Malenadu Mitra
ರಾಜ್ಯ ಶಿವಮೊಗ್ಗ

ಎಂಎಲ್‌ಸಿ ಸ್ಥಾನಕ್ಕೆ ಶೀಘ್ರ ರಾಜೀನಾಮೆ ನೀಡುವೆ
ಈಶ್ವರಪ್ಪ ಮತ್ತವರ ಮಗನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವೆ ಎಂದ ಆಯನೂರು ಮಂಜುನಾಥ್

ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗುವ ಅಪೇಕ್ಷೆಯಿಂದ ಅರ್ಜಿ ಸಲ್ಲಿಸಿದ್ದೆ, ಪಕ್ಷದ ವೇದಿಕೆಯಲ್ಲಿ ಮನವಿ ಕೂಡಾ ಮಾಡಿದ್ದೆ. ಆದರೆ ಟಿಕೆಟ್ ಸಿಗುವ ಬಗ್ಗೆ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಏನೇ ಆದರೂ ನನ್ನ ಸ್ಪರ್ಧೆ ಖಚಿತ. ಆದ್ದರಿಂದ ಮೂರ್ನಾಲ್ಕು ದಿನದಲ್ಲಿ  ವಿಧಾನಪರಿಷತ್ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೋಮವಾರ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,  ಕೆ ಎಸ್ ಈಶ್ವರಪ್ಪ ಅವರು ನನ್ನ ಬಗ್ಗೆ “ಅವನೇನು ಯಾವ ಲೆಕ್ಕ” ಎಂದು ಅವಹೇಳನಕಾರಿಯಾಗಿ, ದುರಹಂಕಾರದ ಮತ್ತು  ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಗೆ ತಕ್ಕ ಉತ್ತರವನ್ನು ಕೊಡುತ್ತೇನೆ.  ನಾಲಿಗೆಯ ಹಿಡಿತವಿಲ್ಲದ,  ತನ್ನ ಶಿಕ್ಷಣ ಕಲಿಕೆಯ ಮಟ್ಟವನ್ನು ಅವರು ಪ್ರಕಟಿಸಿದ್ದಾರೆ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ತೊಡೆತಟ್ಟಿ ಕಣಕ್ಕಿಳಿಯುತ್ತೇನೆ. ರಣರಂಗದಲ್ಲೇ ಉತ್ತರ ಕೊಡುತ್ತೇನೆ ಎಂದು ಮರುಸವಾಲು ಹಾಕಿದರು.
ಶಕ್ತಿಶಾಲಿ ಈಶ್ವರಪ್ಪನವರು ಹಿರಿಯರು.  ಆದರೆ ಶಿವಮೊಗ್ಗ ಬಿಟ್ಟರೆ ಉಳಿದೆಡೆ ಹೆಸರಿಲ್ಲದವರು. ತನ್ನೆಲ್ಲ ಪ್ರಭಾವವನ್ನು ಬಳಸಿ ಮತ್ತೆ ಅಖಾಡಕ್ಕಿಳಿಯಲಿದ್ದಾರೆ. ಬಿಜೆಪಿಯವರೂ ಈಗ ಅವರಿಗಾಗಲಿ, ಅವರ ಪುತ್ರನಾನಿಗಾಲಿ ಟಿಕೆಟ್ ಕೊಡಬೇಕೆಂದು ನಾನೂ ಒತ್ತಾಯಿಸುತ್ತೇನೆ. ಅಪ್ಪ- ಮಗ ಯಾರೇ ಎದುರಾದರೂ ರಾಜಕೀಯವಾಗಿಯೇ ಅವರಿಗೆ ಉತ್ತರ ಕೊಡುತ್ತೇನೆ. ಮತಯಂತ್ರದ ಮೂಲಕ ಉತ್ತರ ಬರಲಿದೆ ಎಂದರು.
ಈಶ್ವರಪ್ಪ ಅವರು ಕೆಲವೇ ಕೆಲವರನ್ನು ಮಾತ್ರ ಹೊತ್ತು ಮೆರೆಸುತ್ತಿದ್ದಾರೆ. ನಗರದ ಬೂತ್‌ನಿಂದ ಹಿಡಿದು ಪಾಲಿಕೆಯವರೆಗೆ ಅವರ ಜನರೇ  ತುಂಬಿಕೊಂಡಿದ್ದಾರೆ. ಅವರೆಲ್ಲರೂ ಸೇರಿ ಅಪ್ಪ ಅಥವಾ ಮಗನನ್ನು ಗೆಲ್ಲಿಸಲಿ. ನಾನೂ ಕೂಡ ನನ್ನ ತಾಕತ್ತು ತೋರಿಸುತ್ತೇನೆ  ಎಂದ ಆಯನೂರು ಮಂಜುನಾಥ್ ಅವರು, ಗೌರವಯುತ ನಡವಳಿಕೆ ಮಾತ್ರ ಮನುಷ್ಯನಿಗೆ ಶೋಭಿಸುತ್ತದೆಯೇ ವಿನಾ ಅಹಂಕಾರವಲ್ಲ  ಎಂದು ತಿರುಗೇಟು ಕೊಟ್ಟರು.


