ಶಿವಮೊಗ್ಗ: ರಾಜ್ಯದಲ್ಲಿಯೇ ಪ್ರತಿಷ್ಟಿತವಾಗಿರುವ ಶಿವಮೊಗ್ಗ ನಗರ ವಿಧಾನ ಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕುತೂಹಲ ಉಳಿಸಿಕೊಂಡಿದ್ದು, ಕೊನೇ ಕ್ಷಣದವರೆಗೂ ಅದೇ ಕೌತುಕ ಮುಂದುವರಿದಿದೆ.
ಕೆ.ಎಸ್.ಈಶ್ವರಪ್ಪ ಅವರನ್ನು ಒತ್ತಾಯ ಪೂರ್ವಕವಾಗಿ ಚುನಾವಣಾ ರಾಜಕೀಯದಿಂದ ಹೊರಗೆ ಕಳಿಸಿದ ಬಿಜೆಪಿ ವರಿಷ್ಠರು ಅವರ ಪುತ್ರ ಕೆ.ಇ.ಕಾಂತೇಶ್ ಅವರಿಗೂ ಟಿಕೆಟ್ ನೀಡುವ ಸಾಧ್ಯತೆ ತೀರ ಕ್ಷೀಣವಾಗಿದೆ. ಯಡಿಯೂರಪ್ಪ ಅವರ ಇಬ್ಬರೂ ಪುತ್ರರಿಗೆ ಅವಕಾಶ ನೀಡಿರುವ ವರಿಷ್ಠರು ತಮ್ಮ ಉತ್ತರಾಧಿಕಾರಿಯಾಗಿ ಮಗನನ್ನು ಮುಂದುವರಿಸಲು ಬಿಡುತ್ತಿಲ್ಲ ಎಂಬ ಅತೃಪ್ತಿ ಈಶ್ವರಪ್ಪರಿಗಿದೆ. ಅವರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರೂ, ಸಂಘ ಪರಿವಾರದ ಕಪಿಮುಷ್ಠಿಯಲ್ಲಿರುವ ಶಿವಮೊಗ್ಗ ಅಭ್ಯರ್ಥಿ ಆಯ್ಕೆ ಈಶ್ವರಪ್ಪರಿಗೆ ಗಗನ ಕುಸುಮದಂತೆ ಕಾಣುತ್ತಿದೆ.
ಈ ನಡುವೆ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅವರ ಪುತ್ರ ಎಂ.ಬಿ.ಹರಿಕೃಷ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಆರ್.ಎಸ್.ಎಸ್ ಪ್ರಮುಖರ ಸಭಗೆ ಬಂದಿದ್ದ ಸರಸಂಘಚಾಲಕ ಮೋಹನ್ ಭಾಗವತ್ ಮತ್ತೂರು ಗ್ರಾಮಕ್ಕೂ ಭೇಟಿ ನೀಡಿದ್ದರು. ಅಂದೇ ಹರಿಕೃಷ್ಣ ಅವರಿಗೆ ಟಕೆಟ್ ನೀಡಲು ಮನವಿ ಮಾಡಲಾಗಿದೆ ಎನ್ನಲಾಗಿದೆ.
ಸಂಘಪರಿವಾರದ ಪ್ರಾಂತೀಯ ಪ್ರಮುಖರಾದ ಪಟ್ಟಾಭಿರಾಮ್ ಹಾಗೂ ಭಾನುಪ್ರಕಾಶ್ ಅವರು ಬೀಗರಾಗಿದ್ದು, ಪಟ್ಟಾಭಿ ಅವರು ಅಳಿಯನನ್ನು ಅಭ್ಯರ್ಥಿ ಮಾಡಲು ಆಸಕ್ತರಾಗಿದ್ದಾರೆ ಎನ್ನಲಾಗಿದೆ. ಇದೇ ಪರಿವಾರದ ಬಲದಿಂದಲೇ ಐದುಬಾರಿ ಶಾಸಕರಾಗಿದ್ದ ಈಶ್ವರಪ್ಪ ಅವರು, ಯಡಿಯೂರಪ್ಪ ವಿರುದ್ಧವೂ ಮಾತನಾಡುವಷ್ಟು ಶಕ್ತಿ ಬೆಳೆಸಿಕೊಂಡಿದ್ದರು. ಈಗ ಶೇ.೪೦ ಕಮೀಷನ್ ಆರೋಪ ಮುಂದಿಟ್ಟುಕೊಂಡಿರುವ ಬಿಜೆಪಿ ಹಾಗೂ ಪರಿವಾರದ ನಾಯಕರು ಈಶ್ವರಪ್ಪರನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಅಡಚಣೆ ನಡುವೆಯೂ ಈಶ್ವರಪ್ಪ ಪುತ್ರ ಕಾಂತೇಶ್ ಅವರು ಬೆಂಗಳೂರಿನಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಯೋಗಿಶ್
ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಯುವ ಮುಂದಾಳು ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಅವರ ಪುತ್ರ ಹೆಚ್.ಸಿ ಯೋಗಿಶ್ ಅವರ ಹೆಸರನ್ನು ಅಖೈರುಗೊಳಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆಯನೂರು ಮಂಜುನಾಥ್ ಅವರು ಯಾವುದೇ ಪಕ್ಷದಿಂದಲೂ ಟಿಕೆಟ್ ಸಿಗದಿದ್ದಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದಿನ್ನೂ ನಿಗೂಢವಾಗಿದೆ. ಈಶ್ವರಪ್ಪ ಕುಟುಂಬದಿಂದ ಯಾರಿಗೂ ಬಿಜೆಪಿ ಮನ್ನಣೆ ನೀಡದಿದ್ದಲ್ಲಿ ಜೆಡಿಎಸ್ ನಿಂದ ಎಂ.ಶ್ರೀಕಾಂತ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರು ಬಿಜೆಪಿಯಿಂದ ಜ್ಯೋತಿಪ್ರಕಾಶ್ ಅವರಿಗೆ ಟಕೆಟ್ ನೀಡುವ ಸಲಹೆ ನೀಡಿದ್ದಾರೆನ್ನಲಾಗಿದೆ. ಎರಡೂ ಪಕ್ಷಗಳಲ್ಲೂ ಜಾತಿ ಆಧರಿಸಿ ಟಿಕೆಟ್ ನೀಡುವ ತಂತ್ರಗಾರಿಕೆ ಇದ್ದು ಒಂದೆರಡು ದಿನಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ.
ಯಡಿಯೂರಪ್ಪ ಭೇಟಿ ಮಾಡಿದ ಕಾಂತೇಶ್
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿರುವ ಈಶ್ವರಪ್ಪ ಪುತ್ರ ಕಾಂತೇಶ್ ಅವರು, ತಮಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಕಾಂತೇಶ್ ಮನವಿ ಮಾಡಿ ಬಂದಿದ್ದಾರೆ.ಒಟ್ಟಿನಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅತ್ಯಂತ ಕುತೂಹಲ ಮೂಡಿಸಿದೆ.