Malenadu Mitra
ರಾಜ್ಯ ಶಿವಮೊಗ್ಗ

ಸಾಗರ ಬಿಜೆಪಿಯಲ್ಲಿ ಎಂತದಿದು ಭಿನ್ನಸ್ವರ, ಪರಿವಾರ ಪ್ರಮುಖರಿಂದ ಶಾಸಕರ ವಿರುದ್ಧ ಅಭಿಯಾನ, ಶಾಸಕರ ಬೆನ್ನಿಗೆ ಬಿಎಸ್‌ವೈ

ಶಿವಮೊಗ್ಗ,ಮಾ.೩೧: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿನ ಬೆಳವಣಿಗೆಗಳು ಆ ಪಕ್ಷದ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಗಳು ಕಂಡು ಬರುತ್ತಿವೆ. ನಾಲ್ಕು ಕ್ಷೇತ್ರಗಳಲ್ಲಿ ಹಾಲಿ  ಆಡಳಿತ ಪಕ್ಷದ ಶಾಸಕರ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದು, ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬೇಡಿ ಎಂಬ ದೂರುಗಳು ಪಕ್ಷದ ನಾಯಕರನ್ನು ತಲುಪುತ್ತಿವೆ.
ಸೊರಬ ಮತ್ತು ಸಾಗರ ಕ್ಷೇತ್ರದಲ್ಲಿ  ಹಾಲಿ ಶಾಸಕರುಗಳ ವಿರುದ್ಧ ವ್ಯವಸ್ಥಿತವಾದ ಕಾರ್ಯತಂತ್ರವನ್ನು ಹೆಣೆಯುತ್ತಿರುವ ಸಂಘಪರಿವಾರ ಪ್ರೇಷಿತ ತಂಡಗಳು ಶಾಸಕರಾದ ಕುಮಾರ್ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂಬ ಒತ್ತಡವನ್ನು ಹೇರುತ್ತಿವೆ.


ಹಾಲಪ್ಪ ವಿರುದ್ಧ ಆಕ್ರೋಶ ಯಾಕೆ ?


ಮೂರು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಹೆಗ್ಗಳಿಕೆ ಹೊಂದಿರುವ ಶಾಸಕ ಹರತಾಳು ಹಾಲಪ್ಪ ಅವರ ವಿರುದ್ಧ ಇಷ್ಟು ದಿನ ಅಂತರ್ಯದಲ್ಲಿದ್ದ ಬೇಗುದಿ ಈಗ ಬಹಿರಂಗವಾಗಿದ್ದು, ಮೂಲ ಬಿಜೆಪಿ ಮುಖಂಡರು ಸಮರ ಸಾರಿದ್ದಾರೆ. ಹಾಲಪ್ಪ ಅವರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ಯಡಿಯೂರಪ್ಪ ಅವರ ಪಾಳಯದಲ್ಲಿ ಪಳಗಿದ ರಾಜಕಾರಣಿಯಾಗಿದ್ದು, ರಾಜಕೀಯ ಕಾರ್ಯತಂತ್ರಗಳ ವಿಚಾರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಎಲ್ಲಾ ಬಗೆಯ ತಂತ್ರಗಳನ್ನು ಬಲ್ಲ ಅವರು ಚುನಾವಣೆ ನಡೆಸುವಲ್ಲಿ ವಿಭಿನ್ನ ನೈಪುಣ್ಯತೆಯನ್ನು ಹೊಂದಿದ್ದಾರೆ. ಮಲೆನಾಡಿನ ಸಮಸ್ಯೆಗಳ ಅರಿವು ಮತ್ತು ದೂರ ದೃಷ್ಟಿ ಹೊಂದಿರುವ ಅವರಿಗೆ ಬಿಜೆಪಿಯ ಸಂಪರ್ಕಜಾಲವೂ ಸಿಕ್ಕಿರುವುದರಿಂದ ಯಾವುದನ್ನೂ ಜಯಿಸಬಲ್ಲೆ ಎಂಬು ಉಮೇದು ಕೂಡ ಬಂದಿದೆ.
ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡಿದ್ದಲ್ಲದೆ, ಬೃಹತ್ ಮೊತ್ತದ ಅನುದಾನವನ್ನು ತಂದಿದ್ದಾರೆ. ಹೀಗಿದ್ದೂ, ಅವರಿಗೆ ಕ್ಷೇತ್ರದಲ್ಲಿ ಟಿಕೆಟ್ ಕೊಡಬೇಡಿ ಎಂದು ಬಿಜೆಪಿಯ ಅದರಲ್ಲೂ ಪರಿವಾರದ ಮುಖಂಡರು ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.


