Malenadu Mitra
ರಾಜ್ಯ ಶಿವಮೊಗ್ಗ

ಶರಾವತಿ ಸಂತ್ರಸ್ತರ ಡಿನೋಟಿಫೀಕೇಷನ್ ರದ್ದುಮಾಡಿದ್ದ ರಾಜ್ಯ ಸರಕಾರದ ಆದೇಶಕ್ಕೆ ತಡೆಯಾಜ್ಞೆ
ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಸೂಚನೆ

ಶಿವಮೊಗ್ಗ,ಏ.೧೯: ಶರಾವತಿ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಹಿಂದಿನ ಸರಕಾರ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದು ಮಾಡಿದ್ದ ರಾಜ್ಯ ಸರಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸಮಾಜಪರಿವರ್ತನಾ ಸಂಸ್ಥೆಯ ಗಿರೀಶ್ ಆಚಾರ್ಯ ಸಲ್ಲಿಸಿದ್ದ ದೂರು ಅರ್ಜಿಯನ್ನು ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್,ಶರಾವತಿ ಸಂತ್ರಸ್ತರಿಗೆ ಭೂಮಿ ನೀಡಲು ೯೯೩೩೦ ಎಕರೆ ಭೂಮಿ ಬಿಡುಗಡೆ ಮಾಡಲು ಹಿಂದಿನ ರಾಜ್ಯ ಸರಕಾರಗಳು ಹೊರಡಿಸಿದ್ದ ಸುಮಾರು ೫೬ ಡಿನೋಟಿಫೀಕೇಷನ್‌ಗಳನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಮುಳುಗಡೆ ಸಂತ್ರಸ್ತರಿಗೆ ಭೂಮಿ ಬಿಡುಗಡೆ ಮಾಡಿದ್ದ ಎಲ್ಲಾ ಅಧಿಸೂಚನೆಗಳನ್ನು ರದ್ದು ಮಾಡಿತ್ತು. ಮಾತ್ರವಲ್ಲದೆ ಈ ಸಂಬಂಧ ರಾಜ್ಯಪತ್ರವನ್ನೂ ಹೊರಡಿಸಿತ್ತು.

ರಾಜ್ಯ ಸರಕಾರದ ಈ ಆದೇಶವನ್ನು ಪ್ರಶ್ನಿಸಿ ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಎಸ್.ರಾಮಪ್ಪ ಅವರ ನೇತೃತ್ವ ಮತ್ತು ಸಹಕಾರದೊಂದಿಗೆ ಬಗರ್‌ಹುಕುಂ ಸಮಿತಿ ಮಾಜಿ ಸದಸ್ಯ ಎಂ.ಬಿ.ರಾಜಪ್ಪ, ಪ್ರಮುಖರಾದ ರಘುಪತಿ, ನಾಗರಾಜ್ ಸೇರಿದಂತೆ ೩೦೫ ಮಂದಿ ಶರಾವತಿ ಸಂತ್ರಸ್ತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸಂತ್ರಸ್ತರ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಜಸ್ಟಿಸ್ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಕೂಲಂಕಷವಾಗಿ ವಾದ ಪ್ರತಿವಾದ ಆಲಿಸಿ ರಾಜ್ಯ ಸರಕಾರದ ಆದೇಶಕ್ಕೆ ತಡೆಯಾಜ್ಞೆ ( ಅರ್ಜಿ ಸಂ. ೮೬೧೫/೨೦೨೩/ ) ನೀಡಿದೆ. ಶರಾವತಿ ಸಂತ್ರಸ್ತರಿಗೆ ನೀಡಿರುವ ಭೂಮಿಯ ಹಕ್ಕುದಾರಿಕೆಯನ್ನು ಮುಂದಿನ ಆದೇಶ ಬರುವತನಕ ರದ್ದು ಮಾಡುವುದಾಗಲಿ, ಸಾಗುವಳಿಗೆ ತೊಂದರೆ ಮಾಡುವುದಾಗಲಿ ಅಥವಾ ತೆರವು ಮಾಡುವುದಾಗಲಿ ಮಾಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈ ಆದೇಶ ಅರ್ಜಿದಾರರು ಹೊಂದಿದ್ದ ಭೂಮಿಯ ವ್ಯಾಪ್ತಿಯ ಡಿನೋಟಿಫಿಕೇಷನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ರಾಜ್ಯ ಸರಕಾರ ಶರಾವತಿ ಸಂತ್ರಸ್ತರಿಗೆ ಭೂಮಿ ಬಿಡುಗಡೆ ಮಾಡಿದ್ದ ಅಧಿಸೂಚನೆ ರದ್ದು ಮಾಡಿ ರಾಜ್ಯಪತ್ರ ಹೊರಡಿಸಿದ್ದರಿಂದ ಶಿವಮೊಗ್ಗ ಜಿಲ್ಲೆಯ ಸಮಸ್ತ ಶರಾವತಿ ಸಂತ್ರಸ್ತರು ಆತಂಕದಲ್ಲಿ ದಿನದೂಕುತಿದ್ದರು. ಸರಕಾರಕ್ಕೆ ಬೆಳಕು ನೀಡಲು ಸರ್ವತ್ಯಾಗ ಮಾಡಿದ್ದ ಸಂತ್ರಸ್ತರನ್ನು ಬೀದಿಗೆ ಹಾಕುವಂತೆ ಮಾಡಿದ್ದ ರಾಜ್ಯ ಸರಕಾರದ ವಿರುದ್ಧ ಮಲೆನಾಡಿನಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿರೋಧ ಉಂಟಾಗುತ್ತಿದ್ದಂತೆ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳು ಭಾರೀ ಭರವಸೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹದಿನೈದು ದಿನದಲ್ಲಿ ಭೂಮಿ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಯಾವುದೇ ಪ್ರಯತ್ನಗಳು ಫಲ ನೀಡಿರಲಿಲ್ಲ.

