ಖ್ಯಾತ ನಟ ಕಿಚ್ಚ ಸುದೀಪ್ ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ಹಾಗೂ ಅವರು ಹೇಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಬುಧವಾರ ಬೆಂಗಳೂರಿನ ಹೋಟೆಲ್ ಅಶೋಕದಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಅವರು. ಬಸವರಾಜಬೊಮ್ಮಾಯಿ ಅವರೊಂದಿಗೆ ನಮ್ಮ ಕುಟುಂಬಕ್ಕೆ ಬಾಲ್ಯದಿಂದಲೂ ಉತ್ತಮ ಸಂಬಂಧ ಇದೆ. ಚಿತ್ರರಂಗದಲ್ಲಿ ನಾನು ಕಷ್ಟದಲ್ಲಿದ್ದಾಗ ಅವರು ನನಗೆ ಸಹಕಾರ ನೀಡಿದ್ದಾರೆ. ನನ್ನ ಹಿತೈಷಿಗಳಿಗೆ ನಾನು ಸಹಕರಿಸುವುದು ಧರ್ಮ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಅವರಿಗೆ ಸಹಕರಿಸುವೆ. ನನ್ನ ಸಮಯದ ಇತಿಮಿತಿಯಲ್ಲಿ ಅವರು ಹೇಳಿದ ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡುವೆ. ನಾನು ಸಕ್ರಿಯ ರಾಜಕಾರಣ ಅಥವಾ ಬಿಜೆಪಿ ಪಕ್ಷ ಸೇರುವುದಿಲ್ಲ ಎಂದು ಹೇಳಿದರು.
ಬಿಜೆಪಿಯೇತರ ಪಕ್ಷದ ನಾಯಕರು ಪ್ರಚಾರಕ್ಕೆ ಕರೆದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ನನ್ನ ಹಿತೈಷಿಗಳು ಮತ್ತು ನನಗೆ ನೆರವಾದವರು ಯಾರೆಂದು ಗೊತ್ತಿದೆ. ಯಾವುದೇ ಪಕ್ಷ ಮತ್ತು ರಾಜಕಾರಣಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲರ ಬಗ್ಗೆ ಗೌರವ ಇದೆ. ಆದರೆ ಬಸವರಾಜ ಬೊಮ್ಮಾಯಿಯವರ ಮೇಲಿರುವ ಗೌರವ ಮತ್ತು ವಿಶ್ವಾಸಕ್ಕೆ ಮಣಿದು ಪ್ರಚಾರ ಮಾಡುವೆ. ಇದಕ್ಕೆ ಯಾವುದೇ ಸಂಭಾವನೆ ಪಡೆದುಕೊಳ್ಳುವುದಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮಾತನಾಡಿ, ಇದು ನನ್ನ ವೈಯಕ್ತಿಕ ಪತ್ರಿಕಾಗೋಷ್ಠಿ ಪಾರ್ಟಿಯ ಬೈಂಡಿಂಗ್ಸ್ ಇದಕ್ಕೆ ಇಲ್ಲ. ಸುದೀಪ್ ಅವರು ನನ್ನ ಪರವಾಗಿ ಮತ್ತು ನಾವು ಹೇಳಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಾರೆ ಎಂದರೆ ಅದು ಬಿಜೆಪಿ ಪರ ಇದ್ದಾರೆ ಎಂದೇ ಅರ್ಥ. ನಮ್ಮ ಸರಕಾರಗಳು ಮಾಡಿದ ಅಭಿವೃದ್ಧಿ ಬಗ್ಗೆ ಅವರ ಮೆಚ್ಚುಗೆ ವ್ಯಕ್ತಿಪಡಿಸಿ ನಮಗೆ ಬೆಂಬಲಿಸುತ್ತಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.