ಬೆಂಬಲಿಗರ ದುಂಡಾವರ್ತಿ

ಹಾಲಪ್ಪ ಅವರು ಹೇಳಿಕೇಳಿ ಬಂಗಾರಪ್ಪ ಅವರ  ಗರಡಿಯಲ್ಲಿ ರಾಜಕಾರಣದ ಅಕ್ಷರ ಕಲಿತವರು. ಬಂಗಾರಪ್ಪ ಅವರೂ ತಮ್ಮ ರಾಜಕೀಯ ಜೀವನದುದ್ದಕ್ಕೂ ತಮ್ಮದೇ ಆದ ನಂಬಿಗಸ್ತ ಪಡೆಯನ್ನು ಕಟ್ಟಿಕೊಂಡಿದ್ದರು. ಯಾವುದೇ  ಹಂತದಲ್ಲಿಯೂ ನಂಬಿದವರನ್ನು ಬಿಟ್ಟವರಲ್ಲ. ಆದರೆ ಕೊನೇ ಕಾಲದಲ್ಲಿ ಅವರಿಂದ ಲಾಭ ಪಡೆದವರೇ ಅವರಿಗೆ ಮುಳ್ಳಾಗಿದ್ದು, ರಾಜಕೀಯ ಇತಿಹಾಸ. ಅದೇ ರೀತಿ ಹಾಲಪ್ಪ ಅವರೂ ಕೂಡಾ ತಮ್ಮ ಸುತ್ತ ಒಂದು ಕೋಟೆ ಕಟ್ಟಿಕೊಂಡಿದ್ದಾರೆ. ಅವರ ಹಿಂಬಾಲಕರು ಅತ್ಯಂತ ದರ್ಪ ತೋರುತ್ತಾರೆ. ಅಹಂಕಾರದಿಂದ ಮೆರೆದಾಡುತ್ತಾರೆ. ಅವರಿಗೆ ಶಾಸಕರ ಬೆಂಗಾವಲಿದೆ ಎಂಬ ಆರೋಪವನ್ನು ಸಾಗರದ ಮೂಲ ಬಿಜೆಪಿಗರು ಆರೋಪ ಮಾಡುತ್ತಿದ್ದಾರೆ. ಹಿಂದೆಂದೂ ಮಾಡದಿದ್ದ ಆರೋಪವನ್ನು ಚುನಾವಣೆ ಹೊತ್ತಿನಲ್ಲಿಯೇ ಯಾಕೆ ಮಾಡುತ್ತಿದ್ದಾರೆ ಎಂಬುದೂ ಸಂಶಯಕ್ಕೆಡೆಮಾಡಿದೆ.
ಅಧಿಕಾರಕ್ಕಾಗಿ ಬಿಜೆಪಿಲಿದ್ದಾರೆ:
ಹಾಲಪ್ಪ ಮತ್ತು ಕುಮಾರ ಬಂಗಾರಪ್ಪ ಅವರ ಮೇಲೆ ಅಧಿಕಾರಕ್ಕಾಗಿಯೇ ಬಿಜೆಪಿಯಲ್ಲಿದ್ದಾರೆಯೇ ವಿನಾಃ ಸೈದ್ಧಾಂತಿಕವಾಗಿ ಅವರು ಇನ್ನೂ ಪಕ್ಷದೊಂದಿಗೆ ಬೆರೆತಿಲ್ಲ ಎಂಬ ಆರೋಪವಿದೆ. ಸಂಘಪರಿವಾರ ಮೂಲದ ಬಿಜೆಪಿ ಕಾರ್ಯಕರ್ತರು ಇದೇ ಆರೋಪವನ್ನು ಮುಂದಿಟ್ಟುಕೊಂಡು ಅವರ ವಿರುದ್ಧ ಸಮರ ಸಾರಿದ್ದಾರೆ. ಹಾಲಪ್ಪ ಅವರನ್ನು ನಮ್ಮವರು ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಅವರ ನಡವಳಿಕೆ ಆ ರೀತಿ ಇಲ್ಲ. ಅವರಿಗೆ ಅಧಿಕಾರ ಬೇಕು ಆ ಕಾರಣದಿಂದ ಬಿಜೆಪಿಯಲ್ಲಿದ್ದಾರೆ. ಇವರಿಂದ ಪಕ್ಷದ ಸೈದ್ಧಾಂತಿಕ ನೆಲೆಗಟ್ಟು ಭದ್ರವಾಗುವುದು ಸುಳ್ಳು. ಅವರೊಂದಿಗೆ ಪಕ್ಷಕ್ಕೆ ಬಂದವರು ಕೂಡಾ ಬಿಜೆಪಿ ಸಿದ್ಧಾಂತ ಒಪ್ಪಿಕೊಂಡವರಲ್ಲ ಎಂಬುದನ್ನೇ ಅವರ ವಿರೋಧಿಗಳು ಮುನ್ನೆಲೆಗೆ ತರುತ್ತಿದ್ದಾರೆ.  