 ಶಿವಮೊಗ್ಗಕ್ಕೆ ಕೊಡುಗೆ ಏನು ?:


ಮಂತ್ರಿ ಅಥವಾ ಅಧಿಕಾರ ಮಾತ್ರ  ಮುಖ್ಯ ಎನ್ನುವುದು ಈಶ್ವರಪ್ಪ ಅವರ ಸಿದ್ಧಾಂತ. ಪ್ರತಿಬಾರಿ ಮಂತ್ರಿಯಾದರೂ ನಗರಕ್ಕೇನು ಮಾಡಿದ್ದೀರಿ, ಚರ್ಚೆಗೆ ಬನ್ನಿ. ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರು ಮಾಡಿದ ಅಭಿವೃದ್ಧಿ ನಗರದಲ್ಲಿದೆ. ನಿಮ್ಮ ಹೆಸರಲ್ಲೇನಿದೆ. ಮಂತ್ರಿ ಸ್ಥಾನ ಕೊಡದಿದ್ದರೆ ಅಧಿವೇಶನಕ್ಕೆ ಬರುವುದಿಲ್ಲ ಎಂದು ಬೆದರಿಕೆಯ ಹೇಳಿಕೆ ಕೊಡುವಷ್ಟು  ಧೈರ್ಯವಂತ ಇವರು. ಅದಕ್ಕಾಗಿ ಹಠ ಬೇರೆ. ಅಧಿಕಾರದ ಹಪಾಹಪಿತನವೇ ನಿಮ್ಮನ್ನು ಮೂಲೆಗುಂಪು ಮಾಡಲಿದೆ. ಸಂವಿಧಾನದ ಚೌಕಟ್ಟನ್ನೇ ಅರ್ಥಮಾಡಿಕೊಳ್ಳದ ಮನುಷ್ಯ ಈಶ್ವರಪ್ಪ ಎಂದು ಟೀಕಿಸಿದರು.


ಯಡಿಯೂರಪ್ಪರಿಗೆ ಅವಮಾನ:

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಶಿವಮೊಗ್ಗಕ್ಕೆ ಬಂದರೂ ಅಂದು ಉಸ್ತುವಾರಿ ಸ್ಥಾನ ಕೊಡಲಿಲ್ಲ್ಲ ಎಂದು ಯಡಿಯೂರಪ್ಪನವರ ಕಾರ್ಯಕ್ರಮಕ್ಕೆ  ಹಾಜರಾಗುತ್ತಿರಲಿಲ್ಲ. ಸ್ವಾಗತ ಅಥವಾ ಗೌರವಯುತ ಬೀಳ್ಕೊಡುಗೆಗೂ ಬರಲಿಲ್ಲ. ಇದು ಯಡಿಯೂರಪ್ಪ ಅಥವಾ ಮುಖ್ಯಮಂತ್ರಿಗೆ ಮಾಡಿದ ಅಪಮಾನ.  ಯಡಿಯೂರಪ್ಪ ಜೈಲಿಗೆ ಹೋದಾಗ ನಾನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳುವ ಮೂಲಕ ಎಲ್ಲರ ಕಣ್ಣು ಕೆಂಪಗಾಗುವಂತೆ ಮಾಡಿಕೊಂಡರು. ಉಡುಪಿಯಲ್ಲಿ ಗುತ್ತಿಗೆದಾರನೊಬ್ಬ ಈಶ್ವರಪ್ಪ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಹಿಂದಿನ ಮಾತು ಈಶ್ವರಪ್ಪ್ಪ ಅವರಿಗೆ ನೆನೆಪಾಗಲಿಲ್ಲವೇ ಎಂದು ಆಯನೂರು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಮತ್ತೆ ಅವರು ಆಯ್ಕೆಯಾದರೆ ಶಿವಮೊಗ್ಗಕ್ಕೆ ಅದು ಅಪಮಾನ. ತಮ್ಮ ಆಯ್ಕೆಗಾಗಿ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಲೂಬಹುದು. ಇದರ ಬಗ್ಗೆ  ಜನರೂ ಎಚ್ಚರವಾಗಿರವೇಕು.  ಜನರಿಗೆ ಆಮಿಷವೊಡ್ಡುವ ಬದಲು ಉತ್ತಮ ಕೆಲಸ ಮಾಡಿದ್ದರೆ ಚೆನ್ನಾಗಿತ್ತು. ಹಾಗೆ ಮಾಡಲಿಲ್ಲ. ಇಲ್ಲಿಂದ ಅಪ್ಪ-ಮಕ್ಕಳ ರಾಜಕೀಯದ ಕೊಂಡಿ ತಪ್ಪಬೇಕು ಎಂದರು.

