Malenadu Mitra
ರಾಜ್ಯ ಶಿವಮೊಗ್ಗ

ಈಶ್ವರಪ್ಪರಿಗೆ ಮಾತ್ರ ಯಾಕೆ ಈ ಅನ್ಯಾಯ ?
ಕಮೀಷನ್ ಆರೋಪ ಇಡೀ ಸರಕಾರದ ಮೇಲೆ ಬಂದಿತ್ತಲ್ಲವೆ ?

ಶಿವಮೊಗ್ಗ: ಆಡಳಿತ ಪಕ್ಷ ಬಿಜೆಪಿ ಕೊನೆಗೂ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ೧೮೯ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ೫೨ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಗುಜರಾತ್ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಮುಂದಿನ ಎರಡು ದಿನಗಳಲ್ಲಿ ಉಳಿದ ೩೫ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡುವುದಾಗಿ ಆ ಪಕ್ಷದ ರಾಷ್ಟ್ರೀಯ ನಾಯಕರಾದ ಧರ್ಮೇಂದ್ರ ಪ್ರಧಾನ್ ಮತ್ತು ಅರುಣ್‌ಸಿಂಗ್ ಪ್ರಕಟಿಸಿದ್ದಾರೆ.

ಬಹುತೇಕ ಹಾಲಿ ಶಾಸಕರುಗಳಿಗೆ ಟಿಕೆಟ್ ನೀಡಿರುವ ಬಿಜೆಪಿ, ಆ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯದ ಪ್ರಭಾವಿ ಹಿಂದುಳಿದ ವರ್ಗದ ಕುರುಬ ಸಮಾಜ ಪ್ರತಿನಿಧಿಸುವ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಕ್ಷದ ನಿರ್ಧಾರದ ಸುಳಿವು ಅರಿತ ಈಶ್ವರಪ್ಪ ಅವರು, ಹೈಕಮಾಂಡ್ ಸೂಚನೆಯಂತೆ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, ತಾವು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ, ನನ್ನ ಹೆಸರನ್ನು ಎಲ್ಲಿಗೂ ಪರಿಗಣಿಸಬೇಡಿ ಎಂದು ಪತ್ರದಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.


ಈಶ್ವರಪ್ಪರಿಗೆ ಅನ್ಯಾಯ:

ಪೂರ್ಣಬಹುಮತ ಬಾರದಿದ್ದರೂ ಯಡಿಯೂರಪ್ಪ ಪರಿವಾರದ ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಲಾಯಿತು. ಯಡಿಯೂರಪ್ಪ ಅವರಿಗೂ ಪೂರ್ಣ ಅವಧಿ ಮುಖ್ಯಮಂತ್ರಿಯಾಗಲು ಬಿಡದ ಬಿಜೆಪಿ ಹೈಕಮಾಂಡ್ ಈಗ ಈಶ್ವರಪ್ಪರಿಗೂ ಅದೇ ಅನ್ಯಾಯ ಮಾಡಿದೆ. ಬಸವರಾಜ್ ಬೊಮ್ಮಾಯಿ ಸರಕಾರದ ಮೇಲೆ ೪೦% ಕಮೀಷನ್ ಆರೋಪ ಇತ್ತು. ಇದು ಇಡೀ ಸರಕಾರ ಮತ್ತು ಅದನ್ನು ಪ್ರತಿನಿಧಿಸುವ ಮಂತ್ರಿಗಳು ಹಾಗೂ ಶಾಸಕರ ಮೇಲಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇದೇ ಆರೋಪ ಮಾಡಿದ್ದರು. ಈಗ ಟಿಕೆಟ್ ಘೋಷಣೆ ಮಾಡಿರುವಲ್ಲಿ ಗೋವಿಂದಕಾರಜೋಳ ಅಂತಹ ಹಿರಿಯರು ಸೇರಿದಂತೆ ಹಲವರಿಗೆ ಟಕೆಟ್ ನೀಡಲಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತ ಇಲಾಖೆಗಳ ಸಚಿವರುಗಳಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಆದರೆ ಈಶ್ವರಪ್ಪರಿಗೆ ಮಾತ್ರ ಕಡೆಗಣನೆ ಮಾಡಲಾಗಿದೆ ಎನ್ನಲಾಗಿದೆ.
ಬೊಮ್ಮಾಯಿಗೆ ಧಿಕ್ಕಾರ:
ಈಶ್ವರಪ್ಪರಿಗೆ ಹೈಕಮಾಂಡ್ ನೀಡಿರುವ ಸೂಚನೆ ಅರಿತ ಬೆಂಬಲಿಗರು, ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪರ ವಿರುದ್ಧವೂ ಘೋಷಣೆ ಕೂಗಿದರು. ಈ ಸಂದರ್ಭ ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಇ.ಕಾಂತೇಶ್ ಅವರು ಬೆಂಬಲಿಗರನ್ನು ಸಂತೈಸಿದರು. ಈಶ್ವರಪ್ಪರ ಸೇವೆ ಮತ್ತು ಹಿರಿತನವನ್ನು ಕಡೆಗಣಿಸಿರುವ ಬಿಜೆಪಿ ಹೈಕಮಾಂಡ್ ವಿರುದ್ಧ ಅವರ ಬೆಂಬಲಿಗರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸಂಜೆ ಹೊಳೆ ಬಸ್‌ಸ್ಟಾಪ್ ಬಳಿ ಕೆಲವರು ಟೈರ್‌ಗೆ ಬೆಂಕಿಹಾಕಿ ಅಸಮಾಧಾನ ವ್ಯಕ್ತಪಡಿಸಿದರು.


