Malenadu Mitra
ರಾಜ್ಯ ಶಿವಮೊಗ್ಗ

ಈಶ್ವರಪ್ಪ ವಿರುದ್ಧದ ಆಯನೂರು ಹೇಳಿಕೆಯ ಹಿಂದಿನ ಮರ್ಮ ಏನು ?,
ಸೌಹಾರ್ದ ಶಿವಮೊಗ್ಗ ಘೋಷಣೆಯೊಂದಿಗೆ ಕಣಕ್ಕಿಳಿಯಲು ಮಂಜಣ್ಣ ತಾಲೀಮು

ಶಿವಮೊಗ್ಗ,ಮಾ.೨೧: ಮಲೆನಾಡಿನ ಡೈನಾಮಿಕ್ ರಾಜಕಾರಣಿ ಆಯನೂರು ಮಂಜುನಾಥ್ ಅವರು ಎರಡನೇ ಸುತ್ತಿನ ಪ್ಲೆಕ್ಸ್ ಪರ್ವ ಆರಂಭಿಸಿದ್ದಾರೆ. ಯುಗಾಧಿ ಮತ್ತು ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ ಶಿವಮೊಗ್ಗ ಕ್ಷೇತ್ರಾದ್ಯಂತ ಅವರು ಹಾಕಿರುವ ಫ್ಲೆಕ್ಸ್‌ಗಳು ಶುಭಾಶಯ ಮಾತ್ರ ಹೇಳದೆ ತಮ್ಮದೇ ಪಕ್ಷದ ನಾಯಕರಿಗೆ ಬೇರೆಯದೇ ಆದ ಸಂದೇಶ ನೀಡುತ್ತಿದ್ದಾರೆ.

ಪರಿವಾರ ಮೂಲದ ಈ ಕಾರ್ಮಿಕ ನಾಯಕ ಒಂದು ಕಾಲದಲ್ಲಿ ಕಟ್ಟರ್ ಬಿಜೆಪಿಗರಾಗಿದ್ದು, ಬದಲಾದ ರಾಜಕೀಯ ಸನ್ನವೇಶದಲ್ಲಿ ಬಿಜೆಪಿ ಬಿಟ್ಟು ಮತ್ತೆ ಈಗ ಮಾತೃ ಪಕ್ಷದ ವಿಧಾನ ಪರಿಷತ್ ಸದಸ್ಯ. ಆಯನೂರು ಮಂಜುನಾಥ್ ಇತ್ತೀಚಿನ ರಾಜಕೀಯ ವರಸೆ ನಿಜಕ್ಕೂ ಆಶ್ಚರ್ಯವಾಗಿದೆ. ಯಾವ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತೊ ಗೊತ್ತಿಲ್ಲ. ಶಿವಮೊಗ್ಗ ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಧೋರಣೆಯನ್ನು ಅವರು ತೋರುತ್ತಿದ್ದಾರೆ.

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೇಳಿರುವ ಅವರು ಕೋಮುಘರ್ಷಣೆಯಿಂದ ಕುಖ್ಯಾತಿಯಾಗಿರುವ ಶಿವಮೊಗ್ಗ ಕ್ಷೇತ್ರದಲ್ಲ ಸೌಹಾರ್ದದ ಜಪ ಮಾಡುತ್ತಿದ್ದಾರೆ. ಕೋಮು ಭಾವನೆ ಕೆರಳಿಸುವುದನ್ನೇ ಚುನಾವಣೆ ಸರಕಾಗಿಸಿಕೊಳ್ಳುತ್ತಾರೆಂಬ ಅಪಖ್ಯಾತಿ ಹೊಂದಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಟಕ್ಕರ್ ಕೊಡುವಂತೆಯೇ ಆಯನೂರು ಮಂಜುನಾಥ್ ಅವರ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