೩೦೫ ಶರಾವತಿ ಸಂತ್ರಸ್ತರು ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ ಮಾರ್ಗದರ್ಶನದಲ್ಲಿ ನ್ಯಾಯಾಂಗ ಹೋರಾಟ ಆರಂಭಿಸಿದ್ದರು. ಇದರ ಫಲವಾಗಿ ಬುಧವಾರ ಉಚ್ಚ ನ್ಯಾಯಾಲಯ ರಾಜ್ಯ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಸಂತ್ರಸ್ತರ ಪರವಾಗಿ ಹೆಚ್ ದಯಾನಂದಸರಸ್ವತಿ, ರವಿ ಹೆಚ್.ಕೆ. ಅವರ ಹಿರಿಯ ವಕೀಲರ ತಂಡ ವಾದ ಮಂಡಿಸಿತ್ತು.

ಶರಾವತಿ ಸಂತ್ರಸ್ತರಪರವಾದ ನ್ಯಾಯಾಂಗ ಹೋರಾಟಕ್ಕೆ ತಾತ್ಕಾಲಿಕ ಜಯಸಿಕ್ಕಿರುವುದು ಸಂತೋಷವಾಗಿದೆ. ಸಂತ್ರಸ್ತರ ಪಾಲಿಗೆ ಮರಣಶಾಸನದಂತಿದ್ದ ಡಿನೋಟಿಫೀಕೇಷನ್ ರದ್ದು ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದೆ. ಮುಂದಿನ ಆದೇಶದವರೆಗೆ ಸಂತ್ರಸ್ತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಘನ ನ್ಯಾಯಾಲಯ ಆದೇಶ ನೀಡಿದೆ. ಮುಂದೆ ಸಂತ್ರಸ್ತ ಅಮಾಯಕ ರೈತರ ಪರ ಹೋರಾಟ ಮುಂದುವರಿಸಲಾಗುವುದು

ಡಾ.ಎಸ್.ರಾಮಪ್ಪ, ಧರ್ಮದರ್ಶಿ, ಶ್ರೀ ಕ್ಷೇತ್ರ ಸಿಗಂದೂರು

ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ. ಉಳಿದ ಸಂತ್ರಸ್ತರ ಪರವಾಗಿಯೂ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದು. ನಾಡಿಗೆ ಬೆಳಕು ಕೊಟ್ಟು ಕಣ್ಣು ಕಳೆದುಕೊಂಡ ಶರಾವತಿ ಸಂತ್ರಸ್ತರು ಈ ಆದೇಶದಿಂದ ನಿರಾಳರಾಗಿದ್ದಾರೆ.

ಎಂ.ಬಿ.ರಾಜಪ್ಪ

Ad Widget

Related posts

ಚಿತ್ರಕಾರನ ರೇಖೆ ಅಳಿಸಿದ ಕ್ರೂರ ಕೊರೊನ, ಅಪ್ಪ ಅಗಲಿದ ವಾರದೊಳಗೇ ಮಗನನ್ನೂ ಕರೆದೊಯ್ದ ಮೃತ್ಯು

Malenadu Mirror Desk

‘ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ’: ಬಿವೈಆರ್

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್‍ನಲ್ಲೇ ಖೇಲೋ ಇಂಡಿಯಾ, ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ ಸಂಸದ ರಾಘವೇಂದ್ರ ಅವರ ಮನವರಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.