ಪುತ್ರನಿಗೆ ಟಿಕೆಟ್ ಬೇಡಿಕೆ:

ಈ ಬಾರಿಯ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡದಿದ್ದಲ್ಲಿ ತಮ್ಮ ಪುತ್ರ ಕೆ.ಈ ಕಾಂತೇಶ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು.ಆದರೆ ಕುಟುಂಬದ ಯಾರಿಗೂ ಟಿಕೆಟ್ ಸಿಗುವ ಲಕ್ಷಣ ಕಾಣದಿದ್ದಾಗ ಈಶ್ವರಪ್ಪ ಚುನಾವಣಾ ರಾಜಕಿಯದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಈಶ್ವರಪ್ಪ ಅವರಿಗೆ ನೀಡಬಾರದು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಹಿರಂಗವಾಗಿಯೇ ಆಗ್ರಹಿಸಿದ್ದರು. ಒಂದು ಹೆಜ್ಜೆ ಮುಂದೆ ಹೋಗಿದ್ದ ಆಯ್ನೂರು ಮಂಜುನಾಥ್ ಚುನಾವಣೆಗೆ ಪಂಥಾಹ್ವಾನ ನೀಡಿದ್ದರು.

ಬಿಜೆಪಿ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಚುನಾವಣಾ ಸಮಿತಿ ಕೊಟ್ಟ ಕೆಲಸವನ್ನು ಮಾಡುತ್ತೇನೆ.ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಚುನಾವಣೆ ನಿವೃತ್ತಿ ಘೋಷಣೆ ಹಿಂದೆ ಯಾರ ಒತ್ತಡವೂ ಇಲ್ಲ.ನಾನು ಸ್ವಯಂ ಇಚ್ಚೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ.

ಕೆ.ಎಸ್ ಈಶ್ವರಪ್ಪ.


ಬಿಜೆಪಿ ಪಕ್ಷವು ಹಿರಿಯರಿಗೆ ನೀಡುವ ಗೌರವಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ.ಈಶ್ವರಪ್ಪ ಪಕ್ಷದ ಹಿರಿಯರಾಗಿದ್ದರೂ ಅವರನ್ನು ಅವಮಾನಿಸಲಾಗಿದೆ.ಅಡ್ವಾಣಿ,ಮುರಳಿ ಮನೋಹರ್ ಜೋಷಿ,ಯಡಿಯೂರಪ್ಪ ಸಾಲಿನಲ್ಲಿ ಈಶ್ವರಪ್ಪನವರಿಗೂ ಬಿಜೆಪಿ ಜಾಗ ಕಲ್ಪಿಸಿದೆ. ಬಳಸಿ ಬಿಸಾಡುವಲ್ಲಿ ಅದರಲ್ಲೂ ಪಕ್ಷಕ್ಕೆ ಸೇವೆ ಸಲ್ಲಿಸಿದ ಹಿರಿಯರನ್ನು ಅವಮಾನಿಸುವಲ್ಲಿ ಬಿಜೆಪಿ ಎತ್ತಿದ ಕೈ .

ಕೆ.ಬಿ ಪ್ರಸನ್ನ ಕುಮಾರ್

ಶಿಕಾರಿಪುರಕ್ಕೆ ವಿಜಯೇಂದ್ರ, ಭದ್ರಾವತಿಗೆ ರುದ್ರೇಶ್


ಟಿಕೆಟ್ ಹಂಚಿಕೆಯಲ್ಲಿ ಸ್ವಪಕ್ಷೀಯರ ವಿರೋಧ ಇದ್ದರೂ ಸಾಗರದಲ್ಲಿ ಹಾಲಪ್ಪ, ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಉಮೇದುವಾರಿಕೆ ನೀಡಲಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ್ ನಾಯ್ಕ್ ಅವರು ಅಭ್ಯರ್ಥಿಗಳಾಗಿದ್ದಾರೆ. ನಿರೀಕ್ಷೆಯಂತೆ ಶಿಕಾರಿಪುರಕ್ಕೆ ಬಿ.ವೈ.ವಿಜಯೇಂದ್ರ, ಭದ್ರಾವತಿ ಕ್ಷೇತ್ರದಲ್ಲಿ ಮಂಗೋಟೆ ರುದ್ರೇಶ್ ಅವರನ್ನು ಕಣಕ್ಕಿಳಿಸಿದ್ದು,ಶಿವಮೊಗ್ಗ ನಗರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

Ad Widget

Related posts

28 ವಿದ್ಯಾರ್ಥಿಗಳಿಗೆ 35 ಚಿನ್ನದ ಪದಕ :ಭಾರತ್ ಬಯೊಟೆಕ್ ಸಂಸ್ಥಾಪಕ ಡಾ.ಕೃಷ್ಣಮೂರ್ತಿಗೆ ಗೌರವ ಡಾಕ್ಟರೇಟ್

Malenadu Mirror Desk

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Malenadu Mirror Desk

ಶಿವಮೊಗ್ಗ ಎಫ್.ಎಂ.-90.8 ಸಮುದಾಯ ರೇಡಿಯೋ ಕೇಂದ್ರ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.