Malenadu Mitra
ರಾಜ್ಯ ಶಿವಮೊಗ್ಗ

ಅದ್ದೂರಿ ಮೆರವಣಿಗೆ, ಹಲವರ ನಾಮಪತ್ರ
ನಮ್ಮದೇ ಗೆಲುವು ಎಂದ ಅಭ್ಯರ್ಥಿಗಳು

ಶಿವಮೊಗ್ಗ,ಏ.೧೮: ಮಲೆನಾಡಿನಲ್ಲಿ ಬಿಸಿಲಿನ ಕಾವಿನೊಂದಿಗೆ ಚುನಾವಣೆಯ ಕಾವು ಏರುತಿದ್ದು, ಕಾಂಗ್ರೆಸ್ ,ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಬಿಜೆಪಿಯಿಂದ ತೀರ್ಥಹಳ್ಳಿ ಅಭ್ಯರ್ಥಿ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆ.ಬಿ.ಅಶೋಕನಾಯ್ಕ ಉಮೇದುವಾರಿಕೆ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ್, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಮತ್ತು ಜೆಡಿಎಸ್‌ನ ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿ ಶಾರದಾಪೂರ್ಯಾನಾಯ್ಕ ಅವರು ನಾಮಪತ್ರ ಸಲ್ಲಿಸಿದರು.
ಆರಗ ಮೆರವಣಿಗೆ:

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಟ್ಟಣದ ಕುಶಾವತಿ ಪಾರ್ಕ್ ನಿಂದ ಐದು ಸಾವಿರಕ್ಕೂ ಹೆಚ್ಚು ಮಂದಿ ಬಿಜೆಪಿಯ ಕಾರ್ಯಕರ್ತರು, ಮುಖಂಡರೊಂದಿಗೆ ಆಗಮಿಸಿದ ಆರಗ ಜ್ಞಾನೇಂದ್ರ ತಾಲೂಕು ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ಹಿರಿಯ ಮುಖಂಡ ನಾಗರಾಜ್ ಶೆಟ್ಟಿ,ತಾ.ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಸಂದೇಶ್ ಜವಳಿ ಉಪಸ್ಥಿತರಿದ್ದರು.

ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಕ್ಷೇತ್ರದ ಜನತೆ ಈ ಬಾರಿ ಗೆಲ್ಲಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಕ್ಷೇತ್ರದ ಅಭಿವೃದ್ದಿಯನ್ನು ಗಮನಿಸಿ ಜನತೆ ನನ್ನನ್ನು ಗೆಲ್ಲಿಸುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದ ಜನತೆ ನಂಬುತ್ತಿಲ್ಲ
ಆರಗ ಜ್ಞಾನೇಂದ್ರ, ಗೃಹಸಚಿವ

ನಾಮಪತ್ರದಲ್ಲೂ ಸರಳತೆ ಮೆರೆದ ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕಿಮ್ಮನೆ ರತ್ನಾಕರ್ ಸರಳತೆಯಿಂದ ಪಕ್ಷದ ಕಛೇರಿಯಿಂದ ನಡೆದು ಬಂದು ತೀರ್ಥಹಳ್ಳಿ ತಾಲೂಕು ಕಛೇರಿಯ ಚುನಾವಣಾ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಡಾ.ಆರ್.ಎಂ.ಮಂಜುನಾಥ್ ಗೌಡ, ಜಿ.ಎಸ್ ನಾರಾಯಣ ರಾವ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್,ಮುಡುಬ ರಾಘವೇಂದ್ರ, ಜೀನಾ ವಿಕ್ಟರ್ ಡಿಸೋಜ ಉಪಸ್ಥಿತರಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೆ ನಮ್ಮ ಗುರಿಯಾಗಿದ್ದು, ರಾಜ್ಯ ಜನತೆ ಭ್ರಷ್ಡ ಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ. ಪ್ರತಿಯೊಂದನ್ನು ನಾನೇ ಅಭಿವೃದ್ದಿ ಮಾಡಿದ್ದು ಎಂದು ಸುಳ್ಳು ಹೇಳುವ ಆರಗ ಜ್ಞಾನೇಂದ್ರ ಶಿವಮೊಗ್ಗ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಯಾರ ಅವಧಿಯಲ್ಲಿ ಕೆಲಸವಾಗಿದ್ದು ಎಂಬುದನ್ನು ಸತ್ಯವಾಗಿ ಹೇಳಲಿ.

