಾಣಿಜ್ಯ ಗ್ಯಾಸ್ ಬೆಲೆ ೩೦೦ ರೂ. ಹೆಚ್ಚಳವಾಯ್ತು. ಹವಾಯಿ ಚಪ್ಪಲಿ ಹಾಕುವ ಬಡವ ವಿಮಾನದಲ್ಲಿ ಹಾರಾಡಬಹುದು ಎಂದು ಹೇಳಿ ಅವನ ಬೆವರಿನ ದುಡಿಮೆಗೆ ಕನ್ನ ಹಾಕಿದ ಮೋದಿ ಕರ್ನಾಟಕದ ಹಗರಣಗಳ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ
- ರಣದೀಪ್ ಸಿಂಗ್ ಸುರ್ಜೇವಾಲ