ಮಗ್ಗುಲ ಮುಳ್ಳಾದ ಎಂಡಿಎಫ್ ಘಟನೆ:

ಸಾಗರದ ಪ್ರತಿಷ್ಠಿತ ಎಂಡಿಎಫ್ ಆಡಳಿತ ಮಂಡಳಿ ಚುನಾವಣೆ ವಿಚಾರದಲ್ಲಿ ಸದಸ್ಯರಲ್ಲದ ಹಾಲಪ್ಪ ಅವರು ಮೂಗು ತೂರಿಸಿದ್ದು, ಮತ್ತು ತಮ್ಮ ಹಿಂಬಾಲಕರಿಂದ ಶ್ರೀಪಾದ ಹೆಗಡೆ ಮತ್ತು ಕಾರ್ಯದರ್ಶಿ ಜಗದೀಶ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಹಾಲಪ್ಪರನ್ನು ಇಂದಿಗೂ ಕಾಡುತ್ತಿದೆ. ಹಿಂದುಳಿದ ವರ್ಗದ ಒಬ್ಬಮುಖಂಡನ ರಾಜಕೀಯ ಏಳಿಗೆ ಸಹಿಸದ ಒಂದು ವರ್ಗ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಹಾಲಪ್ಪರ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎನ್ನಲಾಗಿದೆ. ಈ ಘಟನೆಯ ದೃಶ್ಯಾವಳಿಗಳನ್ನು ಪಕ್ಷದ ನಾಯಕರುಗಳಿಗೆ ತೋರಿಸಿ ಶಾಸಕರ ದಬ್ಬಾಳಿಕೆಗೆ ಸಾಕ್ಷಿ ನೀಡುತ್ತಿದ್ದಾರಂತೆ.
ಸಾಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಪ್ರಸನ್ನ ಕೆರೆಕೈ, ಚೇತನ್ ರಾಜ್ ಕಣ್ಣೂರು, ಕೆ.ಎಸ್.ಗುರುಮೂರ್ತಿ ಮೊದಲಾದವರು ಆರ್‌ಎಸ್‌ಎಸ್ ಮುಖಂಡ ಶ್ರೀಧರ್ ಅವರ ಮೂಲಕ ಯಡಿಯೂರಪ್ಪ, ಸಿ.ಟಿ.ರವಿ ಹಾಗೂ ರಾಜ್ಯಾಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆನ್ನಲಾಗಿದೆ.


ಯಡಿಯೂರಪ್ಪ ಬೆಂಬಲ:

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಲಪ್ಪರ ಬೆಂಬಲಕ್ಕಿದ್ದು, ಅಸಮಾಧಾನ ಇದ್ದರೆ ಸರಿಮಾಡೋಣ ಆದರೆ ಹಾಲಪ್ಪರಿಗೆ ಪರ್ಯಾಯ ಅಭ್ಯರ್ಥಿ ಇಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಸಾಗರ ಹಾಗೂ ಸೊರಬದಲ್ಲಿ ಈಡಿಗರಿಗೆ ಆದ್ಯತೆ ಕೊಟ್ಟರೆ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ರಾಘವೇಂದ್ರ ಅವರಿಗೆ ಅನುಕೂಲವಾಗುತ್ತದೆ ಎಂಬ ದೂರದೃಷ್ಟಿಯೂ ಯಡಿಯೂರಪ್ಪರಿಗಿದೆ. ಈ ಕಾರಣದಿಂದ ಅವರು ಸಾಗರ ಸೊರಬ ಶಾಸಕರ ವಿರುದ್ಧದ ಬಂಡಾಯಕ್ಕೆ ಸೊಪ್ಪು ಹಾಕುತಿಲ್ಲ  ಎನ್ನಲಾಗಿದೆ.

ಹೀಗೊಂದು ವದಂತಿ:


ಸೊರಬದಲ್ಲಿ ಕುಮಾರ್ ಬಂಗಾರಪ್ಪರಿಗೆ ಬಿಜೆಪಿ ಟಿಕೆಟ್ ಕೊಡುವುದಕ್ಕೆ ವ್ಯಾಪಕ ವಿರೋಧವಿದೆ. ಸಾಗರದಲ್ಲಿ ಪರಿವಾರದ ಪ್ರಮುಖರಿಂದ ಹಾಲಪ್ಪ ವಿರುದ್ಧ ಹೇಳಿಕೆ ಕೊಡಿಸಿ ಹಾಲಪ್ಪ ಅವರಿಗೇ ಸೊರಬದಲ್ಲಿ ಟಿಕೆಟ್ ಕೊಡುವುದು. ಆ ಮೂಲಕ ಬಂಗಾರಪ್ಪರ ಇಬ್ಬರೂ ಪುತ್ರರನ್ನೂ ಅಪ್ರಸ್ತುತ ಮಾಡುವ ಚಿಂತನೆಯೂ ಬಿಜೆಪಿಯ ಪ್ರಭಾವಿ ಕುಟುಂಬಕ್ಕಿದೆ ಎಂಬ ವದಂತಿಯೂ ಸಾಗರದಲ್ಲಿ ಹರಿದಾಡುತ್ತಿದೆ.

Ad Widget

Related posts

ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣನೆ : ಕೆ.ಬಿ.ಶಿವಕುಮಾರ್

Malenadu Mirror Desk

ನೂತನ ಸಚಿವರಿಗೆ ರೇಣುಕಾನಂದ ಶ್ರೀ ಅಭಿನಂದನೆ

Malenadu Mirror Desk

ಮದುವೆಯಾಗಿ ನಾಲ್ಕು ದಿನಕ್ಕೇ ಯುವತಿ ಕೊರೊನಕ್ಕೆ ಬಲಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.