”ಶಿವಮೊಗ್ಗದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ ಈ ಬಾರಿ ಆಯನೂರು ಮಂಜುನಾಥ್” ಎಂಬ ಘೋಷವಾಕ್ಯಗಳ ಪ್ಲೆಕ್ಸ್ ನಗರದ ಹಲವೆಡೆ ರಾರಾಜಿಸುತ್ತಿವೆ. ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ತಾವು ಪ್ರಬಲ ಆಕಾಂಕ್ಷಿ ಎಂಬುದನ್ನು ಆಯನೂರು ಮಂಜುನಾಥ್ ಅವರು ಈಗಾಗಲೆ ಘೋಷಿಸಿದ್ದಾರೆ. ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿವೆ. ಸಾರ್ವಜನಿಕರು ಮತ್ತು ಪ್ರತಿಪಕ್ಷ ಕಾಂಗ್ರೆಸ್ ಆಯನೂರು ಪೋಸ್ಟರ್ ಮುಂದಿಟ್ಟುಕೊಂಡು ಈಶ್ವರಪ್ಪ ಅವರ ಕಾಲೆಳೆದಿವೆ.

ಆಯನೂರು ಅವರು ಯುಗಾದಿ ಮತ್ತು ರಂಜಾನ್‌ಗೆ ಶುಭಾಶಯ ಕೋರಿ ಹಾಕಿರುವ ಫ್ಲೆಕ್ಸ್‌ಗಳಲ್ಲಿ ”ಹಿಂದೂ ಬಾಂಧವರಿಗೆ ಯುಗಾದಿ ಮತ್ತು ಮುಸ್ಲಿಮ್ ಬಾಂಧವರಿಗೆ ರಂಜಾನ್ ಶುಭಾಶಯಗಳು” ”ಹರಕುಬಾಯಿಗಳಿಗೆ ಹೊಲಿಗೆ ಬೀಳಲಿ… ಮುರಿದ ಮನಸುಗಳ ಬೆಸುಗೆಯಾಗಲಿ… ಶಿವಮೊಗ್ಗ ದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ…” ಎಂದು ಬರೆಯಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಆಯನೂರು ಮಂಜುನಾಥ್ ಅವರು ಸ್ವಪಕ್ಷೀಯರ ವೈಫಲ್ಯ ಎತ್ತಿ ತೋರಿಸಿದ್ದಾರೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.

ಪದೇ ಪದೇ ಕೋಮು ಸಂಘರ್ಷಗಳಿಂದ ಬಡವರು,ಕಾರ್ಮಿಕರು ನೆಮ್ಮದಿಯಿಂದ ಇರಲಾಗುತ್ತಿಲ್ಲ. ಶಾಂತಿ, ಸೌಹಾರ್ದತೆ ಕದಡುವವರನ್ನು ಮಟ್ಟ ಹಾಕಲು ಈ ಬಾರಿ ಆಯನೂರು ಮಂಜುನಾಥ್’ ಎಂಬ ಪೋಸ್ಟರ್, ಫ್ಲೆಕ್ಸ್ ಗಳು ಕಳೆದ ಎರಡು ತಿಂಗಳಿಂದ ಕಾಣಿಸಿಕೊಳ್ಳುತ್ತಿವೆ. ಈ ಬೆಳವಣಿಗೆ ಆಯನೂರು ಮಂಜುನಾಥ್ ಅವರು ಅವರದೇ ಪಕ್ಷದ ಈಶ್ವರಪ್ಪ ವಿರುದ್ಧವೇ ಸಮರ ಸಾರಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಚುನಾವಣೆಗೆ ನಿಲ್ಲುತ್ತೇನೆ, ನಾನು ಕುಟುಂಬಕ್ಕೆ ಟಿಕೆಟ್ ಕೇಳಿಲ್ಲ:


