ಶಿಕಾರಿಪುರ,ಮಾ.೨೭: ಒಳಮೀಸಲಾತಿ ಜಾರಿಗೊಳಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸರಕಾರದ ನೀತಿ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಬಂಜಾರ್, ಭೋವಿ, ಮುಸ್ಲಿಂ ಸಮುದಾಯದ ಜನರು ಪ್ರತಿಭಟಿಸಿದರು. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮನೆ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿಗೆ ಪಟ್ಟಣದ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಟೈರ್‌ಗೆ ಬೆಂಕಿಹಚ್ಚಿದ ಪ್ರತಿಭಟನಾ ಕಾರರು ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಪ್ಲೆಕ್ಸ್ ಹರಿದು ಸುಟ್ಟರು. ಬಿಎಸ್ ವೈ ಹುಟ್ಟು ಹಬ್ಬಕ್ಕೆ ವಿತರಿಸಿದ್ದ ಸೀರೆಗೆ ಬೆಂಕಿಗೆ ಹಾಕಿ ರಾಜ್ಯ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ದರು. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಪೊಲೀಸರು ರಸ್ತೆತಡೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ಖಾಸಗಿ ಬಸ್‌ನಿಲ್ದಾಣಕ್ಕೆ ಸಾಗಿ ಶಿವಗಿರಿ ಪೆಟ್ರೋಲ್ ಬಂಕ್ ವೃತ್ತ, ಬಸ್‌ನಿಲ್ದಾಣ ವೃತ್ತ ದಲ್ಲಿ ಟೈರ್‌ಗೆ ಬೆಂಕಿಹಚ್ಚಿದಲ್ಲದೆ ಮುಖ್ಯಮಂತ್ರಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಸುತ್ತಲಿನ ಪ್ಲೆಕ್ಸ್ ಹರಿದು ಸುಟ್ಟರು ಸೀರೆ ತೂರುತ್ತಾ ಮೆರವಣಿಗೆ ನಡೆಸಿದ ಪರಿಣಾಮ ರಸ್ತೆಯ ಎಲ್ಲೆಂದರಲ್ಲಿ ಸೀರೆ ಬಿದ್ದಿದ್ದವು.
ಮಾಳೇರಕೇರಿಯಲ್ಲಿನ ಬಿ.ಎಸ್.ಯಡಿ ಯೂರಪ್ಪ ಮನೆಗೆ ಮುತ್ತಿಗೆ ಹಾಕುವುದಕ್ಕೆ ಪ್ರತಿಭಟನಾಕಾರರು ಹೋಗುವಾಗ ಪಿಎಲ್‌ಡಿ ಬ್ಯಾಂಕ್ ಬಳಿ ಬ್ಯಾರಿಕೇಡ್ ಹಾಕಿ ತಡೆಯುವ ಪ್ರಯತ್ನ ನಡೆಯಿತು. ಅದನ್ನು ಮುರಿದು ಮುನ್ನುಗ್ಗುವ ಹಂತದಲ್ಲಿ ಲಘು ಲಾಠಿ ಪ್ರಹಾ ರವೂ ನಡೆಯಿತು. ಪೊಲೀಸರ ಸಂಖ್ಯೆ ಕಡಿಮೆ ಇದ್ದ ಪರಿಣಾಮ ಪ್ರತಿಭಟನಾಕಾರರನ್ನು ತಡೆ ಯಲು ಆಗಲಿಲ್ಲ. ಪೊಲೀಸರತ್ತಲೂ ಕಲ್ಲು, ಚಪ್ಪಲಿ ಎಸೆದ ಪರಿಣಾಮ ಒಬ್ಬ ಪೊಲೀಸ್‌ಗೆ ಗಾಯವಾಯಿತು. ಮಾಳೇರಕೇರಿ ಆರಂಭ ದಲ್ಲಿದ್ದ ಬ್ಯಾರಿಕೇಡ್ ಮುರಿದು ನುಗ್ಗಿ ಬಿಎಸ್‌ವೈ ಮನೆಗೆ ಕಲ್ಲುತೂರಿ ಕಿಟಕಿ ಗಾಜು ಒಡೆಯ ಲಾಯಿತು. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಪ್ರತಿಭಟನೆ ನೆಪದಲ್ಲಿ ಕಲ್ಲು ತೂರಾಟ ಬೇಡ ಎಂದು ಬಿಎಸ್‌ವೈ ಮನೆ ಎದುರು ನಿಂತ ಮುಖಂಡರು ಮನವಿ ಮಾಡಿದ ನಂತರ ಪ್ರತಿಭಟನಾಕಾರರು ವಾಪಸ್ ತೆರಳಿದರು.