ಕಿಮ್ಮನೆ ರತ್ನಾಕರ್

ಅಶೋಕ್ ನಾಯ್ಕ್‌ಗೆ ಸಂಸದರ ಸಾಥ್


ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಬಿ.ಅಶೋಕ್ ನಾಯ್ಕ್ ಅವರು ಭಾರೀ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದು ನಾಮಪತ್ರ ಸಲ್ಲಿಸಿದರು. ಸಂಸದರಾದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್, ಟಿ.ಡಿ.ಮೇಘರಾಜ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಡಾ. ಧನಂಜಯ ಸರ್ಜಿ, ಅವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರಿಗೆ ಸಾವಿರಾರು ಕಾರ್ಯಕರ್ತರು ಶುಭಾಶಯ ಕೋರಿದರು. ಡೊಳ್ಳು ಹಾಗೂ ಚಂಡೆ ವಾದನ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಬಿಜೆಪಿಯ ಥೀಂ ಸಾಂಗ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಎತ್ತಿನ ಗಾಡಿಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಕೇಸರಿ ಶಾಲು, ಪೇಟ ಧರಿಸಿ ಬಿಜೆಪಿ ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಬೆಂಬಲ, ಜನರ ಪ್ರೀತಿ ವ್ಯಕ್ತವಾಗಿದೆ. ಸಾವಿರಾರು ಕಾರ್ಯಕರ್ತರು ಆಗಮಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂಬುದನ್ನು ತೋರಿಸಿದ್ದಾರೆ.
-ಕೆ.ಬಿ.ಅಶೋಕನಾಯ್ಕ

ಲಂಬಾಣಿ ನೃತ್ಯದೊಂದಿಗೆ ಬಂದ ಶಾರದಕ್ಕ

ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಪೂರ್‍ಯಾನಾಯ್ಕ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ರವೀಂದ್ರ ನಗರದಿಂದ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳೊಂದಿಗೆ ಅವರು ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದರು. ಅವರ ಜೊತೆಗೆ ನೂರಾರು ಲಂಬಾಣಿ ಮಹಿಳೆಯರು ವಿಶಿಷ್ಟವಾದ ರೀತಿಯ ಲಂಬಾಣಿ ನೃತ್ಯ ಮಾಡಿದರು. ಘೋಷಣೆ ಕೂಗಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಶಿವಾನಾಯ್ಕ, ಜಿಲ್ಲಾಧ್ಯಕ್ಷೆ ಗೀತಾ ನಾಗರಾಜ ಕಂಕಾರಿ, ಪಾಲಾಕ್ಷಿ, ಪುಷ್ಪಾ, ರಾಜಣ್ಣ ಹಲವರಿದ್ದರು.


ನನ್ನ ಗೆಲುವು ನಿಶ್ಚಿತ. ಗ್ರಾಮೀಣ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಈ ಬಾರಿ ಜೆಡಿಎಸ್ ಅನ್ನು ಗೆದ್ದೇ ಗೆಲ್ಲಿಸುತ್ತಾರೆ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಅದು ಜನರ ಮನಸ್ಸಿನಲ್ಲಿದೆ. ನಾನು ಗೆದ್ದು ಬಂದರೆ ಮತ್ತಷ್ಟು ಅಭಿವೃದ್ಧಿ ಮಾಡುವೆ ಎಂದರು.

  • ಶಾರದಾ ಪೂರ್‍ಯಾ ನಾಯ್ಕ
Ad Widget

Related posts

ರೆಮಿಡಿಸ್ವಿಯರ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

ತೀರ್ಥಹಳ್ಳಿ ಕ್ಷೇತ್ರದ ಗೌರವ ಉಳಿಸಲು ಆರಗ ರಾಜೀನಾಮೆ ಕೊಡಲಿ:ಕಿಮ್ಮನೆ ಆಗ್ರಹ

Malenadu Mirror Desk

ದಾರ್ಶನಿಕರ ಬಗ್ಗೆ ಶಾಲೆಗಳಲಿ ಉಪನ್ಯಾಸದ ಅಗತ್ಯವಿದೆ: ಮಧುಬಂಗಾರಪ್ಪ , ನಾರಾಯಣಗುರು,ನುಲಿಯ ಚಂದಯ್ಯ ಜಯಂತಿಯಲ್ಲಿ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.