ಶಿವಮೊಗ್ಗ ಕ್ಷೇತ್ರದಲ್ಲಿ ಹೊರಗಿನವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಕಾಂಗ್ರೆಸ್ ನಿಯೋಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುವುದೆಂಬ ವದಂತಿಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷದ ಎಲ್ಲಾ ಆಕಾಂಕ್ಷಿಗಳೂ ಒಟ್ಟಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ.
ಪಕ್ಷದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿರುವ ನಮ್ಮಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಆದರೆ ಹೊರಗಿನಿಂದ ಯಾರನ್ನೂ ಕರೆತರುವುದು ಬೇಡ ಎಂಬ ಮನವಿಯನ್ನು ಪಕ್ಷದ ನಾಯಕರಲ್ಲಿ ಮಾಡಲಾಗಿದೆ. ನಿಯೋಗದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ಎಸ್.ಪಿ.ದಿನೇಶ್, ಹೆಚ್.ಸಿ.ಯೋಗೀಶ್, ದೀಪಕ್ ಸಿಂಗ್ , ಕೆ.ರಂಗನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮುಖಂಡರ ಮನವಿ ಕೇಳಿದ ಸಿದ್ದರಾಮಯ್ಯ ಅವರು, ಹೊರಗಿನವರಿಗೆ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ. ನಿಮ್ಮಲ್ಲಿಯೇ ಯಾರಿಗಾದರೂ ಒಬ್ಬರಿಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರೆನ್ನಲಾಗಿದೆ.
ಕೆಪಿಸಿಸಿ ಸದಸ್ಯ ವೈಹೆಚ್ ನಾಗರಾಜ್ ಅವರು ಆಯನೂರು ಮಂಜುನಾಥ್ ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತಿಸುವೆ. ಅವರೊಬ್ಬ ಪ್ರಬಲನಾಯಕರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬರಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಆಯನೂರು ಮಂಜುನಾಥ್ ಪಕ್ಷಕ್ಕೆ ಬರುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮೂಡಿದ್ದು, ಒಂದು ಮನೆ ಹಲವು ಬಾಗಿಲು ಎನ್ನುವಂತಿದ್ದ ಶಿವಮೊಗ್ಗ ನಗರ ಕಾಂಗ್ರೆಸ್ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಈ ಐಕ್ಯತೆ ಚುನಾವಣೆ ತನಕ ಇರುತ್ತದೆಯೇ ಎಂಬುದಿಲ್ಲಿ ಯಕ್ಷ ಪ್ರಶ್ನೆಯಾಗಿದೆ.