ಶಿವಮೊಗ್ಗ,ಏ.೬: ಕಾಂಗ್ರೆಸ್ ಎರಡನೇ ಪಟ್ಟಿಯಲ್ಲೂ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದಿರುವುದು ಆಕಾಂಕ್ಷಿಗಳ ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷ ಯಾರಿಗೋ ಕಾಯುತ್ತಿರುವಂತೆ ಭಾಸವಾಗುತ್ತಿದೆ. ಟಿಕೆಟ್ ಘೋಷಣೆ ಮಾಡದ ಶಿವಮೊಗ್ಗ ಗ್ರಾಮಾಂತರ ಮತ್ತು ಶಿಕಾರಿಪುರದಲ್ಲಿ ಅಂತಹ ಹೇಳಿಕೊಳ್ಳುವ ವಲಸೆ ಹಕ್ಕಿಗಳಿಲ್ಲ. ಆದರೆ ಪ್ರತಿಷ್ಠಿತ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಾತ್ರ ಮತ್ತಷ್ಟು ಕೌತಕ ಮನೆಮಾಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಉಳಿಸಿಕೊಂಡಿರುವ ಮೂರೂ ಕ್ಷೇತ್ರಗಳಲ್ಲಿ ಅಂತಹ ಬಣರಾಜಕಾರಣ ಕಾಣುತ್ತಿಲ್ಲವಾದರೂ, ಈಗಿರುವ ಆಕಾಂಕ್ಷಿಗಳಲ್ಲಿಯೇ ಪೈಪೋಟಿ ಹೆಚ್ಚಾಗಿದೆ. ಶಿಕಾರಿಪುರ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ಒಳ ಒಪ್ಪಂದ ಏನಾದರೂ ಪ್ರಭಾವ ಬೀರಲಿದೆಯಾ ಎಂಬ ಅನುಮಾನವೂ ಹುಟ್ಟಿಕೊಂಡಿದೆ.
ಆಯನೂರು ಅವರಿಗೇ ಮನ್ನಣೆ ?
ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಅಭ್ಯರ್ಥಿ ಯಾರೆಂಬುದು ಇನ್ನೂ ನಿಕ್ಕಿಯಾಗಿಲ್ಲ. ಈಶ್ವರಪ್ಪ ಅವರ ಹೆಸರೇ ಅಂತಿಮವಾಗುವ ಸಾಧ್ಯತೆಯಿದ್ದು, ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಆಯನೂರು ಮಂಜುನಾಥ್ ಅವರು , ಬಿಜೆಪಿ ಪಟ್ಟಿ ಪ್ರಕಟವಾದ ಮೇಲೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಅವರು ಕಾಂಗ್ರೆಸ್‌ನಿಂದಲೇ ಕಣಕ್ಕಿಳಿಯಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ ಎರಡೂ ಕಡೆಯಿಂದ ಯಾವುದೇ ನಿಖರ ಮಾಹಿತಿ ಹೊರಬೀಳುತ್ತಿಲ್ಲವಾದರೂ, ಅದಕ್ಕೆ ಪೂರಕವಾದ ಬೆಳವಣಿಗೆಗಳಂತೂ ನಡೆಯುತ್ತಿವೆ.
ಹನ್ನೊಂದು ಆಕಾಂಕ್ಷಿಗಳಿಗೆ ನಿರಾಸೆ:
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿ ಹನ್ನೊಂದು ಅಭ್ಯರ್ಥಿಗಳು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇವರಲ್ಲಿ ಯಾರಿಗೂ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಆಯನೂರು ಮಂಜುನಾಥ್ ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಬೆಂಗಳೂರಿಗೆ ಹೋಗಿದ್ದ ಕಾಂಗ್ರೆಸ್ ಆಕಾಂಕ್ಷಿಗಳು ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಡಿ ಎಂಬ ಮನವಿ ಮಾಡಿದ್ದಾರೆ. ಆದರೆ ಆಯನೂರು ಮಂಜುನಾಥ್ ಅವರಿಗೆ ಪಕ್ಷ ಅವಕಾಶ ಕೊಡುವುದಿಲ್ಲ ಎಂದಾದರೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಯಾವುದೇ ಅಡ್ಡಿ ಇರಲಿಲ್ಲ. ಹೀಗಿದ್ದೂ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟವಾಗದಿರುವುದರ ಹಿಂದಿನ ಉದ್ದೇಶ ನಿಗೂಢವಾಗಿದೆ.