ಶಿವಮೊಗ್ಗ,ಮಾ.೨೧: ವಿದ್ಯಾರ್ಥಿ ದಿನಗಳಿಂದ ಶಿವಮೊಗ್ಗ ನನ್ನ ಕಾರ್ಯಕ್ಷೇತ್ರ. ಕಾರ್ಮಿಕ ಕ್ಷೇತ್ರ ಶಿವಮೊಗ್ಗನೇ ಆಗಿದೆ. ನನಗೆ ಪಕ್ಷ ಹಲವಾರು ಅವಕಾಶಗಳನ್ನು ಕೊಟ್ಟಿದೆ. ಆದರೆ ಕಾರ್ಯಕ್ಷೇತ್ರದಿಂದ ಹೊರಕ್ಕೆ ಹೆಚ್ಚು ಕೆಲಸವನ್ನು ಮಾಡುತ್ತಿದ್ದೇನೆ. ನಾನು ಬೆಳೆದಂತಹ ಈ ನಗರದ ಪ್ರತಿನಿಧಿ ಆಗಬೇಕು ಅನ್ನುವಂತಹ ಇಚ್ಛೆಯನ್ನು ವ್ಯಕ್ತಪಡಿಸಿದ್ದೇನೆ. ನಾನು ನನ್ನ ಮಗನಿಗೆ ನನ್ನ ಮಕ್ಕಳಿಗೆ ಕೇಳಿಲ್ಲ. ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ ಎಂದು ಆಯನೂರು ಮಂಜುನಾಥ್ ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಹರಕು ಬಾಯಿ ಯಾರದ್ದು? ಫ್ಲೆಕ್ಸ್ ಹಾಕಿದ್ದು ಯಾಕೆ? ಫ್ಲೆಕ್ಸ್ ನಲ್ಲಿ ಈ ಬಾರಿ ಆಯನೂರು ಮಂಜುನಾಥ್ ಎಂಬ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಹರಕು ಬಾಯಿ ವಿಚಾರದಲ್ಲಿ ಈಶ್ವರಪ್ಪನವರು ನಮ್ಮ ನಾಯಕರು ಅಂತಲೇ ಮಾತು ಆರಂಭಿಸಿದ ಆಯನೂರು ಅಲ್ಹಾಹುವಿಗೆ ಕಿವಿ ಕೇಳೊಲ್ವಾ ಎಂದು ಮಾತನಾಡಬಾರದು. ಅವರ ಅವರ ಧರ್ಮ ಅವರಿಗೆ, ಹಾಗೆ ಡಿಸಿ ಕಚೇರಿಯ ಮುಂದೆ ಆಜಾನ್ ಕೂಗುವುದು ಎಷ್ಟು ಸರಿ? ವಿಧಾನಸೌಧದ ಮುಂದೆಯೂ ಕೂಗುತ್ತೇವೆ ಎಂದು ಹೇಳಿದವರನ್ನೂ ಸೇರಿಸಿ ಹರಕು ಬಾಯಿಗೆ ಹೋಲಿಸಲಾಗಿದೆ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸಬಾರದು ಎಂದು ಸ್ಪಷ್ಟನೆ ನೀಡಿದರು.
ನಾನು ಕಾರ್ಮಿಕರ ಬಗ್ಗೆ, ಶಿಕ್ಷಕರ ಬಗ್ಗೆ ಎಷ್ಟೇ ಹೋರಾಡಿದರೂ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾನೂನು ರಚಿಸುವ ಶಾಸಕಾಂಗಕ್ಕೆ ಪ್ರವೇಶಿಸಬೇಕಿದೆ ಎಂಬುದು ನನ್ನ ಅಭಿಲಾಷೆ. ಬಿಜೆಪಿಯಿಂದ ಟಿಕೇಟ್ ಕೇಳಿರುವೆ. ಈ ಕುರಿತು ಈಗಾಗಲೇ ನಮ್ಮ ನಾಯಕರಿಗೆ ಪತ್ರವನ್ನೂ ಬರೆದಿರುವೆ ಎಂದು ಸ್ಪಷ್ಟಪಡಿಸಿದರು.