ಬಂಜಾರ ಸಮುದಾಯದವರು ಶಿಕಾರಿಪುರದಲ್ಲಿ ನಮ್ಮ ಮನೆಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ಮಾಡಿರುವುದು ನೊವು ತಂದಿದೆ. ಯಾವುದೇ ಪ್ರತಿಭಟನಾಕಾರರ ಮೇಲೆ ದೂರು ದಾಖಲಿಸದಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಒಳ ಮೀಸಲಾತಿ ಸಂಬಂಧ ಯಾವುದೇ ಅನ್ಯಾಯ ಆಗಿದ್ದರೆ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ. ಶಿಕಾರಿಪುರಕ್ಕೆ ಬಂದು ಸ್ಥಳೀಯ ಮುಖಂಡರೊಂದಿಗೆ ಮಾತನಾಡುತ್ತೇನೆ. ಕಾನೂನು ಕೈಗೆತ್ತಿಕೊಳ್ಳುವ ಗುಣ ಶಿಕಾರಿಪುರದಲ್ಲ. ಕ್ಷೇತ್ರದ ಎಲ್ಲಾ ಸಮುದಾಯದ ಜೊತೆಗೆ ನಾನು ಮತ್ತು ನಮ್ಮ ಕುಟುಂಬವಿದೆ.
–ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸಂವಿಧಾನ ವಿರೋಧಿ ನೀತಿ
ಶಿಕಾರಿಪುರ,ಮಾ.೨೭: ಒಳಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ ಆದರೂ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುವ ಉದ್ದೇಶಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಒಳಮೀಸಲು ಕಲ್ಪಿಸಲು ಹೊರಟಿದೆ ಎಂದು ಬಂಜಾರ್ ಸಮಾಜದ ಶ್ರೀ ಸೈನಾಭಗತ್ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಒಳಮೀಸಲಾತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಗ್ರಾಮದಲ್ಲೂ ಮನೆ ಮಾಡಿಕೊಳ್ಳಲು ಬಿಡದೆ ಪ್ರತ್ಯೇಕ ತಾಂಡದಲ್ಲಿ ವಾಸಿಸುತ್ತಿರುವ ಬಂಜಾರ್ ಜನಾಂಗ ರಾಜ್ಯದಲ್ಲಿ ಅತಿಹಿಂದುಳಿದಿದೆ ಮೀಸಲಾತಿ ನಂತರ ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಬೆಳಕು ಕಾಣುತ್ತಿದ್ದಾರೆ ಈ ಹಂತದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ನಮ್ಮ ಜನಾಂಗಕ್ಕೆ ಅನ್ಯಾಯ ಆಗುತ್ತಿದೆ. ಭೋವಿ ಜನಾಂಗವೂ ಹಿಂದುಳಿದಿದ್ದು ಅವರಿಗೂ ಒಳಮೀಸಲಾತಿ ಅನ್ಯಾಯವಾಗಿದೆ. ಮುಸ್ಲಿಂರಿಗೆ ಇದ್ದ ಮೀಸಲಾತಿ ತೆಗೆಯಲಾಗಿದೆ ಬಿಜೆಪಿ ಸರಕಾರ ಒಳಮೀಸಲಾತಿ ಜಾರಿಗೊಳಿಸುವುದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಬಂಜಾರ್ ಮುಖಂಡ ರಾಘವೇಂದ್ರನಾಯ್ಕ ಮಾತನಾಡಿ, ತಾಲೂಕಿನಲ್ಲಿ ಬಂಜಾರ್, ಭೋವಿ ಜನಾಂಗದ ಬೆಂಬಲದ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬ ಎಲ್ಲ ರಾಜಕೀಯ ಅಧಿಕಾರ ಪಡೆದಿದ್ದಾರೆ ಈಗ ನಮ್ಮ ಸಮುದಾಯವನ್ನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ಸರಕಾರ ಸಂವಿಧಾನ ಬದಲಾಯಿಸುವುದಕ್ಕೆ ಹೊರಟಿದೆ ಅದು ದೇಶದ ಅಸ್ತಿತ್ವಕ್ಕೆ ಗಂಡಾಂತರ ತರುವಂತದ್ದು ಜನತೆ ಬಿಜೆಪಿ ಬೆಂಬಲಿಸಬಾರದು. ಒಳಮೀಸಲಾತಿ ವಾಪಸ್ ಪಡೆಯುವವರೆಗೂ ಹೋರಾಟ ನಡೆಸುವುದಕ್ಕೆ ಜನತೆ ಸಿದ್ಧರಾಗಿರಿ. ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೆ ಕರೆ ನೀಡಿದ್ದರೂ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ವಿಷಾದಕರ ಹೀಗೆ ಆಗದಂತೆ ಯುವಕರು ಎಚ್ಚರಿಕೆ ವಹಿಸಬೇಕು ಇಲ್ಲವಾದರೆ ಸಮುದಾಯದಕ್ಕೆ ಕೆಟ್ಟಹೆಸರು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಂಜಾರ್ ಗೋರ್‌ಸೇನಾ ಅಧ್ಯಕ್ಷ ಚಂದ್ರುನಾಯ್ಕ, ಕಾರ್‍ಯದರ್ಶಿ ಮಂಜುನಾಯ್ಕ, ಶ್ರೀಕಾಂತನಾಯ್ಕ, ಮುಖಂಡರುಗಳಾದ ನರಸಿಂಗನಾಯ್ಕ, ಸುನಿಲ್, ರಾಘು, ಸುರೇಶ್‌ನಾಯ್ಕ, ಮಲ್ಲಿಕನಾಯ್ಕ, ಶೇಖರನಾಯ್ಕ ಸೇರಿದಂತೆ ನೂರಾರು ಜನರಿದ್ದರು.