ಪ್ರಸನ್ನಕುಮಾರ್ ಮಾತಿನ ಮರ್ಮವೇನು?:
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಈಗಿರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯಾಗುತ್ತಾರೆ. ಬ್ರಾಹ್ಮಣ ಮತದಾರರು ಗಣನೀಯ ಪ್ರಮಾಣದಲ್ಲಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಸನ್ನಕುಮಾರ್ ಒಂದು ಬಾರಿ ಶಾಸಕರಾಗಿದ್ದಾರೆ. ಮುಸ್ಲಿಂ ಸಮುದಾಯದ ಜತೆಯೂ ಉತ್ತಮ ಒಡನಾಟ ಹೊಂದಿದ್ದಾರೆ. ಶಾಸಕರಾಗಿದ್ದಾಗ ಮತ್ತು ಸೋತಾಗಲೂ ಶಿವಮೊಗ್ಗದಲ್ಲಿ ಮುಸ್ಲಿಂ ಸಮುದಾಯದ ಬೇಕು ಬೇಡಗಳಿಗೆ ಸ್ಪಂದಿಸಿದವರು ಪ್ರಸನ್ನಕುಮಾರ್ ಅವರೇ ಆಗಿದ್ದಾರೆ.
ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ನಾಯಕರು ಶಿವಮೊಗ್ಗ ಕ್ಷೇತ್ರದಲ್ಲಿಯೂ ತಮ್ಮ ಸಮುದಾಯದವರಿಗೇ ಟಿಕೆಟ್ ನೀಡಬೇಕೆಂಬ ಒತ್ತಡ ಹಾಕಿದ್ದು, ಹೀಗಾದಲ್ಲಿ ಆಯನೂರು ಮಂಜುನಾಥ್ ಅಥವಾ ಹೆಚ್.ಸಿ.ಯೋಗಿಶ್ ಅವರಲ್ಲಿ ಯಾರಿಗಾದರೂ ಟಿಕೆಟ್ ನೀಡಬಹುದು ಎನ್ನಲಾಗುತ್ತದೆ. ಬ್ರಾಹ್ಮಣರಿಗೆ ಕೊಡುವುದಾದರೆ ಇರುವ ಏಕೈಕ ಅಭ್ಯರ್ಥಿ ಪ್ರಸನ್ನಕುಮಾರ್ ಆಗುತ್ತಾರೆ. ಈ ನಡುವೆ ಮೊನ್ನೆ ಪತ್ರಿಕಾ ಗೋಷ್ಠಿ ನಡೆಸಿದ ಪ್ರಸನ್ನಕುಮಾರ್ ಅವರು ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ. ಆಯನೂರು ಅವರಿಗೆ ಅವಕಾಶ ನೀಡಿದರೂ ಪಕ್ಷದ ಆದೇಶ ಪಾಲಿಸುವುದು ನಿಷ್ಟಾವಂತ ಕಾರ್ಯಕರ್ತನಾದ ನನ್ನ ಜಬಾಬ್ದಾರಿ ಎಂದಿದ್ದಾರೆ. ಪ್ರಸನ್ನ ಅವರ ಈ ಮಾತು ಆಯನೂರು ಮಂಜುನಾಥ್ ಅವರಿಗೂ ಪಕ್ಷ ಅವಕಾಶ ತೆರೆದಿಟ್ಟಿರುವುದರ ಸೂಚಕವಾಗಿದೆ.
ಕುತೂಹಲ ಘಟ್ಟದಲ್ಲಿ ಶಿಕಾರಿಪುರ:
ಮಾಜಿ ಸಿಎಂ ಯಡಿಯೂರಪ್ಪ ಅವರ ಶಿಕಾರಿಪುರ ಕ್ಷೇತ್ರದಲ್ಲಿ ಅವರ ಪುತ್ರ ಬಿಜೆಪಿಯಿಂದ ಅಭ್ಯರ್ಥಿಯಾಗಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ನಾಗರಾಜ್ ಗೌಡ, ಗೋಣಿ ಮಾಲತೇಶ್ ಹಾಗೂ ಪುಷ್ಪಾ ಶಿವಕುಮಾರ್ ಹೆಸರುಗಳು ಮನ್ನೆಲೆಯಲ್ಲಿವೆ. ಶಿವಮೊಗ್ಗದಲ್ಲಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಶಿಕಾರಿಪುರದಲ್ಲಿ ಅನ್ಯ ಜಾತಿಗೆ ಕೊಡಬಹುದು ಎನ್ನಲಾಗುತ್ತಿದೆ. ಮಾಜಿ ಪೊಲೀಸ್ ಅಧಿಕಾರಿ ಪಿ.ಒ.ಶಿವಕುಮಾರ್ ಅವರು ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಬೀಗರಾಗಿದ್ದು, ಅವರ ಪತ್ನಿ ಶಿರಾಳಕೊಪ್ಪ ಮೂಲದ ಪುಷ್ಪಾಶಿವಕುಮಾರ್‌ಗೆ ಟಿಕೆಟ್ ನೀಡುವಂತೆ ಲಾಬಿ ಆರಂಭಿಸಿದ್ದಾರೆ. ಆದರೆ ಶಿಕಾರಿಪುರದಲ್ಲಿ ಸಾದರ ಲಿಂಗಾಯತ ಸಮುದಾಯದ ನಾಗರಾಜ್ ಗೌಡ ಅವರು ಪ್ರಬಲ ಅಭ್ಯರ್ಥಿಯಾಗಿದ್ದು, ಸ್ಥಳೀಯವಾಗಿ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಕೈ ನಾಯಕರ ಮೇಲೆ ಯಡಿಯೂರಪ್ಪ ಅವರ ಪ್ರಭಾವಳಿ ಏನಾದರೂ ನಡೆದರೆ ಸಾದರ ಲಿಂಗಾಯತರಿಗೆ ಟಿಕೆಟ್ ಕೈ ತಪ್ಪುವ ಸಾದ್ಯತೆಯನ್ನೂ ಅಲ್ಲಗಳೆಯಲಾಗದು.