ಫ್ಲೆಕ್ಸ್ ಹಾಕಿರುವುದು ಎರಡು ಸಮುದಾಯದ ಹಬ್ಬ ಒಟ್ಟೊಟ್ಟಿಗೆ ಬಂದಿದೆ. ಹಾಗಾಗಿ ಹಬ್ಬಕ್ಕೆ ಶುಭಾಶಯಗಳನ್ನ ಕೋರಲಾಗಿದೆ. ಶಿವಮೊಗ್ಗದಲ್ಲಿ ಶಾಂತಿ ನೆಲೆಸುವ ಅವಕಾಶವಿದೆ. ಎರಡು ಮನಸ್ಸುಗಳನ್ನ ಬೆಸೆಯಬೇಕಿದೆ. ಅನುಮಾನದಲ್ಲಿ ಬದುಕುವಂತಾಗಿದೆ. ಸಂಜೆ ಆದರೆ ಸಾಕು, ಮನೆಯಲ್ಲಿ ಮಹಿಳೆಯರು ಮಕ್ಕಳು ಅಪ್ಪಯಾಕೆ ಇನ್ನೂ ಬಂದಿಲ್ಲವೆಂಬ ಆತಂಕಕ್ಕೆ ಜಾರುವಂತಾಗಿದೆ. ಹಾಗಾಗಿ ನನಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಗೂ ಶಾಂತಿಯಿಂದ ಬದುಕುವಂತೆ ಮಾಡುತ್ತೇನೆ ಎಂಬ ಭರವಸೆಗಾಗಿ ಈ ಫ್ಲೆಕ್ಸ್ ಹಾಕಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಹೂಡಿಕೆ ಯಾಕಾಗುತ್ತಿಲ್ಲ?
ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಯಚೂರು, ಮಸ್ಕಿಗೆ ಬಂಡವಾಳ ಹರಿದು ಹೋಗಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗಕ್ಕೆ ಒಂದು ರೂಪಾಯಿ ಬಂಡವಾಳ ಬರಲಿಲ್ಲ ಯಾಕೆ ಎಂಬ ಗಂಭೀರ ಪ್ರಶ್ನೆಯನ್ನು ಕೇಳುವ ಮಂಜುನಾಥ್, ಶಿವಮೊಗ್ಗದಲ್ಲಿ ಸೌಹಾರ್ದ ವಾತಾವಣ ನೆಲೆಸಿದರೆ ಎಲ್ಲರೂ ಬರುತ್ತಾರೆ. ಅದಕ್ಕೆ ಇಲ್ಲಿನ ಭೂಮಿಯನ್ನು ಹದಗೊಳಿಸಬೇಕು. ಇಲ್ಲಿನ ಜನರ ಮನಸಲ್ಲಿ ಪ್ರೀತಿಯನ್ನು ಬಿತ್ತಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿಯ ಹಿಂದುಳಿದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹರಕುಬಾಯಿ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಒಂದು ಆಂದೋಲನವನ್ನು ಆಯನೂರು ಮಂಜುನಾಥ್ ಆರಂಭಿಸಿದ್ದಾರೆ.

Ad Widget

Related posts

ಶಾಸಕ ಹಾಲಪ್ಪ ಪುತ್ರಿ ವಿವಾಹ, ವಧುವರರನ್ನು ಹರಸಿದ ಮುಖ್ಯಮಂತ್ರಿ

Malenadu Mirror Desk

ಜಲ ಮೂಲಗಳ ಸಂರಕ್ಷಣೆಯಿಂದ ಅಂತರ್ಜಲ ಅಭಿವೃದ್ಧಿ: ಕೆ.ಬಿ ಅಶೋಕ್ ನಾಯ್ಕ್.

Malenadu Mirror Desk

ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ತರಬೇತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.