ರಾಜಕೀಯದ ಸೊಳ್ಳೆ ನಿಮಗೆ ಕಚ್ಚಲಿದೆ

ನನ್ನನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ. ನಿಮ್ಮ ಕೋಟೆಯೊಳಗೆಯೇ ನನ್ನ ಸೈನ್ಯವನ್ನು, ಕುದುರೆಯನ್ನು ಬಿಡುತ್ತೇನೆ. ಯಾವ ರೀತಿ ಬೇಕಾದರೂ ಹೋರಾಡಿ ಎಂದು ಆಯನೂರು ಮಂಜುನಾಥ ಶಾಸಕ ಕೆ ಎಸ್ ಈಶ್ವರಪ್ಪ್ಪ ಅವರಿಗೆ ಸವಾಲು ಹಾಕಿದ್ದಾರೆ.
 ಊರಿನ ಸೊಳ್ಳೆ ಓಡಿಸಲಾಗದ ಶಾಸಕ ನೀವು. ಅದಕ್ಕಾಗಿ ಬೇಕಾದವರಿಗೆ ಮಾತ್ರ  ಮಗನ ಹುಟ್ಟುಹಬ್ಬದ ನೆಪದಲ್ಲಿ  ಸೊಳ್ಳೆ ಪರದೆ ಕೊಡುತ್ತಿದ್ದೀರಿ. ಎಲ್ಲರಿಗೂ ಕೊಟ್ಟಿದ್ದರೆ ಚೆನ್ನಾಗಿತ್ತು. ೨೦೦ ರೂಪಾಯಿಯ ಸೀರೆ ಕೊಡುವ ಬದಲು ಒಳ್ಳೆಯ ಗುಣಮಟ್ಟದ ಸೀರೆ ಕೊಟ್ಟಿದ್ದರೂ ಹೆಚ್ಚು ಕಾಲ ಬಾಳಿಕೆ ಬರುತ್ತಿತ್ತು ಎಂದು ವ್ಯಂಗ್ಯವಾಡಿದ ಆಯನೂರು,  ಸೀರೆ, ಪಂಚೆಯ ರಾಶಿಯ ವ್ಯವಹಾರಕ್ಕೆ ಫುಲ್ ಸ್ಟಾಪ್ ಬೀಳಲಿದೆ.  ಎಷ್ಟು ಗೋದಾಮಿನಲ್ಲಿದ್ದರೂ ಅದರ ಆಟ ನಡೆಯೊಲ್ಲ. ಇನ್ನು ನಿಮಗೆ ರಾಜಕೀಯದ ಸೊಳ್ಳೆ ಕಚ್ಚಲಿದೆ. ಹೇಗೆ ತಪ್ಪಿಸಿಕೊಳ್ಳುತ್ತೀರಿ ಎನ್ನುವುದು ನಿಮಗೆ ಬಿಟ್ಟಿದ್ದು ಎಂದರು.
 ರಾಜಕೀಯದಲ್ಲಿ ಯಾವತ್ತೂ ಸಂಯಮ ಕಳೆದುಕೊಂಡು ಮಾತನಾಡಬಾರದು. ಆದರೆ ಸಂಯಮವಿಲ್ಲದ ವ್ಯಕ್ತಿ ಈಶ್ವರಪ್ಪ.   ಅವರ ನಡವಳಿಕೆ ಕೇವಲ ಶಿವಮೊಗ್ಗಕ್ಕೆ ಮಾತ್ರವಲ್ಲ , ಪಕ್ಷಕ್ಕೂ ಕೆಟ್ಟ ಹೆಸರು ಸಾಕಷ್ಟು ಸಲ ತಂದಿದೆ.  ಕನಿಷ್ಠ ಪ್ರಜ್ಞೆಯೂ ಇಲ್ಲದೆ ಮಾತನಾಡುತ್ತಾರೆ.  ನಿಮ್ಮ ಮಾತೇ ನಿಮಗೆ ಮುಳುವಾಗಲಿದೆ  ಎಂದರು.
ಪಕ್ಷದಿಂದ ಹೊರಗೆ ಕಾಲಿಟ್ಟಿದ್ದೇನೆ. ಯಾವ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಅಥವಾ ಸ್ವತಂತ್ರವಾಗಿಯೋ ಎನ್ನುವುದು ಸದ್ಯವೇ ತಿಳಿಯಲಿದೆ ಎಂದರು.

