ರಾಜ್ಯ ಸರಕಾರ ಕೈ ಹಾಕಿದ್ದ ಜೇನುಗೂಡಿಂದ ಜೇನ್ನೊಣಗಳು ಅಂಬು ಬಿಡಲಾರಂಭಿಸಿವೆ. ಪ್ರತಿಷ್ಟಿತ ಕ್ಷೇತ್ರ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೇ ಮುತ್ತಿಗೆ ಹಾಕಿದ್ದ ಸಂತ್ರಸ್ಥ ಸಮುದಾಯಗಳು, ಮನೆಗೆ ಕಲ್ಲು ತೂರಿದ್ದ ಮಾತ್ರವಲ್ಲದೆ ಅವರ ಮನೆಯ ಮೇಲಿನ ಬಿಜೆಪಿ ಭಾವುಟವನ್ನು ಕಿತ್ತೊಗೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮೀಸಲಾತಿ ಮರು ಹಂಚಿಕೆ ಮಾಡಿರುವ ಬೊಮ್ಮಾಯಿ ಸರಕಾರದ ವಿರುದ್ಧ ಪ್ರತಿಭಟನೆ ಮತ್ತು ಅಸಮಾಧಾನ ನಿಧಾನವಾಗಿ ಆರಂಭವಾಗಿದ್ದು, ಶಿಕಾರಿಪುರದಲ್ಲಿ ಬಂಜಾರ ಮತ್ತು ಭೋವಿ ಸಮಾಜಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.
ಮೀಸಲಾತಿ ಕಡಿತ ಮಾಡಿದ್ದನ್ನು ಆರಂಭಿಸಿ ಆರಂಭವಾದ ಪ್ರತಿಭಟನೆ, ಇಷ್ಟು ಬಿರುಸಾಗುತ್ತದೆ ಎಂದು ಊಹಿಸದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಉದ್ರಿಕ್ತ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಕೂಡಾ ಮಾಡಿದರು.
ಪ್ರತಿಭಟನಾಕಾರರು ಬ್ಯಾನರ್, ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದ್ದು, ಮಾತ್ರವಲ್ಲದೆ, ಬಿಎಸ್‌ವೈ ಮನೆಯತ್ತ ಕಲ್ಲುತೂರಾಟ ಕೂಡಾ ನಡೆಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರು ಗಾಯಗೊಂಡಿರುವ ವರದಿಯಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಮರುಹಂಚಿಕೆ ಮಾಡುವ ನಿರ್ಣಯ ಅಂಗೀಕರಿಸಿರುವುದೇ ಬಂಜಾರ ಸಮಾಜ ಆಕ್ರೋಶಕ್ಕೆ ಕಾರಣವಾಗಿದೆ.