ಶಿವಮೊಗ್ಗ ಗ್ರಾಮಾಂತರದಲ್ಲಿ ಅಚ್ಚರಿ ?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಕಗ್ಗಂಟಾಗಿದೆ. ಟಿಕೆಟ್ ನೀಡುತ್ತಾರೆ ಎಂದು ನಾರಾಯಣ ಸ್ವಾಮಿ ಅವರು, ಈಗಾಗಲೇ ಮೂರು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಟೂರ್ನಮೆಂಟ್, ಜಾತ್ರೆ, ಹಬ್ಬಗಳಿಗೆ ಕಳೆದ ಒಂದು ವರ್ಷದಿಂದಲೇ ಬಂಡವಾಳ ಹಾಕುತ್ತಿದ್ದಾರೆ. ಮದುವೆ ಮುಂಜಿಗಳಿಗೆ ಬಿಡದೆ ಹಾಜರಾಗಿ ಪ್ರೀತಿ ತೋರುತ್ತಿದ್ದಾರೆ.ಇವರೊಂದಿಗೆ ಕೆಪಿಸಿಸಿಯಲ್ಲಿ ಪ್ರಭಾವ ಹೊಂದಿರುವ ಪಲ್ಲವಿ, ಕಾಂಗ್ರೆಸ್‌ನ ಕಟ್ಟಾಳು ರವಿಕುಮಾರ್ , ಡಾ.ಶ್ರೀನಿವಾಸ್ ಕರಿಯಣ್ಣ ಹಾಗೂ ಬಲದೇವಕೃಷ್ಣ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ನಾರಾಯಣ ಸ್ವಾಮಿ ಹಾಗೂ ಪಲ್ಲವಿ ಅವರ ಸಮುದಾಯದ ಮತಗಳು ಕಡಿಮೆ ಇದ್ದು, ಶ್ರೀನಿವಾಸ್ ಕರಿಯಣ್ಣ ಮತ್ತು ರವಿಕುಮಾರ್ ಅವರ ಸಮುದಾಯದ ಮತಗಳು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿವೆ. ಒಳಮೀಸಲಾತಿ ಗೊಂದಲದ ಈ ಹೊತ್ತಿನಲ್ಲಿ ಪಕ್ಷ ಅಳೆದು ತೂಗಿ ಅಭ್ಯರ್ಥಿ ಘೋಷಣೆ ಮಾಡಬೇಕಿದೆ. ಅಚ್ಚರಿಯೆಂದರೆ ನಾರಾಯಣ ಸ್ವಾಮಿ ಕ್ಷೇತ್ರದಲ್ಲಿ ಜನರ ನಡುವೆ ಇದ್ದರೆ, ಉಳಿದ ಅಭ್ಯರ್ಥಿಗಳು ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದಾರೆ. ಪಲ್ಲವಿ ಅವರಿಗೆ ಕೆಪಿಸಿಸಿ ಪ್ರಭಾವಿ ನಾಯಕರ ಆಶೀರ್ವಾದ ಇದೆ. ಡಾ. ಶ್ರೀನಿವಾಸ್ ಮತ್ತು ನಾರಾಯಣಸ್ವಾಮಿ ಅವರಿಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಒಲವಿದ್ದು, ಈ ಕ್ಷೇತ್ರದಲ್ಲಿ ಯಾರೇ ಟಿಕೆಟ್ ತಂದರೂ ಅಚ್ಚರಿಯಿಲ್ಲ.ಹಲವು ಮಂದಿಯ ಪೈಪೋಟಿಯಿಂದಾಗಿ ಕ್ಷೇತ್ರದ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.