ತಲೆಮೇಲೆ ಹೊತ್ತು ಮೆರೆದವರನ್ನು ಮರೆತಿರೆ?


ಈಶ್ವರಪ್ಪ ಅವರು ತಮ್ಮ ನಂತರ ಪಕ್ಷಕ್ಕೆ ದುಡಿದ ಮತ್ತು ತಮ್ಮನ್ನು ತಲೆ ಮೇಲೆ ಹೊತ್ತು ಮೆರೆದ ಚೆನ್ನಿ, ಪ್ರಮುಖರಾದ ಭಾನುಪ್ರಕಾಶ್, ಸಿದ್ದರಾಮಣ್ಣ, ದತ್ತಾತ್ರಿ , ಗಿರೀಶ್ ಪಟೇಲ್ ಹೀಗೆ ಹಲವು ಮಂದಿ ಇದ್ದರು. ಅವರ ಹೆಸರು ಹೇಳದೆ ಮಗನಿಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಪಕ್ಷಕ್ಕಾಗಿ ಜೀವ ಸವೆಸಿದ ನಾಯಕರು ಇವರ ಮಗನ ಅಡಿಯಾಳುಗಳಾಗಬೇಕೆ ಎಂದು ಆಯನೂರು ಮಂಜುನಾಥ್,ಅವರು ರಾಜಕೀಯಕ್ಕೆ ಬರುವ ಮುನ್ನ ಹೇಗಿದ್ದರು, ಈಗ ಎಲ್ಲೆಲ್ಲಿ,ಏನೆಲ್ಲಾ ಆಸ್ತಿ ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಹೇಳಿದರಲ್ಲದೆ, ಇನ್ನೂ ನನ್ನ ಬಳಿ ಅಸ್ತ್ರಗಳಿವೆ ಎಲ್ಲವನ್ನೂ ಒಂದೊಂದಾಗಿ ಬಿಡುವೆ ಇವರ ನಿಜ ಬಣ್ಣ ಜನರಿಗೂ ತಿಳಿಯಲಿ ಎಂದು ಹೇಳಿದರು.

Ad Widget

Related posts

ಬಿಎಸ್‌ವೈಗೆ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಶ್ರೀರಕ್ಷೆ

Malenadu Mirror Desk

ನೈತಿಕ ಶಿಕ್ಷಣ ಇಂದಿನ ಅಗತ್ಯ: ಕೆಳದಿ ಗುಂಡಾಜೋಯ್ಸ್ ಅಭಿಮತ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Malenadu Mirror Desk

ಶರಾವತಿ ಸಂತ್ರಸ್ತರ ಪುನರ್‌ವಸತಿಗೆ ಮದನ್‌ಗೋಪಾಲ್ ವರದಿ ಜಾರಿಯಾಗಲಿ : ಮಲೆನಾಡು ರೈತ ಹೋರಾಟ ಸಮಿತಿ ಆಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.